ಕಾಂಗ್ರೆಸ್ `ಟಕಾ ಟಕ್’ ಡೋಂಗಿಯ ವಾಸ್ತವ ತಿಳಿಸಿ ಮಹಿಳೆಯರ ಕ್ಷಮೆ ಯಾಚಿಸಲಿ : ವಿಜಯೇಂದ್ರ ಖಡಕ್ ವಾರ್ನಿಂಗ್

ಹೈಲೈಟ್ಸ್‌:

  • ಕಾಂಗ್ರೆಸ್ ನ ಟಕಾ ಟಕ್ ಯೋಜನೆಗಾಗಿ ಖಾತೆ ಮಾಡಿಸಲು ಬೆಂಗಳೂರಿನ ಅಂಚೆ ಕಛೇರಿಗಳಲ್ಲಿ ಜನಸಾಗರ
  • ಕೈ ಪಡೆ ಸುಳ್ಳು ಹೇಳಿ ಜನರ ಹಾದಿ ತಪ್ಪಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ
  • ಡೋಂಗಿ ಸ್ಕೀಂನ ವಾಸ್ತವನನ್ನು ಮಹಿಳೆಯರಿಗೆ ತಿಳಿಸಿ ಕ್ಷಮೆ ಯಾಚಿಸದಿದ್ದಲ್ಲ ಕಾಂಗ್ರೆಸ್ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ

ಬೆಂಗಳೂರು: ಇಂಡಿ ಮೈತ್ರಿ ಒಕ್ಕೂಟ ಕೇಂದ್ರ ದಲ್ಲಿ ಅಧಿಕಾರಕ್ಕೆ ಬಂದಲ್ಲಿ ಟಕಾ ಟಕ್ ಗ್ಯಾರಂಟಿ ಯೋಜನೆಯಡಿ ವಾರ್ಷಿಕ 1 ಲಕ್ಷ ನೀಡಲಾಗುವುದು ಎಂಬ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಹಿನ್ನೆೆಲೆಯಲ್ಲಿ ಬ್ಯಾಂಕ್ ಖಾತೆ ಮಾಡಿಸಲು ಮಹಿಳೆಯರು ಅಂಚೆ ಕಛೇರಿಯಲ್ಲಿ ಮುಗಿ ಬಿದ್ದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬಡಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ವಾಸ್ತವ ತಿಳಿಸಿ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ವರದಿಯನ್ನು ಲಗತ್ತಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಜನರ ಬಡತನವನ್ನು ಬಂಡವಾಳ ಮಾಡಿಕೊಂಡು ಬೊಗಳೆ ಬಿಡುವುದು, ಅಮಾಯಕರನ್ನು ದಿಕ್ಕು ತಪ್ಪಿಸುವುದು, ಸ್ವಾತಂತ್ರ್ಯಾ ನಂತರದಿಂದಲೂ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿರುವ ಚಾಳಿ ಎಂದು ವ್ಯಂಗ್ಯವಾಡಿದ್ದಾರೆ.

ಟಕಾ ಟಕ್ ಡೋಂಗಿ ನಂಬದಿರಿ

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಿಟ್ಟಿ ಭಾಗ್ಯಗಗಳನ್ನೇ ಮುಂದಿಟ್ಟುಕೊಂಡು ಇಡೀ ದೇಶದ ಮತದಾರರಿಗೆ, ಅದರಲ್ಲೂ ಮಹಿಳೆಯರಿಗೆ ಟೋಪಿ ಹಾಕಲು ಹೋಗಿ ರಾಹುಲ್ ಗಾಂಧಿ ಬಾಯಿಂದ ಹೊರಟ ‘ವಾರ್ಷಿಕ 1 ಲಕ್ಷ ಹಾಗೂ ತಿಂಗಳಿಗೆ 8 ಸಾವಿರ ರೂ ಕೊಡುತ್ತೇವೆಂಬ’ ಚುನಾವಣಾ ಪ್ರಚಾರದ ‘ಟಕಾಟಕ್’ ಡೋಂಗಿ ಡೈಲಾಗ್ ನಂಬಿ ಬೆಂಗಳೂರಿನಲ್ಲಿ ನಿದ್ರೆಗೆಟ್ಟು ಮಹಿಳೆಯರು ಬೆಳಗಿನ ಜಾವ 4 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದಿರುವ ಘಟನೆ ನಿಜಕ್ಕೂ ಬೇಸರ ತರಿಸುವಂತದ್ದು.

ತಪ್ಪು ಗ್ರಹಿಕೆಯಿಂದ ಹಸು-ಗೂಸುಗಳನ್ನು ಕೈಗೆತ್ತಿಕೊಂಡು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಅನಗತ್ಯ ಸಂಕಷ್ಟ ಪಡುತ್ತಿರುವ ಮುಗ್ಧ ಮಹಿಳೆಯರನ್ನು ನೋಡಿಯಾದರೂ ಕಾಂಗ್ರೆಸ್ಸಿಗರ ಮನ ಕಲಕುತ್ತಿಲ್ಲವೆಂದರೆ, ಕಾಂಗ್ರೆಸ್ಸಿಗರ ಹೃದಯ ಹೀನತೆ ಹಾಗೂ ಭಂಡತನ ಎತ್ತಿ ತೋರಿಸುತ್ತದೆ.

ಬಡ ಜನರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಈಗಲಾದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಮಾಯಕ ಮಹಿಳೆಯರಿಗೆ ವಾಸ್ತವತೆ ತಿಳಿಸಿ ಅವರ ಕ್ಷಮೆಯಾಚಿಸಲಿ, ಇಲ್ಲದಿದ್ದರೆ ತಪ್ಪು ಗ್ರಹಿಕೆಯಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಮಹಿಳೆಯರಿಗೆ ವಾಸ್ತವ ಸಂಗತಿ ಅರಿವಾದರೆ ಉಂಟಾಗುವ ಪರಿಸ್ಥಿತಿಯ ಪರಿಣಾಮ ಕಾಂಗ್ರೆಸ್ಸಿಗರೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಏನಿದು ಘಟನೆ?

ಕೇಂದ್ರದಲ್ಲಿ ‘ಐಎನ್‌ಡಿಐಎ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ 8,500 ರೂನಂತೆ ವಾರ್ಷಿಕ 1 ಲಕ್ಷ ರೂ ನೀಡಲಾಗುವುದು ಎಂದು ಎಐಸಿಸಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಆದರೆ ಲೋಕಸಭೆ ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಬೆಂಗಳೂರಿನ ಅಂಚೆ ಕಛೇರಿಗಳಲ್ಲಿ ಖಾತೆ ತೆರೆಯಲು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಮುಗಿ ಬೀಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜೂನ್ ನಿಂದಲೇ ಹಣ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಬೆಳಗ್ಗಿನ ಜಾವದಿಂದಲೇ ಅಂಚೆ ಕಛೇರಿಗಳ ಮುಂದೆ ಕಾದು ಕುಳಿತುಕೊಳ್ಳುತ್ತಿದ್ದಾರೆ.

ವಿಧಾನಸೌಧ ಮುಂಭಾಗದಲ್ಲಿರುವ ಪ್ರಧಾನ ಅಂಚೆ ಕಛೇರಿಯಲ್ಲಿ(GPO) ಅಂತೂ ಬೆಳಗ್ಗೆ 4 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಲ್ಲುತ್ತಿದ್ದು ಬೆಳಗ್ಗೆ 6 ಗಂಟೆಯಿಂದಲೇ ಅಂಚೆ ಕಚೇರಿ ಸಿಬ್ಬಂದಿ ಕೆಲಸ ಆರಂಭಿಸುತ್ತಿದ್ದಾರೆ. 15 ಕೌಂಟರ್ ಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದ್ದರೂ ನಿತ್ಯ 1,200ರಿಂದ 1,500 ಮಂದಿ ಖಾತೆ ತೆರೆಯಲು ಆಗಮಿಸುತ್ತಿರುವುದರಿಂದ ಸಂಜೆ ಆದರೂ ಕೆಲಸ ಮುಗಿಯುತ್ತಿಲ್ಲ .ಖಾತೆ ತೆರೆಯಲು ಕೊನೆ ದಿನಾಂಕವೇನೂ ಇಲ್ಲ. ಆದಷ್ಟು ಸಾವಧಾನದಿಂದ ಖಾತೆ ತೆರೆಯಿರಿ,’’ ಎಂದು ಮನವೊಲಿಸಿದರೂ ಜನಜಂಗುಳಿ ಮಾತ್ರ ಕಡಿಮೆಯಾಗುತ್ತಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *