‘ಪ್ರಜ್ವಲ್ ರೇವಣ್ಣ ವಿರುದ್ಧ ಸಾಕ್ಷ್ಯ ಹೇಳಿದವರ ವಿರುದ್ಧ ಸುಳ್ಳು ಕೇಸ್ ದಾಖಲು’

ಹೈಲೈಟ್ಸ್‌:

  • ಹಾಸನ ಪೆನ್ ಡ್ರೈವ್ ಹಗರಣದ ಸಂತ್ರಸ್ಥೆಯರಿಗೆ ದುಷ್ಕರ್ಮಿಗಳಿಂದ ಬೆದರಿಕೆ.
  • ಹಾಸನ ಸಂಸದ ಪ್ರಜ್ವಲ್ ವಿರುದ್ಧ ಎಸ್ಐಟಿ ಮುಂದೆ ಸಾಕ್ಷ್ಯ ಹೇಳದಂತೆ ಕಾಣದ ಕೈಗಳ ತಾಕೀತು.
  • ಸಂತ್ರಸ್ಥೆಯರನ್ನು ಹೆದರಿಸಿ, ಬೆದರಿಸಿ ಬಾಯಿ ಮುಚ್ಚಿಸುವ ಕೆಲಸ.

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಸಂತ್ರಸ್ಥೆಯೊಬ್ಬರು ಕೆಲವು ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಜ್ವಲ್ ವಿರುದ್ಧ ಹೇಳಿಕೆ ನೀಡಿದರೆ ಸಂತ್ರಸ್ಥೆಯ ವಿರುದ್ಧವೇ ಸುಳ್ಳು ದೂರು ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದುಷ್ಕರ್ಮಿಗಳು ಸಂತ್ರಸ್ಥೆಯೊಬ್ಬರಿಗೆ ಹೆದರಿಸಿದ್ದಾರೆಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಹೇಳಿದೆ.

ದುಷ್ಕರ್ಮಿಗಳಿಂದ ಬೆದರಿಕೆ ಬರುತ್ತಿರುವ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಮುಂದೆ ಸಂತ್ರಸ್ಥೆ ಅಳಲು ತೋಡಿಕೊಂಡಿದ್ದು, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿರುವುದಾಗಿ ಎಸ್ಐಟಿ ಹೇಳಿದೆ.

“ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ಥರಾಗಿರುವ ಮಹಿಳೆಯೊಬ್ಬರನ್ನು ಇತ್ತೀಚೆಗೆ ಭೇಟಿಯಾಗಿರುವ ಮೂವರು ತಮ್ಮನ್ನು ತಾವು ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ. ಸಾಮಾನ್ಯ ಉಡುಗೆಯಲ್ಲೇ ಸಂತ್ರಸ್ಥೆ ಮನೆಗೆ ಹೋಗಿದ್ದ ಅವರು, ಪ್ರಜ್ವಲ್ ಪ್ರಕರಣದಲ್ಲಿ ಎಸ್ಐಟಿ ಮುಂದೆ ಯಾವುದೇ ಸಾಕ್ಷ್ಯ ನೀಡದಂತೆ ತಾಕೀತು ಮಾಡಿ, ತಮ್ಮ ಮಾತು ಕೇಳದಿದ್ದರೆ ಸುಳ್ಳು ಕೇಸ್ ದಾಖಲಿಸುವ ಬೆದರಿಕೆಯನ್ನೂ ಹಾಕಿದ್ದಾರೆ. ಆನಂತರದಲ್ಲಿ ನಾನಾ ನಂಬರ್ ಗಳಿಂದ ಆಕೆಯ ಮೊಬೈಲ್ ಗೆ ಕರೆ ಮಾಡಿ ಮತ್ತೆ ಮತ್ತೆ ಬೆದರಿಸಿದ್ದಾರೆ. ಈ ಕಿರುಕುಳವನ್ನು ಸಹಿಸದ ಸಂತ್ರಸ್ಥೆಯು ಈಗ ಎಸ್ಐಟಿ ಮಂದೆ ಹಾಜರಾಗಿ ರಕ್ಷಣೆ ಕೋರಿದ್ದಾಳೆ’’ ಎಂದು ಎಸ್ಐಟಿ ಪ್ರಕಟಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಸಂತ್ರಸ್ಥೆಯರು ಹಾಜರಾಗುತ್ತಿಲ್ಲ. ಹಾಜರಾದರೂ ಸರಿಯಾಗಿ ಮಾಹಿತಿ ನೀಡಲು ಹೆದರುತ್ತಿದ್ದಾರೆ ಎಂಬ ಮಾತುಗಳು ಈ ಹಿಂದೆಯೇ ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ, ಎಸ್ಐಟಿಯು ಮುಖತಃ ಬಂದು ಮಾತನಾಡಲು ಇಚ್ಛಿಸದ ಸಂತ್ರಸ್ಥೆಯರು ತಮ್ಮ ದೂರು ದಾಖಲಿಸಲು ಅನುಕೂಲವಾಗುವಂತೆ ಸಹಾಯವಾಣಿಯನ್ನೂ ಆರಂಭಿಸಿತು. ಇಷ್ಟೆಲ್ಲಾ ಅನುಕೂಲ ಮಾಡಿದ ನಂತರ, ಈಗ ಸಂತ್ರಸ್ಥೆಯರು ದೂರು ದಾಖಲಿಸದಂತೆ ಅಥವಾ ಸಾಕ್ಷ್ಯ ನುಡಿಯದಂತೆ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ, ಪ್ರಜ್ವಲ್ ರೇವಣ್ಣನವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರಲ್ಲಿ ಸುಮಾರು 700 ಮಂದಿ, ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ದೂರು ನೀಡಲು ಹಾಜರಾಗಿದ್ದರು ಎಂಬ ವದಂತಿಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ ತಳ್ಳಿಹಾಕಿದೆ. ಕರ್ನಾಟಕದಲ್ಲಿ ಈವರೆಗೆ ಕೇವಲ ಎರಡು ದೂರುಗಳು ಮಾತ್ರ ದಾಖಲಾಗಿವೆ. ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಇದರ ನಡುವೆ, ಸಂತ್ರಸ್ಥೆಯೊಬ್ಬರನ್ನು ಅಪಹರಿಸಿದ್ದಾಗಿ ಸಂತ್ರಸ್ಥೆಯ ಮಗ ದೂರು ದಾಖಲಿಸಿದ್ದು ಅದರ ಆಧಾರದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರ ತಂದೆ ಹಾಗೂ ಹೊಳೆನರಸೀಪುರದ ಶಾಸಕರಾದ ಎಚ್.ಡಿ. ರೇವಣ್ಣ ಅವರನ್ನು ಬಂಧಿಸಲಾಗಿದೆ ಎಂದು ಆಯೋಗ ತಿಳಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *