ಶಿವಮೊಗ್ಗ ಲೋಕಸಭಾ ಚುನಾವಣೆ: ಪತ್ನಿ ಗೆಲುವಿಗಾಗಿ ಶಿವರಾಜ್ ಕುಮಾರ್ ಟೆಂಪಲ್ ರನ್..!

ಉತ್ತರಕನ್ನಡ(ಮೇ.07): ಪತ್ನಿ ಗೀತಾ ಶಿವರಾಜ್ ಕುಮಾರ್ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಟೆಂಪಲ್ ರನ್ ಆರಂಭಿಸಿದ್ದಾರೆ. ನಟ ಶಿವರಾಜ್ ಕುಮಾರ್ ದಂಪತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ.

ಶಿವರಾಜ್ ಕುಮಾರ್ ಪತ್ನಿಯ ಜೊತೆ ಬಂದು ಶ್ರೀ ಮಾರಿಕಾಂಬೆಗೆ ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಮೊಗ್ಗ ಲೋಕ ಅಖಾಡದಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

 

ನಟ ಶಿವರಾಜ್ ಕುಮಾರ್ ಅವರು ಕಳೆದ ಒಂದೂವರೆ ತಿಂಗಳಿನಿಂದ ಪತ್ನಿಯ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಮತದಾನ ಹಿನ್ನೆಲೆ ಶಿರಸಿ ಶ್ರೀ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಮಾತನಾಡಿದ ನಟ ಶಿವರಾಜ ಕುಮಾರ್, ಶಿರಸಿ ಮಾರಿಕಾಂಬೆ ದರ್ಶನಕ್ಕೆ ನಾನು ಬಹಳ ವರ್ಷಗಳಿಂದ ಬರುತ್ತಿದ್ದೇನೆ. ಇಂದು ನಾನು ಬಂದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಮತದಾನ ಮಾಡಿದ್ರೆ ಜನಪ್ರತಿನಿಧಿಗಳನ್ನು ಪ್ರಶ್ನೆ ಕೇಳುವ ಹಕ್ಕು ಇರುತ್ತೆ. ತಮ್ಮ ಹಕ್ಕನ್ನು ಯಾರೂ ಕೂಡ ವೇಸ್ಟ್ ಮಾಡ್ಕೊಬಾರ್ದು. ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮತದಾನ ಮಾಡಿ ಎಂದು ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.

 

ಆ ಮೇಲೆ ತಮ್ಮ ವೈಯಕ್ತಿಕ ಕೆಲಸ ಕಾರ್ಯ ಮಾಡ್ಕೊಳ್ಳಿ. ವಿಶೇಷವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಯುವಕರೇ ದೇಶದ ಭವಿಷ್ಯ ಇದ್ದಂತೆ, ಯುವಕರು ಯಾವುದೇ ಕಾರಣಕ್ಕೂ ಮತದಾನ ಮಿಸ್ ಮಾಡಬಾರದು. ಶಿವಮೊಗ್ಗದಲ್ಲಿ ಗೆದ್ದೇ ಗೆಲ್ತೀವಿ ಎಂಬ ವಿಶ್ವಾಸ ಇದೆ. ಗೆಲ್ತೀವಿ ಎಂಬ ವಿಶ್ವಾಸದಿಂದಲೇ ನಾವು ಪ್ರಯತ್ನ ಮಾಡಿದ್ದು. ಆ ದೇವಿ ಏನ್ ಆಶೀರ್ವಾದ ಮಾಡ್ತಾಳೆಂತ ನೋಡೋಣ ಎಂದು ತಿಳಿಸಿದ್ದಾರೆ.

ಇಂದು ನಾನು ಮಾರಿಕಾಂಬೆಗೆ ಏನು ಪ್ರಾರ್ಥನೆ ಮಾಡಿದೀನಿ ಅಂತಾ ದೇವಿಗೆ ಗೊತ್ತಿದೆ. ದೇವರಿಗೆ ಪ್ರಾರ್ಥನೆ ಮಾಡಿದನ್ನು ಬಹಿರಂಗವಾಗಿ ಹೇಳಬಾರದು. ಹಾಗಾಗಿ ಇಂದು ನಾನು ದೇವಿಯ ಬಳಿ ಏನು ಪ್ರಾರ್ಥನೆ ಮಾಡಿದೀನಿ ಅಂತಾ ಹೇಳಲ್ಲ. ಆದ್ರೆ ನನ್ನ ಪ್ರಾರ್ಥನೆಗೆ ದೇವಿ ಆಶೀರ್ವಾದ ಮಾಡ್ತಾಳೆ ಎಂಬ ನಂಬಿಕೆ ಇದೆ ಅಂತ ಶಿವಣ್ಣ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *