Fact Check: ಅಬು ಸಲೇಂ ಜೊತೆ ಕಂಗನಾ ರಾಣಾವತ್? ಫೋಟೋದಲ್ಲಿ ಇರೋದು ಭೂಗತ ಪಾತಕಿಯೇ?
ಹೈಲೈಟ್ಸ್:
- 1993ರ ಮುಂಬೈ ಸ್ಫೋಟದ ದೋಷಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಬು ಸಲೇಂ
- ಪಾತಕಿ ಜೊತೆ ಕಂಗನಾ ರಾಣಾವತ್ ನಂಟು ಹೊಂದಿದ್ದಾರೆ ಎಂದು ವಾದಿಸಲಾಗಿದ್ದ ವೈರಲ್ ಫೋಟೋ
- ಅಸಲಿಗೆ ಈ ಫೋಟೋದಲ್ಲಿ ಕಂಗನಾ ಜೊತೆ ಇರೋದು ಮಾಜಿ ಪತ್ರಕರ್ತ
ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರಾಣಾವತ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸಂದರ್ಭದಲ್ಲೇ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭೂಗತ ಪಾತಕಿ ಅಬು ಸಲೇಂ ಜೊತೆ ಕಂಗನಾ ರಾಣಾವತ್ ಫೋಟೋಗೆ ಪೋಸ್ ನೀಡಿದ್ದಾರೆ ಎಂದು ವಾದಿಸಲಾಗಿದೆ.
ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 1993ರ ಮುಂಬೈ ಸ್ಫೋಟದ ದೋಷಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಬು ಸಲೇಂ ಜೊತೆ ಕಂಗನಾ ರಾಣಾವತ್ ನಂಟು ಹೊಂದಿದ್ದಾರೆ ಎಂದು ವಾದಿಸಿದ್ದಾರೆ. ವೈರಲ್ ಆಗಿರುವ ಫೋಟೋ ಜೊತೆಯಲ್ಲೇ ತಮ್ಮದೇ ಆದ ಕೆಲವೊಂದಿಷ್ಟು ವಿವರಣೆಗಳನ್ನೂ ಬರೆದುಕೊಂಡಿದ್ದಾರೆ. ಹಿಂದಿ ಭಾಷೆಯಲ್ಲಿರುವ ವಿವರಣೆಯ ಕನ್ನಡ ಅನುವಾದ ಇಂತಿದೆ: ‘ದೇಶದ ಶತ್ರುವಿನ ಜೊತೆ ಭಕ್ತರ ಸಿಂಹಿಣಿಯ ಕೆಲವು ಸ್ಮರಣಾರ್ಹ ಸಂದರ್ಭಗಳು’ ಎಂದು ಬರೆಯಲಾಗಿದೆ.
ಕಂಗನಾ ರಾಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಜೂನ್ 1 ರಂದು ನಡೆಯಲಿರುವ 2024ರ ಲೋಕಸಭಾ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಮತದಾನದ ವೇಳೆ ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಬಳಕೆದಾರರೊಬ್ಬರು ಈ ಫೋಟೋ ಜೊತೆಗೆ ಒಂದಿಷ್ಟು ವಿವರಣೆ ಬರೆದುಕೊಂಡಿದ್ದಾರೆ: ‘ಅಂಧ ಭಕ್ತರ ಸಹೋದರಿ ಅಬು ಸಲೇಂ ಜೊತೆ ಸ್ಮರಣಾರ್ಹ ಸಂದರ್ಭ ಕಳೆದಿದ್ದಾರೆ’ ಎಂದು ಬರೆಯಲಾಗಿರುವ ಈ ಪೋಸ್ಟ್ ಅನ್ನು ಸಂಗ್ರಹಕ್ಕಾಗಿ ಆಯ್ದುಕೊಳ್ಳುವ ವೇಳೆಗಾಗಲೇ 57 ಸಾವಿರ ವೀಕ್ಷಣೆ ಕಂಡಿತ್ತು. ಇದೇ ರೀತಿಯ ಪೋಸ್ಟ್‌ಗಳ ಸಂಗ್ರಹ ಆವೃತ್ತಿಗಾಗಿ ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕ್ಲಿಕ್ಕಿಸಿ..