ರಾಜ್ಯದ ಅಂಗನವಾಡಿಗಳ ಸ್ಥಿತಿ ಶೋಚನೀಯ; ಮೂಲಸೌಕರ್ಯ ಕೊರತೆ, ಕಳಪೆ ಆಹಾರ ಪೂರೈಕೆ ಜೊತೆಗೆ ಹಲವು ಲೋಪದೋಷ

ಹೈಲೈಟ್ಸ್‌:

  • ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಪೌಷ್ಟಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿಯಿಂದ ಅಂಗನವಾಡಿಗಳ ಸ್ಥಿತಿಗತಿ ಪರಿಶೀಲನೆ
  • ಇತ್ತೀಚೆಗೆ ಬೆಂಗಳೂರಿನ ನಾಲ್ಕು ಅಂಗನವಾಡಿಗೆ ನಿವೃತ್ತ ನ್ಯಾ ಎಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಭೇಟಿ
  • ಈ ವೇಳೆ ಮೂಲಸೌಕರ್ಯಗಳ ಕೊರತೆ, ಕಳಪೆ ದರ್ಜೆಯ ಆಹಾರ ವಿತರಣೆ ಸೇರಿ ಹಲವು ಲೋಪದೋಷ ಬೆಳಕಿಗೆ

ಬೆಂಗಳೂರು: ರಾಜ್ಯದಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ. ಕಟ್ಟಡ, ಶೌಚಾಲಯ ಇನ್ನಿತರೆ ಮೂಲ ಸೌಕರ್ಯಗಳ ಕೊರತೆ, ಕಳಪೆ ದರ್ಜೆಯ ಆಹಾರ ವಿತರಣೆ ಸೇರಿದಂತೆ ಹಲವು ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸುವತ್ತ ಸರಕಾರ ಮುಂದಾಗಬೇಕು ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಪೌಷ್ಟಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿ ಹೇಳಿದೆ.

ನಿವೃತ್ತ ನ್ಯಾ ಎಎನ್‌ ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಇತ್ತೀಚೆಗೆ ಬೆಂಗಳೂರಿನ ನಾಲ್ಕು ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದಾಗ ದುಸ್ಥಿತಿಯ ಚಿತ್ರಣ ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ65 ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ.

ಶೀಘ್ರವೇ ಹೈಕೋರ್ಟಿಗೆ ವರದಿ

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್‌.ರಘುನಾಥ್‌, ” ಎಲ್ಲ ಕಡೆ ಪರಿಶೀಲಿನೆ ನಂತರ ಅಪೌಷ್ಟಿಕತೆ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು? ಅವುಗಳಲ್ಲಿರುವ ಲೋಪದೋಷಗಳು? ಮತ್ತು ಆ ನ್ಯೂನತೆಗಳನ್ನು ಸರಿಪಡಿಸಲು ಏನೇನು ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಶೀಘ್ರವೇ ಹೈಕೋರ್ಟ್‌ಗೆ ಅಂತಿಮ ವರದಿ ವರದಿ ಸಲ್ಲಿಸಲಾಗುವುದು,” ಎಂದು ತಿಳಿಸಿದರು.

”ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ಬೆಂಗಳೂರು ನಗರದ ಸರಬಂಡೆಪಾಳ್ಯ, ಹರಿ ಕಾಲೋನಿ, ಯಾರಬ್‌ ನಗರದ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಅವುಗಳ ಶೋಚನೀಯ ಸ್ಥಿತಿ ಬಯಲಾಯಿತು. ಮಕ್ಕಳಿಗೆ ಶೌಚಾಲಯವಿಲ್ಲ. ಆಟದ ಕಿಟ್‌ ಸೀಲ್‌ ಓಪನ್‌ ಮಾಡಿಲ್ಲ. ಸಿದ್ಧಪಡಿಸಿದ ಆಹಾರವನ್ನು ಸ್ವತಃ ಸಮಿತಿಯ ಸದಸ್ಯರು ತಿಂದು ಪರಿಶೀಲಿಸಿದಾಗ ಅದು ತೀರಾ ಕಳಪೆಯಾಗಿದ್ದು, ಬಾಯಲ್ಲಿಡಲು ಸಾಧ್ಯವಿರಲಿಲ್ಲ. ಕೆಟ್ಟ ವಾಸನೆ ಬರುತ್ತಿತ್ತು,” ಎಂದು ಅವರು ಹೇಳಿದರು.

”ಕೆಲ ಅಂಗನವಾಡಿಗಳಲ್ಲಿ ಪೂರೈಕೆಯಾಗುತ್ತಿರುವ ಕಳಪೆ ಆಹಾರದ ಸ್ಯಾಂಪಲ್‌ ಅನ್ನು ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯಾಗಿ ಕಾಯಲಾಗುತ್ತಿದೆ,” ಎಂದು ತಿಳಿಸಿದರು.

ಜು. 13ಕ್ಕೆ ಮೆಗಾ ಲೋಕ ಅದಾಲತ್‌

”ಜು.13ರಂದು ರಾಜ್ಯಾದ್ಯಂತ ಬೃಹತ್‌ ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಾಗುವುದು. ಇದರಲ್ಲಿ ಗರಿಷ್ಠ ಪ್ರಮಾಣದ ಕೇಸುಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ,” ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಳಿಸಿದರು.

”ಜುಲೈ 29ರಿಂದ ಆಗಸ್ಟ್ 3ರವರೆಗೆ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಲೋಕ ಅದಾಲತ್‌ ನಡೆಯಲಿದೆ. ಅದರಲ್ಲಿ ಸದ್ಯ 900 ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕಕ್ಷಿದಾರರು ಹಾಗೂ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ, ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ,” ಎಂದು ಅವರು ಹೇಳಿದರು.

ಶೆಡ್‌ನಲ್ಲಿಅಂಗನವಾಡಿ ಕೇಂದ್ರ

ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದ ಪರಲಂಕಿ ವಸತಿ ಅಂಗನವಾಡಿ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ತಾತ್ಕಾಲಿಕ ಪತ್ರಾಸ್‌ ಶೆಡ್‌ನಲ್ಲಿ ಕೇಂದ್ರ ನಡೆಯುತ್ತಿದೆ. ಈ ಕೇಂದ್ರಕ್ಕೆ 16 ಮಕ್ಕಳು ದಾಖಲಾಗಿದ್ದಾರೆ. ಆದರೆ ಸುಸಜ್ಜಿತ ಕಟ್ಟಡ ಇಲ್ಲದ್ದರಿಂದ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಪತ್ರಾಸ್‌ ಶೆಡ್‌ನ ಈ ಕೇಂದ್ರಕ್ಕೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬಂದರೂ ಮಕ್ಕಳು ಗೈರಾಗುತ್ತಿದ್ದಾರೆ.

ಮಳೆಗಾಲ ಶುರುವಾಗಿದೆ. ಮುಂಗಾರಿನ ಆರ್ಭಟಕ್ಕೆ ಪತ್ರಾಸ್‌ ಶೆಡ್‌ ಸೋರುತ್ತಿದೆ. ಮಳೆನೀರು ತಡೆಯಲು ಬುಟ್ಟಿ , ಬಕೇಟ್‌ಗಳನ್ನು ಇಡಲಾಗಿದೆ. ಪತ್ರಾಸ್‌ ಹಾರದಿರಲು ಕಲ್ಲುಗಳನ್ನು ಹೇರಲಾಗಿದೆ. ಕೇಂದ್ರದ ಅವ್ಯವಸ್ಥೆಯಿಂದ ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ತೊಂದರೆಯಾಗಿದೆ. ಚಿಕ್ಕ ಮಕ್ಕಳ ಕಲಿಕೆಯ ಕೇಂದ್ರದ ದುಸ್ಥಿತಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಉತ್ತಮ ವ್ಯವಸ್ಥೆಯೊಂದಿಗೆ ಅಂಗನವಾಡಿ ಕೇಂದ್ರ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *