Lok Sabha Election: ರಾಜಕೀಯ ಶಕ್ತಿ ಕೇಂದ್ರವಾದ ಮೈಸೂರು, ನಾಮಿನೇಷನ್ ವೇಳೆ ಸಿಎಂ, ಮಾಜಿ ಸಿಎಂಗಳ ಸಹಿತ ದಿಗ್ಗಜರ ಸಮಾಗಮ!
ಮೈಸೂರು: ಲೋಕಸಭಾ ಚುನಾವಣೆಯ (Lok Sabha Election 2024) ಕಾವು ದೇಶಾದ್ಯಂತ ರಂಗೇರುತ್ತಿದೆ. ದಿನದಿಂದ ದಿನಕ್ಕೆ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ, ಮತದಾರರನ್ನು ಓಲೈಸಲು ಮಾಡುವ ರಂಗಿನಾಟ ಮೆರುಗು ಪಡೆಯುತ್ತಿದೆ. ಇದರ ಜೊತೆಗೆ ನಾಮಿನೇಷನ್ (Nomination Process) ಅಬ್ಬರವೂ ಜೋರಾಗಿಯೇ ನಡೆಯುತ್ತಿದ್ದು, ಇದು ಬಲಪ್ರದರ್ಶನಕ್ಕೂ ವೇದಿಕೆಯಾಗಿದೆ.
ಇತ್ತ ರಾಜ್ಯದ ರಾಜಕೀಯ ಸನ್ನಿವೇಶವನ್ನು ಗಮನಿಸುವುದಾದರೆ ಸಾಂಸ್ಕೃತಿಕ ನಗರಿ ಮೈಸೂರು ಇಂದು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಾಡು ಆಗಿದೆ. ರಾಜಕೀಯ ನಾಯಕರ ಸಮಾಗಮಕ್ಕೆ ಅರಮನೆ ನಗರಿ ಮೈಸೂರು ಸಾಕ್ಷಿಯಾಗಲಿದ್ದು, ಮುಖ್ಯಮಂತ್ರಿ, ಡಿಸಿಎಂ, ಮಾಜಿ ಸಿಎಂಗಳು, ರಾಜ್ಯಾಧ್ಯಕ್ಷರುಗಳು, ಸಚಿವರು, ಮಾಜಿ ಸಚಿವರುಗಳ ಸಮಾಗಮಕ್ಕೆ ಮೈಸೂರು ವೇದಿಕೆಯಾಗಲಿದೆ.
ಹೌದು.. ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಎರಡೂ ಕಡೆಯಿಂದಲೂ ಬಲಪ್ರದರ್ಶನಕ್ಕೆ ಪ್ಲಾನ್ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬೆಳಿಗ್ಗೆ 10.30ಕ್ಕೆ ಅರಮನೆ ಕೋಟೆ ಅಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ನೂತನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಕೆ ವೇಳೆ ಅವರಿಗೆ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಚಿವ ಅಶ್ವಥ್ ನಾರಾಯಣ್, ಯದುವೀರ್ ತಾಯಿ ಪ್ರಮೋದಾ ದೇವಿ ಒಡೆಯರ್, ಸಂಸದ ಪ್ರತಾಪ್ ಸಿಂಹ, ಪ್ರೀತಮ್ ಗೌಡ ಯದುವೀರ್‌ಗೆ ಸಾಥ್ ನೀಡಲಿದ್ದಾರೆ.
ಮತ್ತೊಂದೆಡೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಕೂಡ ಇಂದೇ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮಧ್ಯಾಹ್ನ 2.30ಕ್ಕೆ ನಾಮಪತ್ರ ಸಲ್ಲಿಕೆ ಮಾಡಲು ಸಮಯಾವಕಾಶ ನೀಡಲಾಗಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮಧ್ಯಾಹ್ನ 1 ಗಂಟೆಗೆ ಯರಗನಹಳ್ಳಿ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ್, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸಹಿತ ಮೈಸೂರು ಕೊಡಗು ಭಾಗದ ಸಚಿವರು, ಶಾಸಕರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಸಾಥ್ ನೀಡಲಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಬ್ಬರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆ ನೆಪದಲ್ಲಿ ವಿ ಸೋಮಣ್ಣ ಶಕ್ತಿ ಪ್ರದರ್ಶನ
ಇತ್ತ ತುಮಕೂರು ಲೋಕಸಭಾ ಕ್ಷೇತ್ರ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ವಿಶೇಷ ಅಂದ್ರೆ ನಾಮಪತ್ರ ಸಲ್ಲಿಕೆ ನೆಪದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಇಂದು ತುಮಕೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದು, ಬೃಹತ್ ರ್ಯಾಲಿ ಮೂಲಕ ಮತದಾರರನ್ನು ಸೆಳೆಯುವುದು ಮಾತ್ರವಲ್ಲದೇ, ವಿರೋಧಿಗಳಿಗೂ ಶಕ್ತಿ ಪ್ರದರ್ಶನ ಮೂಲಕ ಸಂದೇಶ ರವಾನಿಸಲಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿರುವ ವಿ ಸೋಮಣ್ಣ ಇಂದು ಬೆಳಗ್ಗೆ 11 ಗಂಟೆಗೆ ತುಮಕೂರಿನ ವಿನಾಯಕ ನಗರದ ಗಣಪತಿ ಮತ್ತು ಅರ್ಧನಾರೀಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಬಳಿಕ ಗಣಪತಿ ದೇವಸ್ಥಾನದಿಂದ ಟೌನ್ ಹಾಲ್ ಸರ್ಕಲ್, ಅಶೋಕ ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಲಿದ್ದಾರೆ.
ಮಧ್ಯಾಹ್ನ 1:30ಕ್ಕೆ ಸರಿಯಾಗಿ ವಿ ಸೋಮಣ್ಣ ನಾಮಪತ್ರ ಸಲ್ಲಿಸಲಿದ್ದು, ಈ ರ್ಯಾಲಿಯಲ್ಲಿ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಸಚಿವ ಗೋಪಾಲಯ್ಯ, ಬಿಸಿ ನಾಗೇಶ್, ಸಂಸದ ಜಿಎಸ್ ಬಸವರಾಜು, ಶಾಸಕ ಸುರೇಶ್ ಗೌಡ, ಜಿ.ಬಿ ಜ್ಯೋತಿ ಗಣೇಶ್, ಸುರೇಶ್ ಬಾಬು, ಎಂ.ಟಿ ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಮ್, ಸುಧಕರ್ ಲಾಲ್, ವೀರಭದ್ರಯ್ಯ, ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.ತುಮಕೂರು ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿರುವ ವಿ ಸೋಮಣ್ಣ ಇಂದು ನಡೆಸಲಿರುವ ಶಕ್ತಿಪ್ರದರ್ಶನ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ವಿಶೇಷ ಅಂದ್ರೆ ಸೋಮಣ್ಣಗೆ ಟಿಕೆಟ್ ನೀಡಲು ವಿರೋಧಿಸಿ ಬಂಡಾಯವೆದ್ದಿರುವ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಸಹಿತ ರೆಬೆಲ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ.