ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಬಲಿ ಪಡೆದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಅಧಿಕಾರಿಗಳ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆದಿರುವುದು ಕಾಣುತ್ತೇವೆ. ನಾವು ಆ ಭಾಗ್ಯ ಈ ಭಾಗ್ಯ ಕೊಟ್ಟೆವು ಎನ್ನುತ್ತಾರೆ. ಭಾಗ್ಯ, ಭಾಗ್ಯ ಅನ್ನುತ್ತಲೇ ನಿಷ್ಠಾವಂತ ಅಧಿಕಾರಿಗಳ ಬದುಕುವ ಭಾಗ್ಯವನ್ನೇ ಸಿದ್ದರಾಮಯ್ಯ ಕಿತ್ತುಕೊಂಡುಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹರಿಹಾಯ್ದಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರ ಶೇಖರನ್‌ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಡಿಕೆ ರವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿವಿಧ ‘ಭಾಗ್ಯ’ಗಳ ಹೆಸರಿನಲ್ಲಿ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳ ಜೀವ ತೆಗೆಯುತ್ತಿದೆ’ ಎಂದು ಆರೋಪಿಸಿದರು. ಎಸ್‌ಟಿ ನಿಗಮದ ಮೊತ್ತವನ್ನು ಐಟಿ ಕಂಪನಿಗೆ ವರ್ಗಾಯಿಸಲಾಗಿದೆ. ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಹಣವನ್ನು ಮೀಸಲಿಡಲಾಗಿಟ್ಟಿದ್ದರೇ ಐಟಿ ಕಂಪನಿಗೆ ಏಕೆ ವರ್ಗಾವಣೆ ಮಾಡಲಾಗುತ್ತಿತ್ತು ಎಂದು ಪ್ರಶ್ನಿಸಿದರು.

ಹಣ ವರ್ಗಾವಣೆಯಲ್ಲಿ ಯಾವುದೇ ಸಚಿವರು ಭಾಗಿಯಾಗಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ, ಹಣಕಾಸು ಸಚಿವಾಲಯದ ಅನುಮತಿ ಇಲ್ಲದೇ ಇಷ್ಟೊಂದು ದೊಡ್ಡ ಮೊತ್ತದ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ, ಹಣಕಾಸು ಸಚಿವರಾಗಿದ್ದ ನೀವು ಏನು ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಹಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಿದಾಗ ಅದು ರಾಜ್ಯದ ಮೇಲೆ ಹೇಗೆ ಪ್ರತಿಫಲಿಸುತ್ತದೆ? ಚಂದ್ರಶೇಖರನ್ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಕಾರ್ಯಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದರು. ಚಂದ್ರಶೇಖರನ್‌ಗೆ ಕೊರೊನಾ ಸೋಂಕು ತಗುಲಿದಾಗ ಅವರ ಜೀವ ಉಳಿಸಲು ಅವರ ಕುಟುಂಬ ಸಾಲ ಮಾಡಬೇಕಾಗಿ ಬಂದಿರುವುದು ನೋವಿನ ಸಂಗತಿ ಎಂದರು. ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ ಅಶೋಕ, ಈ ಭ್ರಷ್ಟಾಚಾರ ಪ್ರಕರಣದಲ್ಲಿ ಮೊದಲ ವಿಕೆಟ್ ಶೀಘ್ರದಲ್ಲೇ ಬೀಳಲಿದೆ ಮತ್ತು ಬಿಜೆಪಿ ಅದಕ್ಕಾಗಿ ಹೋರಾಡುತ್ತದೆ ಎಂದು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *