Actor Darshan: 2019ರ ಚುನಾವಣೆಯಲ್ಲಿ ಚಲುವಣ್ಣ ಸಹಾಯ ಮಾಡಿದ್ರು, ಆ ಋಣವನ್ನು ಮರೆಯಲ್ಲ, ಶಾಕಿಂಗ್ ಹೇಳಿಕೆ ಕೊಟ್ಟ ನಟ ದರ್ಶನ್!
2019ರ ಚುನಾವಣೆಯಲ್ಲಿ ಚಲುವಣ್ಣ ನಮಗೆ ಮಾಡಿದ ಸಹಾಯವನ್ನು ನಾನು ಸಾಯುವವರೆಗೂ ಮರೆಯಲ್ಲ ಎಂದಿದ್ದಾರೆ. ಆಗ ಚಲುವಣ್ಣ ಮಾಡಿದ ಸಹಾಯವನ್ನು 7 ಜನ್ಮವಾದ್ರೂ ತೀರಿಸಲು ಆಗಲ್ಲ ಎಂದು ನಟ ದರ್ಶನ್ ಹೇಳಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣಾ (Loka Sabha Election 2024) ಅಖಾಡ ರಂಗೇರಿದೆ. ಮಂಡ್ಯ ಕ್ಷೇತ್ರ (Mandya Constituency) ರಣಕಣವಾಗಿ ಮಾರ್ಪಟ್ಟಿದೆ. ಸುಮಲತಾ ಅಂಬರೀಷ್ (Sumalatha Ambareesh), ಬಿಜೆಪಿಗೆ ಬೆಂಬಲ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದ್ರು. ಸುಮಲತಾ ಅಮ್ಮ ಯಾವುದೇ ನಿರ್ಧಾರ ತೆಗೆದುಕೊಂಡು ಅವರ ಜೊತೆಯೇ ಇರುವುದಾಗಿ ನಟ ದರ್ಶನ್ (Actor Darshan) ಕೂಡ ಹೇಳಿದ್ರು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಪರ ಭರ್ಜರಿ ಪ್ರಚಾರ ಮಾಡಿದ್ರು. ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸ್ಟಾರ್ ಚಂದ್ರು (Star Chandru) ಪರ ಚಾಲೆಂಜಿಂಗ್ ಸ್ಟಾರ್ ಮತ ಬೇಟೆಯಾಡ್ತಿದ್ದಾರೆ. ಕೆಲ ದಿನಗಳಿಂದ ಕಾಂಗ್ರೆಸ್ ಪರ ದರ್ಶನ್ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಮತಯಾಚನೆ ವೇಳೆ ದರ್ಶನ್ ಆಡಿದ ಮಾತು ಅಚ್ಚರಿ ಮೂಡಿಸಿದೆ.
ಮಂಡ್ಯದಲ್ಲಿ ನಟ ದರ್ಶನ್ ಭರ್ಜರಿ ರೋಡ್ ಶೋ!
ಸಕ್ಕರೆ ನಾಡಲ್ಲಿ ಕುಮಾರಸ್ವಾಮಿಯನ್ನು ಮಣಿಸಲು ಕಾಂಗ್ರೆಸ್ ಸರ್ಕಾರ ಭರ್ಜರಿ ರಣತಂತ್ರ ರೂಪಿಸಿದೆ. ಮಂಡ್ಯದಲ್ಲಿ ಸ್ಟಾರ್ ಪ್ರಚಾರಕರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಖಾಡಕ್ಕೆ ಇಳಿದಿದ್ದಾರೆ. ಒಂದು ದಿನ ಕ್ಯಾಂಪೇನ್ ಮಾಡಿ ನಟ ದರ್ಶನ್ ಸುಮ್ಮನಾಗಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಉರಿ ಬಿಸಿಲಿನಲ್ಲೂ ಮತಬೇಟೆಗೆ ಇಳಿದಿದ್ದಾರೆ. ಇಂದು (ಏ.23) ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಮಂಡ್ಯ ಜಿಲ್ಲೆಯ ನಾಗಲಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಚೆಲುವಣ್ಣನ ಸಹಾಯವನ್ನು 7 ಜನ್ಮಕ್ಕೂ ತೀರಿಸಲು ಆಗಲ್ಲ
ಪ್ರಚಾರದ ವೇಳೆ ಮಾತಾಡಿದ ನಟ ದರ್ಶನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸಚಿವ ಚಲುವರಾಯಸ್ವಾಮಿ ಕೈ ಬಲಪಡಿಸಲು ಸ್ಟಾರ್ಚಂದ್ರುಗೆ ಮತ ನೀಡಿ ಎಂದ ದರ್ಶನ್, 2019ರ ಚುನಾವಣೆಯಲ್ಲಿ ಚಲುವಣ್ಣ ನಮಗೆ ಮಾಡಿದ ಸಹಾಯವನ್ನು ನಾನು ಸಾಯುವವರೆಗೂ ಮರೆಯಲ್ಲ ಎಂದಿದ್ದಾರೆ. ಆಗ ಚಲುವಣ್ಣ ಮಾಡಿದ ಸಹಾಯ 7 ಜನ್ಮವಾದ್ರೂ ತೀರಿಸಲು ಆಗಲ್ಲ. ಆ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಪರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.
ಸುಮಲತಾ ಗೆಲ್ಲಿಸಲು ಚೆಲುವರಾಯಸ್ವಾಮಿ ಸಹಾಯ ಮಾಡಿದ್ರಾ?
ದರ್ಶನ್ ಕೊಟ್ಟ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿ ಭರ್ಜರಿ ಗೆಲುವು ಸಾಧಿಸಿದ್ರು. ಆಗ ಕಾಂಗ್ರೆಸ್ ಮುಖಂಡರಾಗಿದ್ದ ಸಚಿವ ಚಲುವರಾಯಸ್ವಾಮಿ, ಸುಮಲತಾ ಗೆಲುವಿಗೆ ಸಹಾಯ ಮಾಡಿದ್ರಾ ಎಂಬ ಪ್ರಶ್ನೆ ಇದೀಗ ಹುಟ್ಟಿದೆ.
ದರ್ಶನ್ ಹೇಳಿಕೆಯಿಂದ ಶುರುವಾಯ್ತು ಹೊಸ ಚರ್ಚೆ!
2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇತ್ತು. 2019ರಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರು. ಪಕ್ಷೇತರ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ಅಂಬರೀಷ್ ಸ್ಪರ್ಧೆ ಮಾಡಿದ್ರು. ಸುಮಲತಾ ಅಂಬರೀಶ್ ಅವರ ಪರವಾಗಿ ನಟ ದರ್ಶನ ಕೂಡ ವಾರಗಳ ಕಾಲ ಭರ್ಜರಿ ಪ್ರಚಾರ ನಡೆಸಿ ಸುಮಲತಾ ಅವರನ್ನು ಗೆಲ್ಲಿಸಿದ್ರು. ಬಿಜೆಪಿ ಬೆಂಬಲ ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಒಳ ಬೆಂಬಲ ಕೂಡ ಸುಮಲತಾ ಗೆಲುವಿಗೆ ಕಾರಣವಾಗಿದೆ ಎನ್ನುವಂತೆ ದರ್ಶನ್ ಮಾತಾಡಿದ್ದಾರೆ.