ಜೂ.4ರ ಬಳಿಕ ಕಾಂಗ್ರೆಸ್ ಸರಕಾರ ಪತನ: ಯತ್ನಾಳ್ ಹೊಸ ಬಾಂಬ್

ಕಲಬುರಗಿ:ಮೇ.: ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರಕಾರ ಬಿದ್ದು ಹೋಗಲಿದೆ ಎಂದು ಬಿಜೆಪಿಯ ಫೈರ್ ಬ್ರ್ಯಾಂಡ್ ಖ್ಯಾತಿಯ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದ ಬಹಳಷ್ಟು ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಏಕ್‍ನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಮಾತನಾಡಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಗೊಂಡು ಒಂದು ವರ್ಷವಾದರೂ ಏನೂ ಅಭಿವೃದ್ಧಿ ಆಗಿಲ್ಲ. ಹೀಗಂತ ಖುದ್ದು ಕಾಂಗ್ರೆಸ್ ಶಾಸಕರೇ ಅಳಲು ತೋಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅನುದಾನ ಸಿಗದೆ ಶಾಸಕರು ಬೇಸತ್ತಿದ್ದಾರೆ. ಹೀಗಾಗಿ, ಅವರದೇ ಪಕ್ಷದವರ ಒಳಜಗಳದಿಂದ ಸರಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು.

ಸಂಸದ ಪ್ರಜ್ವಲ್ ರೇವಣ್ಣ ಬಂಧನದ ಕುರಿತು ಪ್ರಸ್ತಾಪಿಸಿದ ಅವರು, ಆರೋಪ ಬಂದ ಮೇಲೆ ಓಡಿ ಹೋಗಬಾರದು. ಓಡಿ ಹೋಗುವುದರಿಂದ ಪ್ರಕರಣದ ತೀವ್ರತೆ ದೊಡ್ಡದಾಗುತ್ತದೆ. ಇದು ಅಕ್ಷಮ್ಯ ಅಪರಾಧ ಎಂದರಲ್ಲದೆ, ಎಸ್‍ಐಟಿ ಹೇಗೆ ತನಿಖೆ ನಡೆಸುತ್ತಿದೆ ಎಂಬುದನ್ನು ನೋಡಬೇಕು. ಮೇಲಾಗಿ, ಪ್ರಜ್ವಲ್ ಡ್ರೈವರ್ ಈಗ ಎಲ್ಲಿದ್ದಾನೆ? ಪೆನ್‍ಡ್ರೈವ್ ಬಹಿರಂಗ ಮಾಡಿದ್ದು ಯಾರು? ಎಂಬುದು ಮೊದಲು ಗೊತ್ತಾಗಬೇಕು. ಒಟ್ಟಾರೆ, ದೇವೆಗೌಡರ ಕುಟುಂಬವನ್ನು ಟಾರ್ಗೆಟ್ ಮಾಡುವ ಮೂಲಕ ರಾಜ್ಯದಲ್ಲಿ ಹಲ್ಕಾ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಕ್ಕಲಿಗರ ನಾಯಕರಾಗಲು ಕೆಲವರು ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಇದೇ ವೇಳೆ ಯತ್ನಾಳ್ ಕೆಂಡಕಾರಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ನಾಗೇಂದ್ರ ಒಬ್ಬನೇ ಹಣ ತಿಂದಿಲ್ಲ. ಇದರಲ್ಲಿ ರಾಹುಲ್ ಗಾಂಧಿಯಿಂದ ಹಿಡಿದು ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರು ಹಣ ತಿಂದಿದ್ದಾರೆ. ಸುರ್ಜೆವಾಲಾ ಕಾಂಗ್ರೆಸ್ ಪಕ್ಷದ ಎಟಿಎಂ ಇದ್ದಂತೆ. ಈ ಗಿರಾಕಿ ಪ್ರತಿ ತಿಂಗಳು ಹಣ ವಸೂಲಿ ಮಾಡಲು ಬೆಂಗಳೂರಿಗೆ ಬರುತ್ತಾನೆ ಎಂದು ನೇರ ವಾಗ್ದಾಳಿ ನಡೆಸಿದರಲ್ಲದೆ, ರೂ.187 ಕೋಟಿ ಅಂದಾಜು ಮೊತ್ತದ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ತಾಕೀತು ಮಾಡಿದರು.

ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗುತ್ತಿಲ್ಲ. ಡಿಸಿಎಂ 25 ಪರ್ಸೆಂಟ್ ಕಾಮಗಾರಿಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಾಕವಾಗಿ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ಅಪಪ್ರಚಾರ ಮಾಡಲಾಯಿತು. ಹಾಗೆಲ್ಲಾ 40 ಪರ್ಸೆಂಟ್ ತಿನ್ನೋಕೆ ಆಗೋದಿಲ್ಲ ಎಂದರಲ್ಲದೆ, ಹಾಗೊಂದು 40 ಪರ್ಸೆಂಟ್ ತಿನ್ನಬಹುದು ಎನ್ನುವುದಾದರೆ, ಈಗ ಕಾಂಗ್ರೆಸ್‍ನವರು 100 ಪರ್ಸೆಂಟ್ ಕಮಿಷನ್ ತಿನ್ನುತ್ತಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ ಎಂದರು.


ಪ್ರಿಯಾಂಕ್ ಧ್ಯಾನ ಮಾಡ್ತಿದ್ದಾರಾ?

ಪಿಎಸ್‍ಐ ಹಗರಣದ ಕುರಿತು ಮೇಲಿಂದ ಮೇಲೆ ಹಾರಾಡುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅವ್ಯವಹಾರ ಮತ್ತು ನಿಗಮದ ಅಧಿಕಾರಿಯ ಆತ್ಮಹತ್ಯೆ ಕುರಿತು ಏನೂ ಮಾತನಾಡದೆ ಬಾಯಿ ಬಂದ್ ಮಾಡಿಕೊಂಡು ಕುಳಿತಿದ್ದಾರೆ. ಅವರು ಬಹುಶಃ ಧ್ಯಾನಕ್ಕೆ ಸರಿದಂತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.

ಈ ಹಗರಣ ಕುರಿತಂತೆ ಕೇವಲ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಾಜೀನಾಮೆ ಕೊಡಬೇಕು. ಮೇಲಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.


ದುರ್ದೈವ, ನಮ್ಮವರು ಹೊರಗೇ ಬರಲ್ಲ!

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಕೌಂಟಿಗೆ ದುಡ್ಡು ಹಾಕುತ್ತಾರೆ ಎಂಬ ವದಂತಿಯನ್ನೇ ನಿಜ ಎಂದು ನಂಬಿಕೊಂಡು ಮುಸ್ಲಿಂ ಮಹಿಳೆಯರು ಅಕೌಂಟ್ ತೆರೆಯಲು ಮುಗಿ ಬೀಳುತ್ತಿದ್ದಾರೆ. ಇನ್ನೊಂದೆಡೆ, ನಮ್ಮ ಜನರು ಓಟು ಮಾಡಲು ಸಹ ಹೊರಗೆ ಬರೋದಿಲ್ಲ. ಇದಕ್ಕಿಂತಲೂ ದುರ್ದೈವ ಏನಿರಲು ಸಾಧ್ಯ? ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬೇಸರದಿಂದ ಪ್ರಶ್ನಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *