3 ಫ್ಲೋರ್ನ ಸ್ವಂತ ಮನೆ ಹೊಂದಿರೋ ಪವಿತ್ರಾ ಗೌಡ; 1BHK ಬಾಡಿಗೆ ಮನೆಯಲ್ಲಿ ದಿನಕರ್ ತೂಗುದೀಪ ವಾಸ!
ಹೈಲೈಟ್ಸ್:
- ಕಳೆದ 10 ವರ್ಷಗಳಿಂದ ನಾನು, ದರ್ಶನ್ ಪ್ರೀತಿಯಲ್ಲಿದ್ದೇವೆ- ಪವಿತ್ರಾ ಗೌಡ
- ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ದರ್ಶನ್ ಸಹೋದರ ದಿನಕರ್
- ಬೆಂಗಳೂರಿನಲ್ಲಿ 3 ಫ್ಲೋರ್ ಮನೆಯಲ್ಲಿ ವಾಸ ಮಾಡ್ತಿರುವ ಪವಿತ್ರಾ ಗೌಡ
ನಟ ದರ್ಶನ್, ಪವಿತ್ರಾ ಗೌಡ ವಿರುದ್ಧ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪವಿದೆ. ಸದ್ಯ ಇವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಿರುವಾಗ ದರ್ಶನ್ಗೆ ಸಂಬಂಧಪಟ್ಟಂತೆ ಒಂದಷ್ಟು ವಿಷಯಗಳು ಹೊರಗಡೆ ಬರುತ್ತಿವೆ. ಈಗ ದರ್ಶನ್, ದಿನಕರ್ ತೂಗುದೀಪ, ಮೀನಾ ಮಧ್ಯೆ ಮನಸ್ತಾಪ ಇರೋದು ಗೊತ್ತಾಗಿದೆ. ಅಷ್ಟೇ ಅಲ್ಲದೆ ಪವಿತ್ರಾ ಗೌಡಗೆ ಕೋಟ್ಯಂತರ ರೂಪಾಯಿ ಮನೆ, ದಿನಕರ್ ತೂಗುದೀಪಗೆ ಬಾಡಿಗೆ ಮನೆ ಅಂತ ಅನೇಕರು ಬೇಸರ ಹೊರಹಾಕಿದ್ದಾರೆ.
ಸಹೋದರನ ಜೊತೆ ಮುನಿಸು
ಸಾರಥಿ ಸಿನಿಮಾ ಯಶಸ್ಸು ಯಾರದ್ದು ಎಂಬ ವಿಚಾರದ ಮೇಲೆ ದರ್ಶನ್ಗೂ, ದಿನಕರ್ ತೂಗುದೀಪ ಅವರಿಗೂ ಮನಸ್ತಾಪ ಆಗಿದೆ. ಹೀಗಾಗಿ ದರ್ಶನ್ ಅವರು ತಮ್ಮನ ಮೇಲೂ ಹಲ್ಲೆ ಮಾಡಿದ್ದರು ಎಂದು ವರದಿಯಾಗಿದೆ. ಅಂದಹಾಗೆ ಸೂಪರ್ ಹಿಟ್ ‘ಸಾರಥಿ’ ಸಿನಿಮಾವನ್ನು ದಿನಕರ್ ತೂಗುದೀಪ ಅವರೇ ನಿರ್ದೇಶನ ಮಾಡಿದ್ದರು. ಇನ್ನು ತಾಯಿಯ ಜೊತೆಗೂ ದರ್ಶನ್ ಮುನಿಸಿಕೊಂಡಿದ್ದಾರಂತೆ.
ಮೈಸೂರಿನಲ್ಲಿ ತಾಯಿ ಮಾತ್ರ ವಾಸ
ಮೀನಾ ತೂಗುದೀಪ ಅವರು ಮೈಸೂರಿನಲ್ಲಿ ಮನೆಯಲ್ಲಿ ಒಬ್ಬರೇ ಇರುತ್ತಾರೆ. ದರ್ಶನ್ ಅಲ್ಲಿಗೆ ಹೋಗದೆ ವರ್ಷಗಳಾಯ್ತಂತೆ. ಮೈಸೂರಿಗೆ ಹೋದರೂ ಕೂಡ ದರ್ಶನ್ ಅವರು ತಮ್ಮ ತೂಗುದೀಪ ಫಾರ್ಮ್ಹೌಸ್ ಅಥವಾ ಹೋಟೆಲ್ನಲ್ಲಿ ಉಳಿದುಕೊಳ್ತಾರಂತೆ.
ಬಾಡಿಗೆ ಮನೆಯಲ್ಲಿ ಸಹೋದರ ವಾಸ
ದಿನಕರ್ ತೂಗುದೀಪ ಅವರು ಸಂದರ್ಶನವೊಂದರಲ್ಲಿ ತಾವು ಇನ್ನೂ ಬೆಂಗಳೂರಿನಲ್ಲಿ 1BHK ಹೌಸ್ಗೆ ಬಾಡಿಗೆ ಕೊಟ್ಟು ಜೀವನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
3 ಫ್ಲೋರ್ ಇರುವ ಪವಿತ್ರಾ ಗೌಡ ಮನೆ
ಬೆಂಗಳೂರಿನ ಆರ್ ಆರ್ ನಗರದಲ್ಲಿ ಮೂರು ಫ್ಲೋರ್ ಇರುವ ಮನೆಯಲ್ಲಿ ಪವಿತ್ರಾ ಗೌಡ ವಾಸ ಮಾಡುತ್ತಿದ್ದಾರೆ. ಈ ಮನೆಗೆ ಅವರು ಕಾಲಿಟ್ಟು 10 ವರ್ಷಗಳು ಕಳೆದಿದೆಯಂತೆ. ಅಂದಹಾಗೆ ಅವರ ಮಗಳು ಹಾಸ್ಟೆಲ್ನಲ್ಲಿ ಇದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ರೆಡ್ ಕಾರ್ಪೆಟ್ ಎನ್ನುವ ಡಿಸೈನರ್ ಶಾಪ್ ಕೂಡ ಹೊಂದಿದ್ದಾರೆ.
ಕೆಲ ದಿನಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ದುಬಾರಿ ಕಾರ್ ಖರೀದಿ ಮಾಡಿದ್ದರು. ಅದನ್ನು ನೋಡಿ ಪವಿತ್ರಾ ಗೌಡ ಅವರು ದರ್ಶನ್ಗೆ ತನಗೂ ಕಾರ್ ಬೇಕು ಅಂತ ಹಠ ಮಾಡಿದ್ದರಂತೆ. ಹಾಗಾಗಿ 1.5 ತಿಂಗಳ ಹಿಂದೆ ಪವಿತ್ರಾಗೂ ದರ್ಶನ್ ಅವರು ಕಾರ್ ಕೊಡಿಸಿದ್ದರು ಎನ್ನಲಾಗಿದೆ.
ಪವಿತ್ರಾ ಗೌಡ ಅವರ ತಾಯಿ ಮನೆ ಕಡೆ ಬಡತನ ಇಲ್ಲ, ಚೆನ್ನಾಗಿದೆ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಕೂಡ ಆರ್ ಆರ್ ನಗರದಲ್ಲಿ ಮೂರು ಫ್ಲೋರ್ ಮನೆ, ಕೋಟಿ ಬೆಲೆ ಬಾಳುವ ಕಾರ್, ರೆಡ್ ಕಾರ್ಪೆಟ್ ಎನ್ನುವ ಕೋಟಿ ಬೆಲೆ ಬಾಳುವ ಶಾಪ್ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ದರ್ಶನ್ ಅವರು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎನ್ನುವ ಹಾಗೆ ಮಾಡಿದ್ದಾರೆ ಎಂಬ ಮಾತು ವ್ಯಕ್ತವಾಗ್ತಿದೆ.
ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಇದು ಅವರ ವೈಯಕ್ತಿಕ ವಿಚಾರ. ಕೆಲವರು ಸಮಯ, ಸಂದರ್ಭವನ್ನು ಬಳಸಿಕೊಳ್ತಾರೆ, ಇನ್ನೂ ಕೆಲವರು ಕಿತ್ಕೊಳ್ತಾರೆ. ಅವರ ಜವಾಬ್ದಾರಿ ಅವರು ಮರೆಯಬಾರದು” ಎಂದು ಅವರು ಹೇಳಿದ್ದಾರೆ.