Rain Alert: 9ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ, ಕರ್ನಾಟಕದಲ್ಲಿ 50KM ವೇಗದಲ್ಲಿ ಬಿರುಗಾಳಿ ಸಾಧ್ಯತೆ!

ದೇಶದಲ್ಲಿ ದಿನದಿಂದ ದಿನಕ್ಕೆ ಹವಾಮಾನದಲ್ಲಿ ವೈಪರೀತ್ಯ ಕಂಡು ಬರುತ್ತಿದ್ದು, ದೇಶದ ಪೂರ್ವದಿಂದ ಉತ್ತರ ಮತ್ತು ದಕ್ಷಿಣದಿಂದ ಪಶ್ಚಿಮ ಭಾಗದವರೆಗೆ ಬಿಸಿ ಶಾಖದ ಅನುಭವವಾಗುತ್ತಿದೆ. ಈತನ್ಮಧ್ಯೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದೆ.

ಏಪ್ರಿಲ್ ಮುಗಿಯುವ ಮೊದಲೇ ಹವಾಮಾನವು ತನ್ನ ವರ್ತನೆಯನ್ನು ತೋರಿಸಲು ಪ್ರಾರಂಭಿಸಿದೆ. ಯುಪಿ-ಬಿಹಾರದಿಂದ ಒಡಿಶಾದವರೆಗೆ ವಿಪರೀತ ಶಾಖವು ಜನರನ್ನು ಹೈರಾಣಾಗಿಸಲು ಪ್ರಾರಂಭಿಸಿದೆ. ಆದರೆ, ದೆಹಲಿ-ಎನ್ಸಿಆರ್ನಲ್ಲಿ ಮೋಡವು ಆಟವಾಡುತ್ತಿದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಉಷ್ಣ ಅಲೆಯ ವಾತಾವರಣ ಕಂಡುಬರಲಿದೆ ಎಂದು ಐಎಂಡಿ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಮುಂಬೈ ಮತ್ತು ಹಲವು ರಾಜ್ಯಗಳಿಗೆ IMD ಹೀಟ್ ವೇವ್ ಎಚ್ಚರಿಕೆ ನೀಡಿದ್ದು, ಆದರೆ ದೆಹಲಿ ಮಾತ್ರ ಮುಂದಿನ ಕೆಲವು ದಿನಗಳವರೆಗೆ ವಿಪರೀತ ತಾಪಮಾನದಿಂದ ಮುಕ್ತಿ ಪಡೆಯಲಿದೆ.

ಭಾರತದ ಹವಾಮಾನ ಇಲಾಖೆ (IMD) ಮುಂದಿನ ಕೆಲವು ದಿನಗಳಲ್ಲಿ ಆರು ರಾಜ್ಯಗಳಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮತ್ತು ಉತ್ತರ ಭಾರತದ ಎಂಟು ರಾಜ್ಯಗಳಲ್ಲಿ ಮಳೆಯ ಚಟುವಟಿಕೆಯ ಬಗ್ಗೆ ಭವಿಷ್ಯ ನುಡಿದಿದೆ. IMD ಏಪ್ರಿಲ್ 21 ರವರೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಖದ ಅಲೆಯ ಮುನ್ಸೂಚನೆ ನೀಡಿದರೆ, ಮುಂದಿನ ಮೂರು ದಿನಗಳವರೆಗೆ, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿಯಲ್ಲಿ ಬಿಸಿಗಾಳಿಯನ್ನು ಕಾಣಬಹುದು.

ಇಂದು ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್ನಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಸಂಬಂಧಿತ ವೆಬ್ಸೈಟ್ ಸ್ಕೈಮೆಟ್ ವೆದರ್ ಹೇಳಿದೆ. ಇಷ್ಟು ಮಾತ್ರವಲ್ಲದೆ ಇಂದು ಮತ್ತು ನಾಳೆ ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಲಘು ಮಳೆಯಾಗುವ ಸಾಧ್ಯತೆಯೂ ಇದೆ. ಏಪ್ರಿಲ್ 19 ರಂದು ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಲವೊಮ್ಮೆ ಮಳೆಯಾಗಬಹುದು.

ಇನ್ನು ಸದ್ಯದ ಪರಿಸ್ಥಿತಿ ಪ್ರಕಾರ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಮೋಡ ಮುಸಕಿದ ವಾತಾವರಣ ಕಾಣಿಸಿಕೊಂಡಿದ್ದು, ಆದರೆ ಮಳೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಇದೇ ಪರಿಸ್ಥಿತಿ ಬೆಂಗಳೂರಿನಲ್ಲಿ ಕಂಡು ಬಂದಿದೆ. ನಿನ್ನೆ ಮಾತ್ರ ಬೆಂಗಳೂರಿನಲ್ಲಿ ತಡೆದುಕೊಳ್ಳಲಾರದಷ್ಟು ಬಿಸಿಯಾದ ಬಿಸಿಲು ಉಂಟಾಗಿತ್ತು.

ನಿನ್ನೆ ರಾಜ್ಯದ 17 ಜಿಲ್ಲೆಗಳಲ್ಲಿ ಮಳೆಯಾಗಿತ್ತು. ನಿನ್ನೆ ಸುರಿದ ಮಳೆಯ ವಿವರ ಹೀಗಿದೆ: ಬೆಳಗಾವಿ: 102ಮಿ.ಮೀ, ಗದಗ: 72.5ಮಿ.ಮೀ, ಉತ್ತರ ಕನ್ನಡ: 54ಮಿ.ಮೀ, ಶಿವಮೊಗ್ಗ: 46.5ಮಿ.ಮೀ, ವಿಜಯಪುರ: 46ಮಿ.ಮೀ, ಬಾಗಲಕೋಟೆ: 45ಮಿ.ಮೀ, ಧಾರವಾಡ: 44ಮಿ.ಮೀ, ಹಾವೇರಿ: 39.5ಮಿ.ಮೀ, ಚಿಕ್ಕಮಗಳೂರು: 34ಮಿ.ಮೀ, ಕಲಬುರಗಿ: 30.5ಮಿ.ಮೀ, ಕೊಪ್ಪಳ: 25ಮಿ.ಮೀ, ಹಾಸನ: 24.5ಮಿ.ಮೀ, ದಾವಣಗೆರೆ: 24ಮಿ.ಮೀ, ಮಂಡ್ಯ: 23ಮಿ.ಮೀ, ಮೈಸೂರು: 22.5ಮಿ.ಮೀ, ಬಳ್ಳಾರಿ: 18.5ಮಿ.ಮೀ, ಕೊಡಗು: 15ಮಿ.ಮೀ ಮಳೆ ದಾಖಲಾಗಿದೆ.

ಇನ್ನು ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ತೀವ್ರ ಗುಡುಗು, ಮಿಂಚು ಸಹಿತ ಗಂಟೆಗೆ 40-50 ಕಿಮೀ ವೇಗದಲ್ಲಿ ಬಿರುಗಾಳಿ ತಲುಪುವ ಸಾಧ್ಯತೆಯಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.