ಕಾಯಿ, ಪಲ್ಲೆಗಳಿಗೂ ಬರ; ತರಕಾರಿ ಉತ್ಪಾದನೆ ಕುಂಠಿತ, ಬೆಲೆ ಹೆಚ್ಚಳ

ಹೈಲೈಟ್ಸ್‌:

  • ತರಕಾರಿ ಉತ್ಪಾದನೆ ಕುಂಠಿತ, ಬೆಲೆ ಹೆಚ್ಚಳ
  • ಹೋಟೆಲ್‌ ತಿಂಡಿ ದರದಲ್ಲಿ ಏರಿಕೆ
  • ಶೇ.60ರಷ್ಟು ಹೊರ ಜಿಲ್ಲೆ, ರಾಜ್ಯದಿಂದ ಪೂರೈಕೆಯಾಗುತ್ತಿವೆ

ಚಿಕ್ಕಮಗಳೂರು : ಬರದ ಪರಿಣಾಮ ತರಕಾರಿಗಳ ಮೇಲೆ ಬೀರಿದ್ದು ಜಿಲ್ಲೆಯಲ್ಲಿ ಉತ್ಪಾದನೆ ಕುಂಠಿತವಾಗಿದೆ. ಸ್ಥಳೀಯವಾಗಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಕಾಯಿ ಪಲ್ಲೆಗಳ ದರ ಮುಗಿಲು ಮುಟ್ಟಿದ್ದು ಇದರ ಬಿಸಿ ಹೋಟೆಲ್‌ಗಳಿಗೂ ತಟ್ಟಿದೆ.

ಕಳೆದೊಂದು ತಿಂಗಳಿಂದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಯಾವ ತರಕಾರಿಗಳು ಸಿಗುತ್ತಿಲ್ಲ. ಅರ್ಧ ಕೆ.ಜಿ. ಮೀನು ಅಥವಾ ಚಿಕನ್‌ ಆದರೂ ತಂದು ತಿನ್ನಬಹುದು. ಆದರೆ, ತರಕಾರಿ ದರ ಇದಕ್ಕಿಂತಲೂ ದುಬಾರಿಯಾಗಿದೆ!

ಕಳೆದ ಬಾರಿ ಮಳೆ ಕಡಿಮೆಯಾಗಿದ್ದರಿಂದ ನಿಗದಿತ ಪ್ರದೇಶದಲ್ಲಿ ತರಕಾರಿ ಬೆಳೆದಿಲ್ಲ. ಕೊಳವೆಬಾವಿ ಹೊಂದಿದವರು ಮಾತ್ರ ತಮ್ಮ ತಾಕಿನಲ್ಲಿ ತರಕಾರಿ ಬೆಳೆದು ಮಾರಕಟ್ಟೆಗೆ ತರುತ್ತಿದ್ದು ಮಳೆಯಾಶ್ರಿತ ಭೂಮಿ ಬಿರು ಬಿಸಿಲಿಗೆ ಕಾವಲಿಯಂತಾಗಿದೆ. ಸ್ಥಳೀಯವಾಗಿ ಬೆಳೆದ ತರಕಾರಿಗಳು ಮಾರುಕಟ್ಟೆಗೆ ಬಂದರೂ, ಬೇಡಿಕೆ ಇರುವ ಜಿಲ್ಲೆಅಥವಾ ರಾಜ್ಯಗಳಿಗೆ ಸರಬರಾಜಾಗುವುದರಿಂದ ಸ್ಥಳೀಯ ಮಾರುಕಟ್ಟೆ ತರಕಾರಿಗಳಿಲ್ಲದೆ ಭಣಗುಡುತ್ತಿದೆ. ಚಿಕ್ಕಮಗಳೂರು ಎಪಿಎಂಸಿಗೆ ಶೇ.40ರಷ್ಟು ತರಕಾರಿಗಳು ಸ್ಥಳೀಯವಾಗಿ ಬಂದರೆ, ಶೇ.60ರಷ್ಟು ಹೊರ ಜಿಲ್ಲೆ, ರಾಜ್ಯದಿಂದ ಪೂರೈಕೆಯಾಗುತ್ತಿವೆ.

ಈ ಹಿಂದೆ ಬೆಲೆ ಇಳಿಮುಖವಾಗಿದ್ದಾಗ ಟೊಮೆಟೊ, ಕೋಸು, ಮೂಲಂಗಿ ಮತ್ತಿತರೆ ತರಕಾರಿಗಳನ್ನು ಮಾರಾಟದ ಬಳಿಕ ಉಳಿದಿದ್ದನ್ನು ಮಾರುಕಟ್ಟೆಯಲ್ಲೋ ಅಥವಾ ಲಕ್ಯಾ ಕ್ರಾಸ್‌ ಮತ್ತಿತರೆ ಖಾಲಿ ಜಾಗದಲ್ಲಿ ಸುರಿದು ಹೋಗುವುದನ್ನು ಕಾಣಬಹುದಿತ್ತು. ಆದರೆ, ಈಗ ತರಕಾರಿಗೆ ಚಿನ್ನದ ರೇಟ್‌ ಬಂದಂತಾಗಿದ್ದು ಬೆಳೆದವರು ಬಹಳ ಜತನದಿಂದ ಕಾಪಾಡಿಕೊಂಡು ಸಂತೆಯಲ್ಲಿ ಚಿಕ್ಕಾಸು ಲಾಭ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಜನಸಾಮಾನ್ಯರು ದರ ಏರಿಕೆಯಿಂದ ಪ್ರತಿ ವಾರ ಕೈಸುಟ್ಟುಕೊಳ್ಳುವಂತಾಗಿದೆ.

ಯಾವುದಕ್ಕೆ ಎಷ್ಟು ಬೆಲೆ?

ಮಾರುಕಟ್ಟೆಯಲ್ಲಿ ಒಂದು ಕಿಲೋ ಬೀನ್ಸ್‌ ಬೆಲೆ 160 ರೂ., ಬಟಾಣಿ 200, ಸುಲಿದ ಕಾಳು 230, ನುಗ್ಗೆ 60, ಬದನೆ 60, ಸೌತೆ 80, ಕೋಸು 60, ಹಸಿಮೆಣಸಿನ ಕಾಯಿ 100, ಹೀರೇಕಾಯಿ 80, ಕ್ಯಾರೇಟ್‌ 60, ಆಲೂಗೆಡ್ಡೆ 40 ರೂ. ಕಿಲೋಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ರೀತಿಯ ಸೊಪ್ಪಿನ ಕಟ್ಟೊಂದಕ್ಕೆ 10 ರೂ, ಕೊತ್ತಂಬರಿ ಸೊಪ್ಪು ಕಟ್ಟೊಂದು 15 ರೂ. ನಂತೆ ಮಾರಾಟವಾಗುತ್ತಿದೆ. ಟೊಮೆಟೊ, ಈರುಳ್ಳಿ ಮಾತ್ರ ಕಿಲೋ 30 ರೂ.ಗೆ ಸಿಗುತ್ತಿದ್ದು ಉಳಿದ ಬಹುತೇಕ ಎಲ್ಲ ತರಕಾರಿಗಳು 50, 100 ರೂ. ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿವೆ.

ಹೋಟೆಲ್‌ಗಳಿಗೆ ತಟ್ಟಿದ ಬಿಸಿ

ತರಕಾರಿಗಳ ಬೆಲೆ ಏರಿಕೆ ಬಿಸಿ ಹೋಟೆಲ್‌ಗಳಿಗೂ ತಟ್ಟಿದ್ದು ತಿಂಡಿ, ಊಟದ ದರ ಹೆಚ್ಚಾಗಿದೆ. ಕೆಲ ಹೋಟೆಲ್‌ಗಳ ಮೆನು ಬೋರ್ಡ್‌ನಲ್ಲಿ ಕಳೆದ 15 ದಿನದ ಹಿಂದೆ ಇದ್ದ ದರಕ್ಕೂ ಇಂದಿನ ದರಕ್ಕೂ ಕನಿಷ್ಠ 20 ರೂ. ವ್ಯತ್ಯಾಸ ಕಂಡು ಬಂದಿದೆ. 120 ರೂ. ಇದ್ದ ಊಟಕ್ಕೆ ಇಂದು 140 ರೂ. ನಿಗದಿ ಮಾಡಲಾಗಿದೆ. 40 ರೂ. ಇದ್ದ ತಿಂಡಿ ಬೆಲೆ 60 ರೂ.ಗೆ ಏರಿಕೆಯಾಗಿದೆ.

ಕಳೆದ ಬಾರಿ ಮಳೆ ಕಡಿಮೆಯಾಗಿದ್ದರಿಂದ ತರಕಾರಿ ಉತ್ಪಾದನೆಯಲ್ಲಿ ಕುಂಟಿತವಾಗಿದೆ. ಬೋರ್‌ ಮತ್ತಿತರೆ ನೀರಾವರಿ ಇದ್ದವರು ಮಾತ್ರ ತರಕಾರಿ ಬೆಳೆದಿದ್ದಾರೆ. ಹೀಗಾಗಿ ತರಕಾರಿ ದರ ತುಸು ಹೆಚ್ಚಾಗಿದೆ. ಮುಂಬರುವ ಮುಂಗಾರಿನಲ್ಲಿ ಸರಾಸರಿ ಮಳೆ ಬಂದಲ್ಲಿ ತರಕಾರಿಗೆ ತೊಂದರೆಯಿಲ್ಲ. ಮಳೆ ಹೆಚ್ಚಾದಲ್ಲಿ ಮತ್ತೆ ಇದೇ ಸ್ಥಿತಿ ಕಾಣಬೇಕಾಗುತ್ತದೆ. 2 ವರ್ಷದ ಹಿಂದೆ ಟೊಮೆಟೊ ಬೆಲೆ 150 ರೂ.ಗೆ ಏರಿದ ಹಾಗೆ ಈ ಬಾರಿ ಆಗಿಲ್ಲ. ಆದರೂ, ತರಕಾರಿ ಬೆಲೆ ತುಸು ಹೆಚ್ಚೇ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *