3ನೇ ಬಾರಿಗೆ ಅಧಿಕಾರಕ್ಕೆ ಬರುತ್ತೇವೆ, ಯುಸಿಸಿ ಜಾರಿ ಮಾಡಿಯೇ ತೀರುತ್ತೇವೆ : ಅಮಿತ್ ಶಾ

ನವದೆಹಲಿ,ಏ.20- ಕೇಂದ್ರದಲ್ಲಿ ಮೂರನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಬಿಜೆಪಿಯ ಭರವಸೆಯನ್ನು ಪುನರುಚ್ಚರಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವು ವೈಯಕ್ತಿಕ ಕಾನೂನುಗಳನ್ನು ಹೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಖಾಸಗಿ ಸುದ್ದಿ ವಾಹನಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ದೇಶವನ್ನು ಷರಿಯಾ ಆಧಾರದ ಮೇಲೆ ನಡೆಸಬೇಕೇ? ವೈಯಕ್ತಿಕ ಕಾನೂನಿನ ಆಧಾರದ ಮೇಲೆ? ಯಾವುದೇ ದೇಶವು ಈ ರೀತಿ ನಡೆದುಕೊಂಡಿಲ್ಲ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವೈಯಕ್ತಿಕ ಕಾನೂನುಗಳಿಲ್ಲ. ಜಗತ್ತಿನಲ್ಲಿ ಭಾರತದಲ್ಲಿ ಏಕೆ ಇದೆ? ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಕಾಲ ಮುಂದೆ ಹೋಗಿದೆ ಈಗ ಭಾರತವೂ ಮುನ್ನಡೆಯಬೇಕಾಗಿದೆ. ಹಲವಾರು ಮುಸ್ಲಿಂ ರಾಷ್ಟ್ರಗಳು ಷರಿಯಾ ಕಾನೂನನ್ನು ಅನುಸರಿಸುವುದಿಲ್ಲ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿದ್ದು, ಭಾರತವೂ ಅದೇ ರೀತಿ ಮಾಡುವ ಸಮಯ ಬಂದಿದೆ. ಯುಸಿಸಿಯು ಸಂವಿಧಾನವನ್ನು ರಚಿಸುವಾಗ ಸಂವಿಧಾನ ಸಭೆಯು ದೇಶಕ್ಕೆ ನೀಡಿದ ಭರವಸೆಯಾಗಿದೆ ಎಂದು ಹೇಳಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಕುರಿತಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಜಾತ್ಯತೀತ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರಬೇಕಲ್ಲವೇ? ಇದು ಜಾತ್ಯತೀತತೆಯ ಬಹುದೊಡ್ಡ ಸಂಕೇತವಾಗಿದೆ.

ಧ್ರುವೀಕರಣಕ್ಕೆ ಕಾಂಗ್ರೆಸ್ ಹೆದರುವುದಿಲ್ಲ. ರಾಜಕೀಯದಲ್ಲಿ ಮತಬ್ಯಾಂಕ್‍ನ್ನು ಕ್ರೋಢೀಕರಿಸಲು ಬಯಸುತ್ತದೆ. ಮತ ಬ್ಯಾಂಕ್ ರಾಜಕೀಯದಿಂದಾಗಿ ಸಂವಿಧಾನ ಸಭೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದು ದೂರಿದ್ದಾರೆ.

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ ನಂತರ ಸಾಮಾಜಿಕ, ನ್ಯಾಯಾಂಗ ಮತ್ತು ಸಂಸದೀಯ ದೃಷ್ಟಿಕೋನದಿಂದ ಕಾನೂನಿನ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.ಸ್ವಾತಂತ್ರ್ಯದನಂತರ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿರುವ ಮೊದಲ ರಾಜ್ಯ ಉತ್ತರಾಖಂಡವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *