ಸೆಕೆಗೆ ಪ್ರಾಣಿಗಳೂ ಸುಸ್ತು! ಮೈಸೂರು ಮೃಗಾಲಯದಲ್ಲಿ ಫ್ಯಾನ್, ಏರ್ ಕೂಲರ್, ಸ್ಪ್ರಿಂಕ್ಲರ್ ವ್ಯವಸ್ಥೆ

ಮೈಸೂರು: ಬೇಸಿಗೆ ಧಗೆಯಿಂದ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತಂಪಾದ ವಾತಾವರಣ ಸೃಷ್ಟಿಸುವುದರೊಂದಿಗೆ ನಾನಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳಿಗೆ ಉಂಟಾಗುವ ಶಾಖದ ಒತ್ತಡವನ್ನು ತಡೆಗಟ್ಟಲು ಎಲ್ಲ ಪ್ರಾಣಿ ಮನೆಗಳಲ್ಲಿ ನೀರಿನ ಜೆಟ್‌ಗಳು ಮತ್ತು ನೀರಿನ ಸ್ಟ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ.

ಪಕ್ಷಿ ಮನೆಗಳಲ್ಲಿ ಎಲ್ಲಾ ಪಕ್ಷಿಗಳಿಗೆ ತಂಪಾದ ವಾತಾವರಣವನ್ನು ನಿರ್ಮಿಸಲು ನೀರಿನ ಸ್ಪಿಂಕ್ಲರ್‌ಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ಪ್ರಾಣಿಗಳು ಒಳಾವರಣಗಳಲ್ಲಿ ಆರಾಮದಾಯಕ ಸ್ಥಿತಿಯಲ್ಲಿರಲು ಫ್ಯಾನ್‌ಗಳು ಮತ್ತು ಕೂಲರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಪಾದ ಆಹಾರ ಕ್ರಮ

ಎಲ್ಲಾ ಬಗೆಯ ವಾನರ ಜಾತಿಯ ಪ್ರಾಣಿಗಳಾದ ಗೊರಿಲ್ಲಾ, ಒರಾಂಗೂಟಾನ್‌, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು ನೀರಿನಾಂಶವುಳ್ಳ ತರಕಾರಿ ಹಾಗೂ ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ, ಕರಬೂಜ ಇತ್ಯಾದಿಗಳನ್ನು ಅವುಗಳ ಆಹಾರದಲ್ಲಿ ಹೆಚ್ಚಾಗಿ ಸೇರಿಸಿ ನೀಡಲಾಗುತ್ತಿದೆ.

ಅಲ್ಲದೆ ಒಆರ್‌ಎಸ್‌ ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ. ಹಿಮಾಲಯದ ಕಪ್ಪು ಕರಡಿಗಳಿಗೆ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯವಾಗುವಂತೆ ಆಹಾರವನ್ನು ಐಸ್‌ಬ್ಲಾಕ್‌ ರೀತಿಯಲ್ಲಿ ಒದಗಿಸಲಾಗುತ್ತಿದೆ.

ಕೆಸರಿನ ಕೊಳ, ನೆರಳಿನ ಚಪ್ಪರ

ಎಲ್ಲಾ ಬಗೆಯ ಸಸ್ಯಾಹಾರಿ ಪ್ರಾಣಿ ಮನೆಗಳಲ್ಲಿ ಕೆಸರಿನ ಕೊಳವನ್ನು ನಿರ್ಮಿಸುವ ಮೂಲಕ ಅವುಗಳಿಗೆ ನೈಸರ್ಗಿಕ ತಣ್ಣನೆಯ ವಾತಾವರಣವನ್ನು ಕಲ್ಪಿಸಲಾಗಿದೆ. ಪ್ರಾಣಿಗಳು ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಪ್ರಾಣಿಮನೆಗಳಲ್ಲಿ ಚಪ್ಪರ ಹಾಕಲಾಗಿದೆ.

ಈ ಬಾರಿ ಅತ್ಯಧಿಕ ಉಷ್ಣಾಂಶ

ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಿತ್ಯವೂ ಸರಾಸರಿ 38 ಡಿಗ್ರಿ ಹಾಗೂ ಕೆಲವೊಮ್ಮೆ 40 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಪಿಂಚಣಿದಾರರ ಸ್ವರ್ಗವೆಂದೆ ಖ್ಯಾತಿ ಪಡೆದ ಜಿಲ್ಲೆಯಲ್ಲಿ ನೆಮ್ಮದಿಯ ಬದುಕು ದೂಡುತ್ತಿದ್ದ ಜನತೆ ಇದೀಗ ಅತಿಯಾದ ಉಷ್ಣಾಂಶ ತಡೆಯಲಾರದೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದೆ. ಕಳೆದ 15 ವರ್ಷಗಳ ದಾಖಲೆಗಳನ್ನು ಗಮನಿಸಿದರೆ ಈವರೆಗೆ ಜಿಲ್ಲೆಯ ಸರಾಸರಿ ತಾಪಮಾನ 30-33 ಡಿಗ್ರಿ ಇರುತ್ತಿತ್ತು.

ಆದರೆ ಈ ಬಾರಿ ಅಚ್ಚರಿ ಎಂಬಂತೆ ಕಳೆದ ಜನವರಿಯಿಂದ ಬಿಸಿಲಿನ ತಾಪಮಾನ ಕ್ರಮೇಣ ಏರುಮುಖವಾಗಿದೆ. ನಿತ್ಯ ಸರಾಸರಿ 38 ಡಿಗ್ರಿ ವರೆಗೆ ಏರಿಕೆಯಾಗುತ್ತಿದೆ. ಅಲ್ಲದೆ ದಿನದ ಕೆಲವು ಸಂದರ್ಭಗಳಲ್ಲಿ ಈ ಪ್ರಮಾಣ 40 ಡಿಗ್ರಿಯನ್ನೂ ದಾಟುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಉಷ್ಣಾಂಶಕ್ಕೆ ಸಂಬಂಧಿಸಿದ ಆರೋಗ್ಯ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆಯಿಂದ ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ತಾಪಮಾನದಿಂದ ಏನೆಲ್ಲ ತೊಂದರೆ ?

ಅತಿಯಾದ ಬಿಸಿಲಿನ ತಾಪಕ್ಕೆ ಜನರು ಹೆಚ್ಚಾಗಿ ಬೆವರುವುದರಿಂದ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಹೀಗಾಗಿ ದೇಹದಲ್ಲಿರುವ ಲವಣಾಂಶಗಳು ಬೆವರಿನ ಮೂಲಕ ಹೆಚ್ಚಾಗಿ ಹೊರಗೆ ಬರುತ್ತವೆ. ಇದರಿಂದ ಆಯಾಸವಾಗುವುದು, ತಲೆಸುತ್ತುವುದು, ರಕ್ತದೊತ್ತಡ ಕಡಿಮೆಯಾಗುವುದು, ಕೈ ಕಾಲು ಹಿಡಿಯುವುದು, ಸ್ನಾಯು ಹಿಡಿತ, ಸನ್‌ ಸ್ಟೊ್ರೕಕ್‌, ಜ್ವರ, ನಿರ್ಜಲೀಕರಣದಂತಹ ತೊಂದರೆ ಕಾಣಿಸಿಕೊಳ್ಳುತ್ತವೆ. ಆದರೆ ಈವರೆಗೆ ಸನ್‌ ಸ್ಟೊ್ರೕಕ್‌ನಂತಹ ದೊಡ್ಡ ಪ್ರಮಾಣದ ಸಮಸ್ಯೆಯಾಗದಿದ್ದರೂ ಸುಸ್ತು, ಆಯಾಸ, ಜ್ವರ, ನಿರ್ಜಲೀಕರಣಕ್ಕೆ ಒಳಗಾಗಿ ಸಾಕಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಂಕ್ರಾಮಿಕ ಕಾಯಿಲೆಯೂ ಉಲ್ಬಣ

ಹೆಚ್ಚು ಉಷ್ಣಾಂಶದಿಂದ ಆಹಾರ ಪದಾರ್ಥಗಳೂ ಬೇಗ ಕೆಡುತ್ತವೆ. ಹೀಗಾಗಿ ಬೇಸಿಗೆ ಕಾಲದ ಸಾಂಕ್ರಾಮಿಕ ಕಾಯಿಲೆಗಳೆಂದೇ ಹೇಳಲಾಗುವ ಕಾಲರಾ, ಅತಿಸಾರ ಬೇಧಿ, ಟೈಫಾಯಿಡ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗೆ ಒಳಗಾದವರು ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ದೊಡ್ಡಮಟ್ಟದಲ್ಲಿತೊಂದರೆಗೆ ಒಳಗಾಗಬೇಕಾಗುತ್ತದೆ.

ಕಡಿಮೆ ರಕ್ತದೊತ್ತಡ ಪ್ರಕರಣ

ಉಷ್ಣಾಂಶ ದಿಂದಾಗಿ ನಿರ್ಜಲೀಕರಣಕ್ಕೆ ಒಳಗಾಗುವುದರಿಂದ ದೇಹದ ಅಂಗಾಂಗಗಳಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ದೊರೆಯುವುದಿಲ್ಲ. ದೇಹದ ರಕ್ತದೊತ್ತಡ ಕಡಿಮೆಯಾಗುವ ತೊಂದರೆಗೆ ಒಳಗಾಗಿ ಹೆಚ್ಚು ಮಂದಿ ಕೆ.ಆರ್‌.ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದಲ್ಲದೆ ವಾಂತಿ, ಬೇಧಿ, ಫುಡ್‌ ಪಾಯಿಸನ್‌ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಸಕ್ಕರೆ, ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *