ಕಲಬುರಗಿ ಪೀಠಕ್ಕೆ ನೇಮಕಗೊಂಡಿರುವ ಡಾಕಪ್ಪನವರ್ ಬೆಂಗಳೂರಿನಲ್ಲಿ ದರ್ಬಾರ್‌! ಹೀಗಾದ್ರೆ ಹೇಗೆ ಎಂದು ಕೇಳ್ತಿದ್ದಾರೆ ಜನ

ಹೈಲೈಟ್ಸ್‌:

  • ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠಕ್ಕೆ ನಿಯೋಜನೆಗೊಂಡಿದ್ದರೂ ತೆರಳದ ಆಯುಕ್ತ
  • ಆಯೋಗದ ಬೆಂಗಳೂರಿನ ಕಛೇರಿಯಲ್ಲೇ ಕಳೆದೊಂದು ತಿಂಗಳಿಂದ ಇರುವ ಡಾಕಪ್ಪನವರ್
  • ಕಲಬುರಗಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಕಚೇರಿ, ಸಿಬ್ಬಂದಿ ಎಲ್ಲವೂ ವ್ಯರ್ಥ

ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠಕ್ಕೆ ನೇಮಕಗೊಂಡಿರುವ ಆಯುಕ್ತ ರವೀಂದ್ರ ಗುರುನಾಥ್‌ ಡಾಕಪ್ಪನವರ್‌ ಕಳೆದೊಂದು ತಿಂಗಳಿನಿಂದ ಬೆಂಗಳೂರಿನ ಮಾಹಿತಿ ಹಕ್ಕು ಆಯೋಗದಲ್ಲಿ ಸುಖಾಸುಮ್ಮನೆ ದರ್ಬಾರ್‌ ನಡೆಸುತ್ತಿದ್ದಾರೆ.

ಇದರಿಂದಾಗಿ ಕಲಬುರಗಿಯಲ್ಲಿ ಸುಮಾರು 50 ಲಕ್ಷ ರೂ.ಗಿಂತ ಅಕ ಹಣ ಖರ್ಚು ಮಾಡಿ ತೆರೆದಿರುವ ಕಚೇರಿ ವ್ಯರ್ಥವಾಗಿದೆ. ನಿಯೋಜನೆಗೊಂಡ ಸಿಬ್ಬಂದಿಗೂ ಕೆಲಸವಿಲ್ಲದಂತಾಗಿದೆ. ಅಲ್ಲಿರುವ ಮೇಲ್ಮನವಿಗಳ ಕಡತಗಳು ಧೂಳು ತಿನ್ನುತ್ತಿವೆ. ಹೆಸರಿಗಷ್ಟೇ ಕಲಬುರಗಿ ಪೀಠ ಎಂಬಂತಾಗಿದ್ದು, ಸಾರ್ವಜನಿಕ ಹಣ ವೃಥಾ ಪೋಲಾಗುತ್ತಿದೆ. ಜತೆಗೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜನತೆಗೆ ಅನ್ಯಾಯವಾಗುತ್ತಿದೆ

ನಿಯಮದ ಪ್ರಕಾರ ಕಲಬುರಗಿ ಪೀಠಕ್ಕೆಂದೇ ನೇಮಕಗೊಂಡಿರುವ ಅವರು ಬೆಂಗಳೂರಿನಲ್ಲಿ ಕಲಾಪ ನಡೆಸುವಂತಿಲ್ಲ. ಅದರೆ ಅವರು ನೇಮಕಗೊಂಡಾಗ ಕಲಬುರಗಿಯಲ್ಲಿ ಪೀಠ ಸ್ಥಾಪನೆಯಾಗದ ಕಾರಣ ಕೆಲ ತಿಂಗಳು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸಿದ್ದರು. ಡಾ. ಡಿ.ಎಂ. ನಂಜುಂಡಪ್ಪ ವರದಿಯಂತೆ ಅಸಮಾನತೆ ನಿವಾರಣೆ ಉದ್ದೇಶದಿಂದ ಸರಕಾರ ತನ್ನ ಹಲವು ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ತೆರೆಯಲು ನಿರ್ಧರಿಸಿತ್ತು. ಅದರಂತೆ ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಆಯೋಗದ ಪೀಠ ಕಾರಾರ‍ಯರಂಭ ಮಾಡಿತ್ತು. ಕಲಬುರಗಿಯಲ್ಲಿ ಮಾಹಿತಿ ಹಕ್ಕು ಆಯೋಗದ ಪೀಠ ಸ್ಥಾಪನೆ ಆಗಿರಲಿಲ್ಲ.

ನ್ಯಾಯಾಂಗ ನಿಂದನೆ

ನಂತರ ಸುಧಾ ಕಾಟ್ವಾ ಎಂಬುವರು ಹೈಕೋರ್ಟ್‌ನಲ್ಲಿ ಕಲಬುರಗಿಯಲ್ಲಿ ಮಾಹಿತಿ ಹಕ್ಕು ಆಯೋಗದ ಪೀಠ ಸ್ಥಾಪನೆಯಾಗಿಲ್ಲವೆಂದು ಪಿಐಎಲ್‌ ಹೂಡಿದ್ದರು. ಅದರ ಪರಿಣಾಮವಾಗಿ ಮುಖ್ಯ ಮಾಹಿತಿ ಹಕ್ಕು ಆಯುಕ್ತರಾಗಿದ್ದ ಎನ್‌.ಸಿ. ಶ್ರೀನಿವಾಸ ಅವರು ಸರಕಾರದ ನಾನಾ ಇಲಾಖೆಗಳ ಜತೆ ಸಮಾಲೋಚನೆ ನಡೆಸಿ, ಅಗತ್ಯ ಮೂಲಸೌಕರ್ಯ ಒದಗಿಸಿ 2024ರ ಜನವರಿಯಿಂದ ಕಲಬುರಗಿಯಲ್ಲಿ ಮಾಹಿತಿ ಹಕ್ಕು ಆಯೋಗದ ಪೀಠ ಕಾರ್ಯಾರಂಭವಾಗುವಂತೆ ಮಾಡಿದ್ದರು. ಈ ಕುರಿತು ಹೈಕೋರ್ಟ್‌ಗೂ ವರದಿ ಸಲ್ಲಿಸಲಾಗಿತ್ತು.

ಆಯುಕ್ತ ರವೀಂದ್ರ ಡಾಕಪ್ಪ ಅವರು ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೆ ಕಲಬುರಗಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು. ಮೇ ತಿಂಗಳ ಆರಂಭದಲ್ಲಿಬೆಂಗಳೂರಿಗೆ ಬಂದವರು ವಾಪಸ್‌ ಹೋಗಿಲ್ಲ. ಹಾಗಾಗಿ ಕಲಬುರಗಿ ಪೀಠ ಇದ್ದೂ ಇಲ್ಲದಂತಾಗಿದೆ.

”ಕಲಬುರಗಿ ಆಯುಕ್ತರಿಗೆ ಬೆಂಗಳೂರಿನಲ್ಲಿಏನೂ ಕೆಲಸವಿಲ್ಲ. ಆದರೂ ಅವರು ಏಕೆ ಇಲ್ಲಿದ್ದಾರೆ ಎಂಬುದು ತಿಳಿಯದಾಗಿದೆ. ಇದರಿಂದ ಕಲಬುರಗಿ ಪೀಠದ ವ್ಯಾಪ್ತಿಗೆ ಒಳಪಡುವ 7 ಜಿಲ್ಲೆಗಳ ಆರ್‌ಟಿಐ ಮೇಲ್ಮನವಿದಾರರಿಗೆ ಮಾಹಿತಿ ಸಿಗುವುದು ವಿಳಂಬವಾಗುತ್ತಿದೆ. ಅಲ್ಲದೆ, ಹೈಕೋರ್ಟ್‌ಗೆ ಪೀಠ ಕಾರಾರ‍ಯರಂಭ ಮಾಡಿದೆ ಎಂದು ಮುಚ್ಚಳಿಕೆ ನೀಡಲಾಗಿದ್ದು, ನ್ಯಾಯಾಂಗ ನಿಂದನೆಯಾಗಲಿದೆ” ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ‘ವಿಕ’ಗೆ ತಿಳಿಸಿದರು.

ಆರ್‌ಟಿಐ ಮಾಹಿತಿಗೂ ಉತ್ತರವಿಲ್ಲ

ಈ ಮಧ್ಯೆ, ಕಲಬುರಗಿ ಮಾಹಿತಿ ಆಯುಕ್ತರು ಬೆಂಗಳೂರಿನಲ್ಲಿಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಎಂ.ಪಿ. ವಾಗೇಶ್‌ ಮಾಹಿತಿ ಕೇಳಿ ಮೇ 16ರಂದು ಅರ್ಜಿ ಸಲ್ಲಿಸಿ ಇದರಿಂದ ಕಲ್ಯಾಣ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ. ಆದರೆ ಅದಕ್ಕೆ ಈವರೆಗೆ ಉತ್ತರಿಸಿಲ್ಲ. ಅವರು ಅರ್ಜಿಯಲ್ಲಿ”ಪ್ರಸ್ತುತ ಕಲಬುರಗಿ ಮಾಹಿತಿ ಆಯೋಗದ ಪೀಠದಲ್ಲಿ ಕಾರ್ಯನಿರ್ವಹಿಸಿತ್ತಿರುವ ಆಯುಕ್ತರು ಕೆಲ ದಿನಗಳಿಂದ ಬೆಂಗಳೂರು ಪೀಠದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಇದಕ್ಕೆ ಕಾರಣ ನೀಡಲು ಮತ್ತು ಆ ಸಂಬಂಧ ಹೊರಡಿಸಿರುವ ಆದೇಶದ ಪ್ರತಿ ಹಾಗೂ ಈವರೆಗೆ ಆಯುಕ್ತರಿಗೆ ಕಾರ್ಯ ನಿರ್ವಹಿಸಲು ಆದೇಶಿಸಿದ ದೃಢೀಕೃತ ನಕಲು ಪ್ರತಿ ನೀಡಬೇಕು,” ಎಂದು ಕೋರಿದ್ದಾರೆ.

ಹೌದು, ಒಂದು ತಿಂಗಳಿಂದ ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಲಬುರಗಿ ಪೀಠಕ್ಕೆ ಸೇರಿದ ಸಾಕಷ್ಟು ಕಡತಗಳು ಬಾಕಿ ಇದ್ದವು. ಅವುಗಳನ್ನು ವಿಲೇವಾರಿ ಮಾಡಲು ಮತ್ತು ಆ ಪೀಠಕ್ಕೆ ಸಂಬಂಸಿದ ಹಲವು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಸದ್ಯ 3,100 ಮೇಲ್ಮನವಿ ಬಾಕಿ ಇದ್ದು, ಆ ಪೈಕಿ ಜೂ.18ರ ನಂತರ ಆ.31ರೊಳಗೆ 1,220 ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನೋಟಿಸ್‌ಗಳನ್ನು ಕಳುಹಿಸಲಾಗಿದೆ. 10 ದಿನಗಳ ನಂತರ ಕಲಬುರಗಿಯಲ್ಲೇ ಕಾರ್ಯನಿರ್ವಹಿಸಲಿದ್ದೇನೆ.
ಡಾ. ರವೀಂದ್ರ ಗುರುನಾಥ್‌ ಡಾಕಪ್ಪನವರ್‌ ಮಾಹಿತಿ ಹಕ್ಕು ಆಯುಕ್ತ, ಕಲಬುರಗಿ

ಬೆಳಗಾವಿ ಪೀಠ ಎರಡು ವರ್ಷದಿಂದ ಖಾಲಿ

ಈ ಮಧ್ಯೆ ಬೆಳಗಾವಿಯ ಮಾಹಿತಿ ಹಕ್ಕು ಪೀಠ ಎರಡು ವರ್ಷದಿಂದ ಖಾಲಿ ಇದೆ. ಅದರ ಆಯುಕ್ತರಾಗಿದ್ದ ಬಿ.ವಿ. ಗೀತಾ 2022ರ ಏಪ್ರಿಲ್‌ನಲ್ಲಿ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡ ನಂತರ ಆ ಹುದ್ದೆ ಖಾಲಿ ಇದೆ. ಈವರೆಗೂ ಸರಕಾರ ಆ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಿಲ್ಲ. ಆ ಒಂದು ಹುದ್ದೆ ಜತೆಗೆ ಬೆಂಗಳೂರಿನಲ್ಲಿ ಖಾಲಿ ಇರುವ 6 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದ್ದು, 2500ಕ್ಕೂ ಅಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಸುಮ್ಮನಾಗಿದ್ದ ಸರಕಾರ ಈ ತಿಂಗಳ ಮಧ್ಯಭಾಗದಲ್ಲಿ ಆಯುಕ್ತರ ಹುದ್ದೆಗಳಿಗೆ ನೇಮಕ ಆಖೈರು ಮಾಡುವ ಸಾಧ್ಯತೆ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *