ಬಹುಅಂಗಾಂಗ ವೈಫಲ್ಯದಿಂದಾಗಿ ಸ್ವಾಮಿ ಅಗ್ನಿವೇಶ್ ನಿಧನ
ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ದೆಹಲಿಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಯಕೃತು ಸಂಬಂಧಿ ರೋಗದಿಂದ ಅವರು ಬಳಲುತ್ತಿದ್ದು, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬೈಲಿಯರಿ ಸೈನ್ಸಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯಕ್ಕೀಡಾಗಿ ಅವರು ಕೊನೆಯುಸಿರೆಳೆದರು.
ಹಿಂದೂ ವಿರೋಧಿ ಧೋರಣೆ, ನಕ್ಸಲ್ ಸಂಪರ್ಕ ಹೊಂದಿದ್ದ ಅವರು ವಿವಾದಗಳಿಂದಲೇ ದೇಶದ ಜನರ ಗಮನಸೆಳೆದವರು. ಆಂಧ್ರಪ್ರದೇಶ ಶ್ರೀಕಾಕುಲಂನಲ್ಲಿ 1939ರ ಸೆಪ್ಟೆಂಬರ್ 21ರಂದು ಜನಿಸಿದರು. ವೇಪ ಶ್ಯಾಮರಾವ್ ಎಂಬುದು ಅವರ ಬಾಲ್ಯದ ಹೆಸರು. ನಾಲ್ಕು ವರ್ಷ ಪ್ರಾಯವಿದ್ದಾಗ ಅವರು ತಂದೆಯನ್ನು ಕಳೆದುಕೊಂಡರು. ಬಳಿಕ ಛತ್ತೀಸ್ಗಢದಲ್ಲಿ ತಾತನ ಮನೆಯಲ್ಲಿ ಬೆಳೆದರು. ಕಾನೂನು ಮತ್ತು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಅವರು ಕೋಲ್ಕತದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೆಲಕಾಲ ಸಬ್ಯಸಾಜಿ ಮುಖರ್ಜಿ(ಬಳಿಕ ಸಿಜೆಐ ಆದವರು) ಅವರ ಅಧೀನ ಜ್ಯೂನಿಯರ್ ಆಗಿ ವಕೀಲಿಕೆ ಮಾಡಿದ್ದರು.
ಅವರು 1970ರಲ್ಲಿ ಆರ್ಯಸಮಾಜದ ಸಿದ್ಧಾಂತಗಳ ಆಧಾರದ ಮೇಲೆ ಆರ್ಯಸಭಾ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 1977ರಲ್ಲಿ ಹರಿಯಾನ ವಿಧಾನಸಭೆಯ ಸದಸ್ಯರೂ ಆದರು. 1979ರಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಸಚಿವರಾಗಿದ್ದಾಗಲೇ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು.