HD Revanna: ಮಧ್ಯಂತರ ಜಾಮೀನು ಪಡೆದರೂ ರೇವಣ್ಣಗೆ ತಪ್ಪದ ಸಂಕಷ್ಟ
ಬೆಂಗಳೂರು: ಹೊಳೆ ನರಸೀಪುರದಲ್ಲಿ (Holenarasipura ) ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ ರೇವಣ್ಣ (HD Revanna) ಜಾಮೀನು ಅರ್ಜಿ ವಿಚಾರಣೆ (Bail application hearing) ಇಂದು ನಡೆಯಲಿದೆ. ನಿನ್ನೆ ವಿಚಾರಣೆ ನಡೆಸಿದ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ, ಇಂದು ಮಧ್ಯಾಹ್ನದ ವರೆಗೂ ಮಧ್ಯಂತರ ಜಾಮೀನು (Interim bail) ಮಂಜೂರು ಮಾಡಿತ್ತು. ಅಲ್ಲದೆ 5 ಲಕ್ಷ ರೂಪಾಯಿ ಬಾಂಡ್ ನೀಡಲು ಮಾಜಿ ಸಚಿವರಿಗೆ ಸೂಚನೆ ನೀಡಿತ್ತು. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಕೋರ್ಟ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
‘ಪ್ರಜ್ವಲ್ ಸಂಪರ್ಕದಲ್ಲಿದ್ದಾರಾ? ತಕ್ಷಣ ಕರೆಸಿ’
ಪ್ರಜ್ವಲ್ ನಾಪತ್ತೆಯಾಗಿ 21 ದಿನ ಆಗಿದೆ. ಪ್ರಜ್ವಲ್ ರೇವಣ್ಣನನ್ನ ಆದಷ್ಟು ಬೇಗ ಕರೆಸಿ ಎಂದು ರೇವಣ್ಣ ಕುಟುಂಬಕ್ಕೆ ವಕೀಲ ಸಿ.ವಿ.ನಾಗೇಶ್ ಮನವಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗದೆ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ. ಇದು ಮುಂದೆ ಗಂಭೀರ ಪರಿಣಾಮಕ್ಕೆ ಕಾರಣ ಆಗುತ್ತೆ. ಪ್ರಜ್ವಲ್ ರೇವಣ್ಣ ಸಂಪರ್ಕದಲ್ಲಿ ಇದ್ದರೆ ದೇಶಕ್ಕೆ ವಾಪಸ್ಸಾಗಲೂ ಹೇಳಿ ಎಂದು ಸಲಹೆ ನೀಡಿದ್ದಾರಂತೆ.
ಪೆನ್ಡ್ರೈವ್ ಕೇಸ್ನಲ್ಲಿ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಕೆಲವು ಮಾಹಿತಿಗಳನ್ನು ಪಡೆದಿದ್ದಾರೆ. ಆದಷ್ಟು ಬೇಗ ಪ್ರಜ್ವಲ್ ರೇವಣ್ಣ ಬಂದರೆ ಕೆಲವು ಹೇಳಿಕೆಯನ್ನು ಪಡೆದು ಮುಂದಿನ ದಿನಗಳಲ್ಲಿ ಕಾನೂನು ಹೋರಾಟವನ್ನು ಮಾಡಬಹುದು ಎಂದು ನಾಗೇಶ್ ಸಲಹೆ ನೀಡಿದ್ದಾರಂತೆ.
ತಪ್ಪು ಮಾಡಿದ್ದಕ್ಕೆ ತಪ್ಪಿಸ್ಕೊಂಡು ಓಡಾಡ್ತಿದ್ದಾರೆ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ನಾಪತ್ತೆ ಕುರಿತಾಗಿ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೀದರ್ನಲ್ಲಿ ಮಾತನಾಡಿದ್ದು, ರೇವಣ್ಣ ತಪ್ಪಿಸಿಕೊಂಡು ಓಡಾಡ್ತಿದ್ದಾರೆ. ಅಂದ್ರೆ ತಪ್ಪು ಮಾಡಿದ್ದಾರೆ ಅಂತಾನೇ ಅರ್ಥ. ಆದ್ರೆ ಈ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಪರಿಹಾರ ನೀಡಬೇಕು. ಜೊತೆಗೆ ಈ ಪಿತೂರಿ ಯಾರು ಮಾಡಿದ್ದಾರೋ ಅವರಿಗೂ ಶಿಕ್ಷೆ ಆಗಬೇಕು. ದೊಡ್ಡ ತಪ್ಪು ಮಾಡಿರೋ ರೇವಣ್ಣನಿಗೆ ದೊಡ್ಡ ಶಿಕ್ಷೆ ಅಗಬೇಕು. ಯಾರೇ ದೊಡ್ಡ ಮನುಷ್ಯ ಆಗಿದ್ರೂ, ದೇವಗೌಡ ಮಗನಾಗಿದ್ರೂ ಅಷ್ಟೇ, ತಿಮ್ಮೇಗೌಡ, ಇಸ್ಮಾಯಿಲ್ ಮಗನಾದ್ರೂ ಶಿಕ್ಷೆ ನೀಡಬೇಕು. ಶಿಕ್ಷೆಯನ್ನು ಆದಷ್ಟು ತ್ವರಿತಗತಿಯಲ್ಲಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಬಳಿಕ ಹುಬ್ಬಳ್ಳಿಯಲ್ಲಿ ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣ ಸಂಬಂಧ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಗುಂಪುಗಾರಿಕೆಯಿಂದಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದರಲ್ಲಿ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಅದನ್ನ ಬಳಸಿಕೊಳ್ಳೋಕೆ ಬಿಜೆಪಿಯವರು ಪ್ರಯತ್ನ ಮಾಡ್ತಿದ್ದಾರೆ. ಆದರೆ ಇಂತಹ ಘಟನೆಗಳು ನಡೆದಾಗ ಯಾರೇ ಆದರೂ ಅದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು. ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.