ಅಂಬೇಡ್ಕರ್ ಮೆಡಿಕಲ್‌ ಕಾಲೇಜಲ್ಲಿ ನೂರಾರು ಕೋಟಿ ಭ್ರಷ್ಟಾಚಾರ: ಖರ್ಗೆ, ಅಳಿಯ ರಾಧಾಕೃಷ್ಣ ವಿರುದ್ಧ ಬಿಜೆಪಿ ದೂರು

ಬೆಂಗಳೂರು(ಮೇ.07): ಡಾ.ಬಿ.ಆರ್‌.ಅಂಬೇಡ್ಕರ್‌ ವೈದ್ಯಕೀಯ ಕಾಲೇಜು ಮತ್ತು ದಂತ ಕಾಲೇಜುಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅಳಿಯ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ನಡೆಸಿರುವ ನೂರಾರು ಕೋಟಿ ರು. ಭ್ರಷ್ಟಾಚಾರ ಕುರಿತು ಸಿಬಿಐ ಅಥವಾ ಸಿಐಡಿ ತನಿಖೆ ವಹಿಸಬೇಕು ಹಾಗೂ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.
ಈ ಸಂಬಂಧ ಲೋಕಾಯುಕ್ತ, ಸಿಬಿಐಗೆ ದೂರು ನೀಡಿರುವ ರಮೇಶ್‌, ಹಗರಣಕ್ಕೆ ಸಂಬಂಧಿಸಿದ 900 ಕ್ಕೂ ಹೆಚ್ಚು ಪುಟಗಳಷ್ಟು ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಕಳೆದ 15 ವರ್ಷಗಳಿಂದ ನಿರಂತರವಾಗಿ ಅಕ್ರಮ ಪ್ರವೇಶಗಳ ಮೂಲಕ ನೂರಾರು ಕೋಟಿ ರು. ನಷ್ಟು ಭ್ರಷ್ಟಾಚಾರವನ್ನು ನಡೆಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಆಡಳಿತ ಮಂಡಳಿಯ ಧರ್ಮದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

 

ಪ್ರಾರಂಭದಲ್ಲಿ ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕಗೊಂಡಿದ್ದ ರಾಧಾಕೃಷ್ಣ ದೊಡ್ಡಮನಿ ಅವರು ಮಲ್ಲಿಕಾರ್ಜುನ ಖರ್ಗೆಯವರ ಪ್ರಭಾವವನ್ನು ಬಳಸಿ ಏಕಾಏಕಿ ಆಡಳಿತ ಮಂಡಳಿಯ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಧಾಕೃಷ್ಣ ದೊಡ್ಡಮನಿ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಕಾಲೇಜುಗಳಲ್ಲಿ ನಡೆದಿರುವ ಬೃಹತ್ ಹಗರಣ ಇದಾಗಿದೆ.

ದ್ವಿತೀಯ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣರಾದ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅನರ್ಹ ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಂದ ತಲಾ ಕನಿಷ್ಠ ಎರಡು ಕೋಟಿ ರು.ಗಿಂತ ಹೆಚ್ಚು ಹಣವನ್ನು ಡೊನೇಷನ್ ರೂಪದಲ್ಲಿ ಪಡೆಯಲಾಗಿದೆ ಎಂದು ಆರೋಪಿಸಿದರು.

 

2008-09 ರಿಂದ ಇಲ್ಲಿಯವರೆಗೆ ಪ್ರತೀ ವರ್ಷ ನೂರಾರು ಅನುತ್ತೀರ್ಣ, ಅನರ್ಹ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪ್ರವೇಶ ಕೊಡಿಸಿರುವ ಆರೋಪ ಇದೆ. ವಿದ್ಯಾರ್ಥಿಗಳಿಗೆ ಜಾರ್ಖಂಡ್ ರಾಜ್ಯದ ಅನಾಮಿಕ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಂತೆ ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರ ಪ್ರವೇಶಗಳನ್ನು ನೀಡಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್, ಮಾಜಿ ಕೇಂದ್ರ ಸಚಿವ ವಿ. ಶಂಕರಾನಂದ, ಮಾಜಿ ಸಚಿವರಾಗಿದ್ದ ವಿ. ಬಸವಲಿಂಗಪ್ಪ, ಬಿ. ರಾಚಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರರಂತಹ ಗಣ್ಯರಿಂದ 1980-81ರಲ್ಲಿ ಚಾಲನೆಗೊಂಡಿರುವ ಆನಂದ್‌ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿಯಾಗಿ ರಾಧಾಕೃಷ್ಣ ಅವರು ನಿಯೋಜನೆಗೊಂಡ ನಂತರ ಯಾವುದೇ ಎಗ್ಗಿಲ್ಲದೇ ಅಪಾರ ಪ್ರಮಾಣದ ವಂಚನೆ ಮತ್ತು ಭ್ರಷ್ಟಾಚಾರ ಇದಾಗಿದೆ ಎಂದು ಹೇಳಿದರು.

ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಛದಲ್ಲಿ ಅತ್ತ್ಯುನ್ನತ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಒದಗಿಸುವ ಸದುದ್ದೇಶದಿಂದ ಸಂಸ್ಥೆಗಳು ಪ್ರಾರಂಭವಾಗಿವೆ. ಇಂತಹ ಸಂಸ್ಥೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ರಾಧಾಕೃಷ್ಣ ದೊಡ್ಡಮನಿ ಮತ್ತವರ ತಂಡ ಕಾನೂನಿನಲ್ಲಿರುವ ಲೋಪದೋಷಗಳನ್ನು ತಮಗೆ ಬೇಕಾದ ಹಾಗೆ ಪರಿವರ್ತಿಸಿಕೊಂಡು ಕಾನೂನಿಗೆ ಮಣ್ಣೆರೆಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *