Siddaramaiah: ಸೊಂಟದಲ್ಲಿ ಗನ್ ಇಟ್ಕೊಂಡು ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ! ಸಿಎಂ ಪ್ರಚಾರದ ವೇಳೆ ಭದ್ರತಾ ಲೋಪ
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ (Bengaluru South constituency) ಭರ್ಜರಿ ಪ್ರಚಾರ ನಡೆಸಿದ್ದರು. ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ (Congress candidate) ಸೌಮ್ಯಾ ರೆಡ್ಡಿ (Soumya Reddy) ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ (Mansoor Ali Khan) ಪರ ಸಿಎಂ ಮತಯಾಚನೆ ಮಾಡಿದ್ರು. ಈ ವೇಳೆ ಭದ್ರತಾ ವೈಫಲ್ಯವಾಗಿದೆ. ಭೈರಸಂದ್ರದಲ್ಲಿ (Bhairasandra) ಸಿಎಂ ಪ್ರಚಾರ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ತನ್ನ ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು, ಸಿಎಂ ಇದ್ದ ವಾಹನ ಏರಿದ್ದಾನೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಾನೆ. ಈ ವೇಳೆ ಗನ್ ಆತನ ಸೊಂಟದಲ್ಲಿ ಕಾಣಿಸಿದೆ!
ಸಿಎಂ ಪ್ರಚಾರದ ವೇಳೆ ಗನ್ ತಂದ ವ್ಯಕ್ತಿ
ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗನ್ ತಂದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಭೈರಸಂದ್ರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.
ಗನ್ ಇಟ್ಟುಕೊಂಡೆ ಸಿಎಂಗೆ ಹಾರ ಹಾಕಿದ ವ್ಯಕ್ತಿ
ಸೊಂಟದಲ್ಲಿ ಗನ್ ಇಟ್ಟುಕೊಂಡ ವ್ಯಕ್ತಿಯೊಬ್ಬ ಬಂದು ಪ್ರಚಾರದ ಕ್ಯಾಂಟರ್ ಏರಿ, ಸಿಎಂಗೆ ಹಾರ ಹಾಕಿದ್ದಾನೆ. ಬಿಳಿ ಡ್ರೆಸ್ ಹಾಕಿಕೊಂಡು, ಕುತ್ತಿಗೆಗೆ ಕಾಂಗ್ರೆಸ್ ಶಾಲು ಸುತ್ತಿಕೊಂಡ ವ್ಯಕ್ತಿ, ತನ್ನ ಸೊಂಟಕ್ಕೆ ಗನ್ ಇಟ್ಟಕೊಂಡಿದ್ದ.
ಸಿಎಂ ಪ್ರಚಾರದ ವೇಳೆಯೇ ಭದ್ರತಾ ಲೋಪ?
ಮೇಲ್ನೋಟಕ್ಕೆ ಸಿಎಂ ಪ್ರಚಾರ ವೇಳೆ ಭದ್ರತಾ ಲೋಪವಾಗಿರೋದು ಕಂಡು ಬಂದಿದೆ. ಸಿಎಂ ಕ್ಯಾಂಟರ್ ಏರಿದ್ದ ವ್ಯಕ್ತಿ ಬಳಿ ಗನ್ ಇದ್ದರೂ ಪೊಲೀಸರು ಆತನನ್ನು ಗಮನಿಸಿಲ್ವಾ ಎಂಬ ಪ್ರಶ್ನೆ ಮೂಡಿದೆ. ಎಲ್ಲರಿಗೂ ಕಾಣುವಂತೆ ಆತ ಸೊಂಟದಲ್ಲಿ ಗನ್ ಸಿಕ್ಕಿಸಿಕೊಂಡಿದ್ದರೂ ಅದು ಪೊಲೀಸರಿಗೆ ಕಾಣಿಸಲಿಲ್ವಾ ಎಂಬ ಪ್ರಶ್ನೆಯೂ ಮೂಡಿದೆ. ಇನ್ನು ಹಾರ ಹಾಕಿದ ವ್ಯಕ್ತಿ, ಬಳಿಕ ಅಲ್ಲಿಂದ ತೆರಳಿದ್ದಾನೆ.
ಗನ್ ಇಟ್ಟುಕೊಂಡು ಹಾರ ಹಾಕಿದ ವ್ಯಕ್ತಿ ಯಾರು?
ಇನ್ನು ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಅಂತ ಗುರುತಿಸಲಾಗಿದೆ. ಈಗ ಬೆಂಗಳೂರಿನ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಸುಮಾರು 25 ವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾನೆ.
ಈ ಬಗ್ಗೆ ರಿಯಾಜ್ ಹೇಳಿದ್ದೇನು?
ಇನ್ನು ಘಟನೆ ಕುರಿತಂತೆ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ರಿಯಾಜ್, ಈ ಹಿಂದೆ ನನ್ನ ಮೇಲೆ ದಾಳಿಯಾಗಿತ್ತು. ಆಗ ಪರವಾನಗಿ ಪಡೆದು ಗನ್ ಇಟ್ಟುಕೊಂಡಿದ್ದೆ. ನಾನು ಸಿದ್ದರಾಮಯ್ಯ ಅವರ ಅಭಿಮಾನಿ ಅಂತ ಹೇಳಿದ್ದಾನೆ.
ಇದು ಭದ್ರತಾ ವೈಫಲ್ಯ ಎಂದ ವಿಪಕ್ಷ ನಾಯಕ
ಇನ್ನು ಘಟನೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಳಿ ಯಾರು ಬೇಕಾದ್ರೂ ಹೋಗಬಹುದು. ಆದರೆ ಗನ್ ಹಿಡಿದುಕೊಂಡು, ಹೂಮಾಲೆ ಹಾಕೋಕೆ ಹೋಗ್ತಾರೆ ಅಂದ್ರೆ? ಇದು ಭದ್ರತಾ ವೈಫಲ್ಯತೆ ಆಗಿದೆ. ಚುನಾವಣಾ ನೀತಿ ಸಂಹಿತಿ ಎಲ್ಲಿದೆ? ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ ಅಂತ ಹೇಳಿದ್ದಾರೆ.