ಇಂಡಿ ಮೈತ್ರಿಗೆ ಎಷ್ಟಿ ಸ್ಥಾನ ಸಿಗಬಹುದು? ಖರ್ಗೆ ವಿಶ್ವಾಸವೇನು? ಕೇಜ್ರಿವಾಲ್ ಲೆಕ್ಕಾಚಾರವೆಷ್ಟು?

ಹೈಲೈಟ್ಸ್‌:

  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದಿಲ್ಲಿಯ ನಿವಾಸದಲ್ಲಿ ಐಎನ್‌ಡಿಐಎ ಕೂಟದ ನಾಯಕರ ಸಭೆ
  • ಎಕ್ಸಿಟ್‌ ಪೋಲ್‌ ಕುರಿತು ಚರ್ಚೆಯಲ್ಲಿ ಭಾಗಿಯಾಗಲು, ಜೂನ್ ನಾಲ್ಕರ ಕಾರ್ಯತಂತ್ರಗಳ ಬಗ್ಗೆ ನಿರ್ಣಯ
  • ಮತ ಎಣಿಕೆ ಪೂರ್ಣಗೊಳ್ಳದ ಹೊರತು ಎಣಿಕೆ ಕೇಂದ್ರ ತೊರೆಯದಂತೆ ಕಾರ್ಯಕರ್ತರಿಗೆ ಖರ್ಗೆ ಖಡಕ್‌ ಸೂಚನೆ

ಹೊಸದಿಲ್ಲಿ: ”ಲೋಕಸಭೆ ಚುನಾವಣೆಯಲ್ಲಿ ಐಎನ್‌ಡಿಐಎಗೆ 295 ಸ್ಥಾನ ಬರುವುದು ನಿಶ್ಚಿತ. ನಮ್ಮ ಆಂತರಿಕ ಸಮೀಕ್ಷೆಗಳು ಇದನ್ನು ಖಚಿತಪಡಿಸಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಯಾವುದೇ ಗೊಂದಲವಿಲ್ಲ, ಕೇಂದ್ರದಲ್ಲಿ ಸರಕಾರ ರಚಿಸುತ್ತೇವೆ,” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇವೇಳೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಸಹ 295 ಸ್ಥಾನ ನಮ್ಮ ಮೈತ್ರಿಕೂಟಕ್ಕೆ ಸಿಗುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಶನಿವಾರ ಲೋಕಸಭೆ ಚುನಾವಣೆಯ ಕೊನೆ ಹಂತದ ಮತದಾನಕ್ಕೆ ತೆರೆಬೀಳುವ ಕೆಲವೇ ಗಂಟೆಗಳ ಮುನ್ನ ಖರ್ಗೆ ಅವರ ದಿಲ್ಲಿ ನಿವಾಸದಲ್ಲಿ ಐಎನ್‌ಡಿಐಎ ನಾಯಕರು ಸಭೆ ಸೇರಿ ಸುಮಾರು ಎರಡೂವರೆ ಗಂಟೆ ಚರ್ಚೆ ನಡೆಸಿದರು. ಜೂ.4ರಂದು ಫಲಿತಾಂಶ ಪ್ರಕಟವಾದ ಬಳಿಕ ಕೈಗೊಳ್ಳಬೇಕಾದ ಕಾರ‍್ಯತಂತ್ರಗಳ ಕುರಿತು ನಾಯಕರು ಚರ್ಚಿಸಿದರು. ಜೂನ್‌ 4ರಂದು ಮತ ಎಣಿಕೆ ನಡೆಯಲಿದ್ದು, ಅಂದು ಮೈತ್ರಿಕೂಟದ ನಾಯಕರು ಯಾವ ನಡೆ ಅನುಸರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚಿಸಲಾಗಿದೆ.

ಸಭೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ಎನ್‌ಸಿಪಿ ಶರದ್‌ಚಂದ್ರ ಬಣದ ಶರದ್‌ ಪವಾರ್‌, ದಿಲ್ಲಿಸಿಎಂ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಎಡಪಕ್ಷಗಳ ನಾಯಕರಾದ ಸೀತಾರಾಂ ಯೆಚೂರಿ, ಡಿ. ರಾಜಾ, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಸೇರಿದಂತೆ ಪ್ರತಿಪಕ್ಷಗಳ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಖರ್ಗೆ ಅವರು, ”ಶನಿವಾರ ಸಂಜೆ ಟಿವಿಗಳಲ್ಲಿ ಬಿತ್ತರಿಸಲಾಗುವುದು ಸರಕಾರಿ ಮತಗಟ್ಟೆ ಸಮೀಕ್ಷೆಯೇ ಹೊರತು ಜನತಾ ಸಮೀಕ್ಷೆಯಲ್ಲ. ಜನರ ನಾಡಿಮಿಡಿತ ಏನೆಂಬುದು ನಮಗೆ ಗೊತ್ತಿದೆ. ನಿಜವಾದ ಜನತಾ ಸಮೀಕ್ಷೆಯ ಲೆಕ್ಕಾಚಾರ ನಮ್ಮ ಬಳಿ ಇದೆ. ನಾವು 295 ಸೀಟು ಗೆಲ್ಲುತ್ತೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು, ನಮ್ಮ ಐಎನ್‌ಡಿಐಎ ಸರಕಾರ ರಚಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ”ಶನಿವಾರ ಸಂಜೆ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಿವೆ. ತಮ್ಮದೇ ವ್ಯಾಖ್ಯಾನ ಮಾಡಲಿವೆ. ಆದರೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ,” ಎಂದು ಹೇಳಿದರು.

ಕೇಜ್ರಿವಾಲ್‌ ಲೆಕ್ಕಾಚಾರ ಹೀಗಿದೆ

”ನಮ್ಮ ಆಂತರಿಕ ಸಮೀಕ್ಷೆಯ ಲೆಕ್ಕಾಚಾರದಂತೆ ‘ಐಎನ್‌ಡಿಐಎ’ 295ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂಬ ವಿಶ್ವಾಸವಿದೆ. ಬಿಜೆಪಿ ಸುಮಾರು 220 ಸ್ಥಾನಗಳನ್ನು ಪಡೆಯಬಹುದು. ಎನ್‌ಡಿಎ 235 ಸ್ಥಾನಗಳನ್ನು ಗಳಿಸಬಹುದು. ಕೇಂದ್ರದಲ್ಲಿ ಸದೃಢ ಸರಕಾರ ರಚಿಸುವತ್ತ ಐಎನ್‌ಡಿಐಎ ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ,” ಎಂದು ಕೇಜ್ರಿವಾಲ್‌ ಹೇಳಿದರು.

ಮೆಹಬೂಬಾ, ಮಮತಾ ಗೈರು

ಈ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಗೈರಾಗಿದ್ದರು. ”ರೆಮಲ್‌ ಚಂಡಮಾರುತದ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ಮಮತಾ ಬ್ಯಾನರ್ಜಿ ಕಾರಣ ನೀಡಿದ್ದಾರೆ. ”ನನ್ನ ತಾಯಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ,” ಎಂದು ಮೆಹಬೂಬಾ ಮುಫ್ತಿ ನೆಪ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *