ಶಾಸಕ ಎಚ್‌ಡಿ ರೇವಣ್ಣಗೆ ಅನಾರೋಗ್ಯ; ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು!
ಹೈಲೈಟ್ಸ್:
- ಎಸ್‌ಐಟಿ ವಶದಲ್ಲಿರುವ ಎಚ್‌ಡಿ ರೇವಣ್ಣ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
- ರೇವಣ್ಣ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
- ರೇವಣ್ಣ ತೀವ್ರ ಬಳಲಿದಂತೆ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಅವರಿಗೆ ಡ್ರಿಪ್ (ಸಲೈನ್) ಹಾಕಿದರು
ಬೆಂಗಳೂರು: ಎಸ್‌ಐಟಿ ವಶದಲ್ಲಿರುವ ಎಚ್‌ಡಿ ರೇವಣ್ಣ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಎಸ್‌ಐಟಿ ವಶದಲ್ಲಿರುವ ಎಚ್‌ಡಿ ರೇವಣ್ಣ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ಹೀಗಾಗಿ. ಅಸಿಡಿಟಿಯಿಂದ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಎಸ್‌ಐಟಿ ಕಚೇರಿಯಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬೌರಿಂಗ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು, ಗ್ಯಾಸ್‌ಟ್ರಿಕ್ ಹಾಗೂ ಜತೆಗೆ ಹರ್ನಿಯಾ ಸಮಸ್ಯೆಯೂ ಪತ್ತೆಯಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ವಿಕ್ಟೋರಿಯಾ ಗ್ಯಾಸ್ಟ್ರೋಎಂಟ್ರಾಲಜಿ ವೈದ್ಯರಿಂದ ತಪಾಸಣೆ ಮಾಡಿಸಲು ಹಾಗೂ ಕಾರ್ಡಿಯಾಲಜಿಸ್ಟರ್ ಓಪಿನಿಯನ್ ತೆಗೆದುಕೊಳ್ಳಲು ಬೌರಿಂಗ್ ವೈದ್ಯರು ಸೂಚನೆ ನೀಡಿದ್ದಾರೆ. ರೇವಣ್ಣ ಆಸ್ಪತ್ರೆ ದಾಖಲು ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆ ಸುತ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.