ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ..!

ಬೆಂಗಳೂರು, ಏ.16- ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (81) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.1942ರ ಆಗಸ್ಟ್ 19ರಂದು ಶಾಮರಾವ್-ಜಯಮ್ಮ ದಂಪತಿ ಪುತ್ರನಾಗಿ ಮೈಸೂರಿನ ಹುಣಸೂರಿನಲ್ಲಿ ಜನಿಸಿದ ಅವರು 1963ರಲ್ಲಿ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು.

1966ರಲ್ಲಿ ಡಾ.ರಾಜ್‍ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಅಧ್ಯಾಯ ಬರೆದಿದ್ದರು. ಚಿತ್ರರಂಗದಲ್ಲಿ ಅವರು ಹಲವಾರು ಏಳುಬೀಳುಗಳನ್ನು ಕಂಡು ದಾಖಲೆಗಳನ್ನೇ ನಿರ್ಮಿಸಿದ್ದರು. ಇಂದು ಬೆಳಗ್ಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ರವಿಚಂದ್ರನ್ ಸೇರಿದಂತೆ ಬಹುತೇಕ ಎಲ್ಲ ಸ್ಟಾರ್ ನಟರ ಚಿತ್ರಗಳನ್ನು ನಿರ್ಮಿಸುವ ಮೂಲಕ ಅಂದಿನ ದಿನಗಳಲ್ಲೇ ವಿದೇಶಗಳಲ್ಲಿ ಚಿತ್ರೀಕರಣ ನಡೆಸಿ ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದರು.

ಗುರು-ಶಿಷ್ಯರು, ಕಳ್ಳ ಕುಳ್ಳ, ಆಪ್ತಮಿತ್ರ, ಕುಳ್ಳ ಏಜೆಂಟ್ 000, ಬ್ರಹ್ಮಗಂಡು ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಿಸಿದ್ದರು. ದ್ವಾರಕೀಶ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದ್ದು, ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಅವರ ಮನೆಗೆ ದೌಡಾಯಿಸಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *