17 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್: ಅಪ್ಪನ ಕರ್ಮಭೂಮಿಯಲ್ಲಿ ಶರ್ಮಿಳಾ ಅದೃಷ್ಟ ಪರೀಕ್ಷೆ

ಹೈಲೈಟ್ಸ್‌:

  • ಲೋಕಸಭೆ ಚುನಾವಣೆಗೆ ಮಂಗಳವಾರ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
  • ಆಂಧ್ರ ಪ್ರದೇಶದ ಕಡಪ ಲೋಕಸಭೆ ಕ್ಷೇತ್ರದಿಂದ ರಾಜ್ಯ ಘಟಕದ ಅಧ್ಯಕ್ಷೆ ವೈಎಸ್ ಶರ್ಮಿಳಾ
  • ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ವಿರುದ್ಧ ಸಿಎಂ ಪಿಣರಾಯಿ ಆಕ್ರೋಶ

ಅಮರಾವತಿ: ಆಂಧ್ರಪ್ರದೇಶದ ಐದು ಸೇರಿದಂತೆ ನಾಲ್ಕು ರಾಜ್ಯಗಳ 17 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಮಂಗಳವಾರ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಮಾಜಿ ಸಿಎಂ ರಾಜಶೇಖರ್‌ ರೆಡ್ಡಿ ಪುತ್ರಿ ಹಾಗೂ ಎಪಿಸಿಸಿ ಅಧ್ಯಕ್ಷೆ ವೈ.ಎಸ್‌ ಶರ್ಮಿಳಾ ಅವರನ್ನು ಕಡಪಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಆಂಧ್ರಪ್ರದೇಶ ಅಭ್ಯರ್ಥಿಗಳು

ಕಾಕಿನಾಡಾ: ಎಂ.ಎಂ. ಪಲ್ಲಂ ರಾಜು
ರಾಜಮಂಡ್ರಿ: ಗಿಡುಗ ರುದ್ರರಾಜು
ಬಾಪಟ್ಲಾ: ಜೆ.ಡಿ.ಸೀಲಂ
ಕರ್ನೂಲ್‌: ಪಿ.ಜಿ.ರಾಂಪುಲ್ಲಯ್ಯ ಯಾದವ್‌
ಕಡಪಾ: ವೈ.ಎಸ್‌.ಶರ್ಮಿಳಾ ರೆಡ್ಡಿ

ಬಿಹಾರದಲ್ಲಿ ಅಭ್ಯರ್ಥಿಗಳು

ಕಿಶನ್‌ಗಂಜ್: ಮೊಹಮ್ಮದ್ ಜಾವೇದ್
ಕತಿಹಾರ್: ತಾರೀಕ್ ಅನ್ವರ್
ಭಾಗಲ್ಪುರ: ಅಜೀತ್ ಶರ್ಮಾ

ಲೋಕ ಅಖಾಡಕ್ಕೆ ಆಜಾದ್‌

ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಗುಲಾಂ ನಬಿ ಆಜಾದ್‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿಸ್ಪರ್ಧೆಗೆ ಸಜ್ಜಾಗಿದ್ದಾರೆ.

ಡೆಮಾಕ್ರೆಟಿಕ್‌ ಪ್ರೊಗ್ರೆಸ್ಸಿವ್‌ ಆಜಾದ್‌ ಪಕ್ಷದ ಮುಖ್ಯಸ್ಥರಾಗಿರುವ ಗುಲಾಂ ನಬಿ ಆಜಾದ್‌ ಅವರು ಕಣಿವೆ ರಾಜ್ಯದ ಅನಂತ್‌ನಾಗ್‌-ರಜೌರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ರಾಹುಲ್‌ ವಿರುದ್ಧ ಪಿಣರಾಯಿ ಕಿಡಿ

ಕೇರಳದಲ್ಲಿ ಎಡ ಪಕ್ಷಗಳು ಹಾಗೂ ಕಾಂಗ್ರೆಸ್‌ ನಡುವೆ ಮಾತಿನ ಚಕಮಕಿ ಮುಂದುವರಿದಿದೆ.

ವಯನಾಡು ಕ್ಷೇತ್ರದಲ್ಲಿ ಎಡ ಪಕ್ಷಗಳ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌, ”ಐಎನ್‌ಡಿಐಎ’ ಮೈತ್ರಿಯ ಪಕ್ಷದ ಅಭ್ಯರ್ಥಿ ವಿರುದ್ಧವೇ ಕಣಕ್ಕಿಳಿದಿರುವ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕರು ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಸೋಲಿಸುವುದಕ್ಕಿಂತ ಎಡ ಪಕ್ಷದ ಅಭ್ಯರ್ಥಿಗೆ ಸವಾಲಾಗಿದ್ದಾರೆ. ಇದು ಕಾಂಗ್ರೆಸ್‌ನ ಇಬ್ಬಗೆಯ ನೀತಿಯಾಗಿದೆ,” ಎಂದು ವಾಗ್ದಾಳಿ ನಡೆಸಿದರು.

‘ಐಎನ್‌ಡಿಐಎ’ಗೆ ಕೊನೆ ಗಡುವು

ಪ್ರತಿಪಕ್ಷಗಳ ಮೈತ್ರಿಗೆ ‘ಐಎನ್‌ಡಿಐಎ’ ಹೆಸರಿಟ್ಟಿರುವ ಕ್ರಮ ಪ್ರಶ್ನಿಸಿದ ಅರ್ಜಿಗೆ ಉತ್ತರಿಸುವಂತೆ ಮೈತ್ರಿ ನಾಯಕರು ಹಾಗೂ ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್‌ ಕೊನೆಯ ಅವಕಾಶ ನೀಡಿದೆ.

ರಾಜಕೀಯ ಗುಂಪುಗಳು ‘ಐಎನ್‌ಡಿಐಎ’ ಎಂದು ಹೆಸರು ಇಟ್ಟುಕೊಳ್ಳುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾ. ಮನಮೋಹನ್‌ ಹಾಗೂ ನ್ಯಾ. ಮನ್ಮೀತ್‌ ಪ್ರಿತಂಸಿಂಗ್‌ ಅರೋರಾ ಅವರಿದ್ದ ಪೀಠ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಏ 10 ರೊಳಗೆ ಪ್ರತಿಕ್ರಿಯೆ ನೀಡಬೇಕು. ಇಲ್ಲವಾದಲ್ಲಿ ಅರ್ಜಿ ಇತ್ಯರ್ಥಗೊಳಿಸಿ, ಆದೇಶ ನೀಡಲಾಗುವುದು ಎಂದು ಮೈತ್ರಿ ನಾಯಕರು ಮತ್ತು ಕೇಂದ್ರಕ್ಕೆ ತಾಕೀತು ಮಾಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *