ರಾಯಚೂರು: ಪದವೀಧರರ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ಸವಾಲು

ಹೈಲೈಟ್ಸ್‌:

  • ವಿಧಾನ ಪರಿಷತ್‌ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಜೂ.3 ರಂದು ಮತದಾನ
  • ಪದವೀಧರರ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ಸವಾಲು
  • ಪದವೀಧರ ಮತದಾರರ ಮಾಹಿತಿ ಕೈಯಲ್ಲಿ ಇದ್ದರೂ ಅವರ ಸಂಪೂರ್ಣ ವಿಳಾಸ ಯಾರಿಗೂ ಸಿಗುತ್ತಿಲ್ಲ

ಸಿಂಧನೂರು : ಜೂ.3 ರಂದು ನಡೆಯಲಿರುವ ವಿಧಾನ ಪರಿಷತ್‌ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆಗೂ ಮುನ್ನ, ಪದವೀಧರರ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ.

ಪದವೀಧರ ಮತದಾರರ ಮಾಹಿತಿ ಕೈಯಲ್ಲಿ ಇದ್ದರೂ ಅವರ ಸಂಪೂರ್ಣ ವಿಳಾಸ ಯಾರಿಗೂ ಸಿಗುತ್ತಿಲ್ಲ. ಹೀಗಾಗಿ, ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ಫೋಟೊ ಆಧಾರದಲ್ಲಿಯೇ ಆಯಾ ಊರುಗಳಲ್ಲಿರುವ ಮುಖಂಡರನ್ನು ಸಂಪರ್ಕಿಸಿ, ಮತದಾರರನ್ನು ಗುರುತಿಸುವ ಕೆಲಸ ನಡೆದಿದೆ. ಮತದಾರರ ಮನೆಗಳಿಗೆ ತೆರಳಿ ಮತದಾನ ಮಾಡುವಂತೆಯೂ ರಾಜಕೀಯ ಮುಖಂಡರು ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಅಸಮಾಧಾನ:

ವಿಧಾನಪರಿಷತ್‌ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಲಬುರಗಿ, ಬೀದರ್‌ ಭಾಗದವರಿಗೆ ಪ್ರತಿ ಬಾರಿ ಟಿಕೆಟ್‌ ನೀಡುತ್ತಿವೆ. ಟಿಕೆಟ್‌ ಪಡೆದು ಜಯಗಳಿಸಿದವರು, ಐದು ವರ್ಷದ ಅವಧಿಯಲ್ಲಿ ಪದವೀಧರರ ಸಮಸ್ಯೆ ಕೇಳಲು ಆಗಮಿಸುವುದೇ ಅಪರೂಪ. ಕಾಂಗ್ರೆಸ್‌ ಪಕ್ಷದಿಂದ ಕಳೆದ ಬಾರಿ ವಿಧಾನಪರಿಷತ್‌ ಸದಸ್ಯರಾಗಿದ್ದ ಡಾ.ಚಂದ್ರಶೇಖರ ಪಾಟೀಲ್‌, ಈ ಬಾರಿಯೂ ಸ್ಪರ್ಧಿಸಿದ್ದಾರೆ.

ಆದರೆ, ಕಳೆದ ಐದು ವರ್ಷದಲ್ಲಿ ಅವರು ಸಿಂಧನೂರಿಗೆ ಬಂದು ಪದವೀಧರ ಮತದಾರರನ್ನು ಬೇಡಿಕೆ ಆಲಿಸಿಲ್ಲ ಎಂಬುದು ಪ್ರಜ್ಞಾವಂತರ ಅಸಮಾಧಾನವಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಮುಖ ನೋಡಿದವರು, ಮತ್ತೆ ಚುನಾವಣೆಯಲ್ಲಿಯೇ ದರ್ಶನ ಪಡೆಯಬೇಕು ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ.

ಪದವೀಧರರ ನಿರಾಸಕ್ತಿ:

ಮಧ್ಯವರ್ತಿಗೆ ಅರ್ಜಿ ನೀಡದೆ, ನೇರವಾಗಿ ಚುನಾವಣಾ ಶಾಖೆಯಲ್ಲಿಅರ್ಜಿ ಸಲ್ಲಿಸಿದರೆ ಮತದಾನಕ್ಕೆ ಅವಕಾಶ ಸಿಗುತ್ತಿತ್ತು ಎಂದು ಪದವೀಧರರು ಗೊಣಗುತ್ತಿದ್ದಾರೆ. ತಾಲೂಕಿನಲ್ಲಿ ಪದವೀಧರರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ, ಮತದಾನಕ್ಕೆ ಹೆಚ್ಚಿನ ಸಂಖ್ಯೆಯ ಜನತೆ ಮುಂದಾಗುತ್ತಿಲ್ಲ. ಈ ಬಗ್ಗೆಯೂ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸಿ, ಮತದಾರರ ಸಂಖ್ಯೆ ಹೆಚ್ಚಿಸಬೇಕಿದೆ.

ಮತಕ್ಕಾಗಿ ಆಮಿಷ?

ಈಗಾಗಲೇ ಪ್ರಮುಖ ಪಕ್ಷದವರು ಪದವೀಧರ ಮತದಾರರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ್‌, ಬಿಜೆಪಿಯ ಅಮರನಾಥ ಪಾಟೀಲ್‌, ಪಕ್ಷೇತರರಾದ ಪ್ರತಾಪರೆಡ್ಡಿ ಬಳ್ಳಾರಿ, ಶಿವಕುಮಾರ ಹಿರೇಮಠ ಇವರ ಹೆಸರುಗಳು ಮಾತ್ರ ಕ್ಷೇತ್ರದಲ್ಲಿ ಚಾಲ್ತಿಯಲ್ಲಿ ಇವೆ.

ಪ್ರಮುಖ ಪಕ್ಷದವರು ಮತದಾರರನ್ನು ಸೆಳೆಯಲು ಊಟೋಪಚಾರ ಹಾಗೂ ಹಣದ ಆಮಿಷವೊಡ್ಡಿದ್ದಾರೆ ಎಂಬ ಚರ್ಚೆಯೂ ಶುರುವಾಗಿದೆ. ಮತದಾನಕ್ಕೆ ಇನ್ನು ಮೂರು ದಿನ ಇರುವುದರಿಂದ ಪದವೀಧರರನ್ನು ಸೆಳೆಯಲು ಯಾವ ರೀತಿ ಕಸರತ್ತು ಮಾಡಲಿದ್ದಾರೋ? ಕಾದು ನೋಡಬೇಕಿದೆ.

ವಿಧಾನಪರಿಷತ್‌ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದವರು, ಚುನಾವಣೆಯಲ್ಲಿ ಗೆದ್ದ ಬಳಿಕ ಮತದಾರರ ಕಷ್ಟಗಳನ್ನು ಕೇಳಿದ್ದೇ ಅಪರೂಪ. ಗೆದ್ದವರು ಸಮಸ್ಯೆಗಳಿಗೆ ಸ್ಪಂದಿಸಬೇಕು. ಕ್ಷೇತ್ರ ಎಷ್ಟೇ ದೊಡ್ಡದಿದ್ದರೂ, ಈ ಭಾಗದ ಪದವೀಧರರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತರನ್ನು ಆಯ್ಕೆ ಮಾಡಬೇಕು. ಚುನಾವಣೆಯಲ್ಲಿ ಗೆದ್ದು ನಮ್ಮನ್ನು ಮರೆಯುವವರನ್ನು ತಿರಸ್ಕರಿಸಬೇಕು.

ಪದವೀಧರರು ಕಡ್ಡಾಯವಾಗಿ ಮತದಾನ ಮಾಡಿ

ಸಿಂಧನೂರು: ವಿಧಾನಪರಿಷತ್‌ ಈಶಾನ್ಯ ಪದವೀಧರ ಕ್ಷೇತ್ರದ ಮತದಾನವು ಜೂ.3 ರಂದು ಬೆ.8 ರಿಂದ ಮ.4 ರವರೆಗೆ ನಡೆಯಲಿದೆ ಎಂದು ತಹಸೀಲ್ದಾರ್‌ ಅರುಣ್‌ ಎಚ್‌.ದೇಸಾಯಿ ತಿಳಿಸಿದ್ದಾರೆ.

ಸಿಂಧನೂರು ನಗರ ವ್ಯಾಪ್ತಿಯಲ್ಲಿ ತಹಸೀಲ್ದಾರ್‌ ಕಾರ್ಯಾಲಯ (ನ್ಯಾಯಾಲಯ ಸಭಾಂಗಣ), ತಹಸೀಲ್ದಾರ್‌ ಕಾರ್ಯಾಲಯ(ಸಿಬ್ಬಂದಿ ಕೊಠಡಿ ಸಂಖ್ಯೆ-3), ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ(ಸಿಂಧನೂರು ಗ್ರಾಮೀಣ, ಜಾಲಿಹಾಳ, ಸಾಲಗುಂದಾ, ಕುನ್ನಟಗಿ, ಗೊರೇಬಾಳ, ಹುಡಾ, ಬಾದರ್ಲಿ ಕಂದಾಯ ಹೋಬಳಿಗಳ ಎಲ್ಲ ಅರ್ಹ ಮತದಾರರು ಮತದಾನ ಮಾಡಬಹುದು), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುರುವಿಹಾಳ (ತುರುವಿಹಾಳ ಮತ್ತು ಗುಂಜಳ್ಳಿ ಹೋಬಳಿ), ಸರಕಾರಿ ಪ್ರೌಢ ಶಾಲೆ ಜವಳಗೇರಾ (ಜವಳಗೇರಾ, ವಲ್ಕಂದಿನ್ನಿ, ಹೆಡಗಿನಾಳ ಹೋಬಳಿಗಳ ವ್ಯಾಪ್ತಿ) ಮತಗಟ್ಟೆಗಳಿದ್ದು, ಮತದಾರರು ಮತದಾನ ಮಾಡಬಹುದಾಗಿದೆ. ಪದವೀಧರ ಪುರುಷ ಮತದಾರರು 2832, ಮಹಿಳೆ 1257 ಸೇರಿ ಒಟ್ಟು 4089 ಮತದಾರರು ಇದ್ದಾರೆ. ನೋಂದಾಯಿತ ಅರ್ಹ ಪದವೀಧರರು ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *