ಲೋಕ್‌ ಪೋಲ್‌ ಸಮೀಕ್ಷೆ : ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಗೆಲುವು; ಕ್ಲೀನ್‌ ಸ್ವೀಪ್‌ ಕನಸು ಕಾಣ್ತಿದ್ದ ಬಿಜೆಪಿ – ಜೆಡಿಎಸ್‌ಗೆ ಶಾಕ್‌!

ಹೈಲೈಟ್ಸ್‌:

  • ಕರ್ನಾಟಕ ಲೋಕಸಭಾ ಚುನಾವಣೆಯ ಲೋಕ್‌ ಪೋಲ್‌ ಸಮೀಕ್ಷೆ
  • ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಗೆಲುವು
  • ರಾಜ್ಯದಲ್ಲಿ ಕ್ಲೀನ್‌ ಸ್ವೀಪ್‌ ಕನಸು ಕಾಣ್ತಿದ್ದ ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಶಾಕ್‌!

ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೆ ಕೇವಲ 13 ದಿನ ಮಾತ್ರ ಬಾಕಿಯಿದೆ. ರಾಜ್ಯದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಿಜೆಪಿ – ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಲೋಕ್‌ ಪೋಲ್‌ ಸಮೀಕ್ಷೆ ಬಿಡುಗಡೆಯಾಗಿದ್ದು, 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಸಮೀಕ್ಷೆಯ ಫಲಿತಾಂಶದಿಂದ ಶಾಕ್‌ ಆಗಿದೆ. ಈ ಸಮೀಕ್ಷೆಯಿಂದ ಆಡಳಿತಾರೂಢ ಕಾಂಗ್ರೆಸ್‌ ನಾಯಕರು ಖುಷ್‌ ಆಗಿದ್ದಾರೆ.

ಕಳೆದ ಬಾರಿಗಿಂತ ಸುಮಾರು 10ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಭವಿಷ್ಯ ನುಡಿದಿದ್ದು, ಕಾಂಗ್ರೆಸ್‌ ಹತ್ತಿರತ್ತಿರ 20 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಈಗಲೇ ಚುನಾವಣೆ ನಡೆದರೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ 11 ರಿಂದ 13 ಕ್ಷೇತ್ರಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್‌ 15 ರಿಂದ 17 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಹೇಳಿದೆ.

15 ದಿನದ ಹಿಂದೆ ಪ್ರಕಟವಾಗಿದ್ದ ಇದೇ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗಿತ್ತು. ಬಿಜೆಪಿ 10 ರಿಂದ 12 ಕ್ಷೇತ್ರಗಳಲ್ಲಿ, ಜೆಡಿಎಸ್‌ 1 ರಿಂದ 2 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿತ್ತು. ಈಗ ಮತ್ತೆ ಅನೇಕ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಿದ್ದು, ಲೋಕ್‌ ಪೋಲ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ. ಪ್ರತಿ ಕ್ಷೇತ್ರದಲ್ಲಿಯೂ 1350 ಜನರ ಪ್ರತಿಕ್ರಿಯೆಯನ್ನು ಪಡೆದು ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳು!

ಸಮೀಕ್ಷೆಯ ವೇಳೆ ಹಲವು ವಿಚಾರಗಳು ಗಮನಕ್ಕೆ ಬಂದಿವೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ತನ್ನ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿದೆ. ಪ್ರಮುಖವಾಗಿ ನಿರುದ್ಯೋಗ, ಹಣದುಬ್ಬರ, ಪ್ರಧಾನಿ ಅಭ್ಯರ್ಥಿ, ಕಲ್ಯಾಣ ಯೋಜನೆಗಳು ಮತ್ತು ಕನ್ನಡ ಅಭಿಮಾನದ ಐದು ವಿಷಯಗಳನ್ನು ಜನರು ಮುಖ್ಯವಾಗಿ ಗಮನಿಸಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್‌ ಪರ ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ ಎಂದು ಸಮೀಕ್ಷೆ ಹೇಳಿದೆ.

ಸದಾನಂದ ಗೌಡ ಹಾಗೂ ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌ ಆಗಿದ್ದರಿಂದ ಒಕ್ಕಲಿಗ ಮತಗಳು ಕಾಂಗ್ರೆಸ್‌ ಕಡೆ ವಾಲಿವೆ, ಹಲವು ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿಯಲ್ಲಿ ಹೊಂದಾಣಿಕೆ ಕೊರತೆಯಿಂದ ಜೆಡಿಎಸ್‌ ನಾಯಕರು ಬಿಜೆಪಿ ಪರ ಕೆಲಸ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ಚಾಮರಾಜನಗರ, ರಾಯಚೂರಿನಲ್ಲಿ ಜೆಡಿಎಸ್‌ ಉತ್ತಮ ಸಂಘಟನೆ ಹೊಂದಿದ್ದು, ಅಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಇದರಿಂದ ಬಿಜೆಪಿಗೆ ಹೊಡೆತ ಎನ್ನಲಾಗಿದೆ. ಇನ್ನು, ಅಹಿಂದ ಮತದಾರರು ಕಾಂಗ್ರೆಸ್‌ ಪರ ಇದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಆಂತರಿಕ ಅಸಮಾಧಾನ ಹೊಡೆತ ಕೊಡಲಿದೆ ಎಂದು ಲೋಕ್‌ ಪೋಲ್‌ ಸಮೀಕ್ಷೆ ಹೇಳಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *