ದರ್ಶನ್ ಕೇಸ್‌ಗೆ ದೊಡ್ಡ ತಿರುವು: ರೇಣುಕಾಸ್ವಾಮಿ ಶವದ ಪೋಸ್ಟ್‌ಮಾರ್ಟಂ ಮಾಡಿದ್ದು ಪವಿತ್ರಾ ಗೌಡ ಸ್ನೇಹಿತೆಯ ಪತಿ!
ಹೈಲೈಟ್ಸ್:
- ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಬಂಧನ
- ರೇಣುಕಾಸ್ವಾಮಿ ಮೃತದೇಹದ ಪೋಸ್ಟ್ ಮಾರ್ಟಂ ಮಾಡಿರೋದು ಯಾರು ಗೊತ್ತಾ? ಸಾಕ್ಷ್ಯನಾಶಕ್ಕೆ ನಡೆದಿತ್ತಾ ಸಂಚು?
- ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರ ಆಪ್ತ ಗೆಳತಿ ಸಮತಾ: ಸಮತಾ ಪತಿ ಡಾ ಸುರೇಶ್
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ಗೆಳತಿ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಿರುವಾಗಲೇ, ಈ ಪ್ರಕರಣ ಮತ್ತೊಂದು ದೊಡ್ಡ ತಿರುವು ಪಡೆದುಕೊಂಡಿದೆ. ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ತಿರುಚಲಾಗಿದ್ಯಾ ಎಂಬ ಅನುಮಾನ ಆವರಿಸಿದೆ.
ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾ!
ಪವಿತ್ರಾ ಗೌಡ, ದರ್ಶನ್ ಹಾಗೂ ಇತರೆ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾದರು. ಕಂಬಿ ಹಿಂದೆ ಸೇರಿದ್ಮೇಲೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನ ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದರು ಸಮತಾ. ಈ ಸಮತಾ ಬೇರೆ ಯಾರೂ ಅಲ್ಲ.. ಪವಿತ್ರಾ ಗೌಡ ಅವರ ಕ್ಲೋಸ್ ಫ್ರೆಂಡ್. ಕಳೆದ 3 ವರ್ಷಗಳಿಂದ ಪವಿತ್ರಾ ಗೌಡಗೆ ಸಮತಾ ಜಿಮ್ ಟ್ರೇನರ್ ಆಗಿದ್ರಂತೆ.
ಆರೋಪಿ ಧನರಾಜ್‌ಗೆ ದುಡ್ಡು ಕೊಟ್ಟಿದ್ದು ಸಮತಾ!
ಪವಿತ್ರಾ ಗೌಡ ಸ್ನೇಹಿತೆ ಸಮತಾ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಲು ಉಪಕರಣವೊಂದನ್ನ ಖರೀದಿಸಲಾಗಿತ್ತು. ಉಪಕರಣವನ್ನ ಖರೀದಿಸಿದ ಆರೋಪಿ ಧನರಾಜ್‌ಗೆ ಹಣ ನೀಡಿದ್ದು ಇದೇ ಸಮತಾ ಅಂತೆ. ಆರೋಪಿ ಧನರಾಜ್‌ಗೆ ಗೂಗಲ್ ಪೇ ಮೂಲಕ ಸಮತಾ ಹಣ ಕಳುಹಿಸಿದ್ದರಂತೆ.
‘’ಧನರಾಜ್ ಪರಿಚಯ ಇತ್ತು. ಹಣಕಾಸಿನ ಅಗತ್ಯವಿದ್ದಾಗ ಕೇಳಿ ಪಡೆದು, ವಾಪಸ್ ಮಾಡುತ್ತಿದ್ದ. ಅದೇ ರೀತಿ 3 ಸಾವಿರ ರೂಪಾಯಿ ಕೇಳಿದ್ದಕ್ಕೆ ಕೊಟ್ಟಿದ್ದೆ. ಆದರೆ, ರೇಣುಕಾಸ್ವಾಮಿ ಕೊಲೆ ಬಗ್ಗೆ ಧನರಾಜ್ ಏನೂ ಹೇಳಿಲ್ಲ’’ ಎಂದು ಸಮತಾ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ಈ ಹಿಂದೆ ತಿಳಿಸಿದ್ದವು.
ಪೋಸ್ಟ್ ಮಾರ್ಟಂ ಮಾಡಿದ್ದು ಸಮತಾ ಪತಿ ಸುರೇಶ್!
ಸಮತಾ ವಿಚಾರವಾಗಿ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ರಿವೀಲ್ ಆಗಿದೆ. ರೇಣುಕಾಸ್ವಾಮಿ ಅವರ ಮೃತದೇಹದ ಪೋಸ್ಟ್ ಮಾರ್ಟಂ ಮಾಡಿರೋದು ಬೇರೆ ಯಾರೂ ಅಲ್ಲ.. ಎ1 ಆರೋಪಿ ಪವಿತ್ರಾ ಗೌಡ ಅವರ ಆಪ್ತ ಸ್ನೇಹಿತೆ ಸಮತಾ ಅವರ ಪತಿ ಡಾ.ಸುರೇಶ್ ಎಂದು ವರದಿಯಾಗಿದೆ!
ಡೀಲ್ ಕುರಿತು ಈ ಹಿಂದೆ ವರದಿಯಾಗಿತ್ತು!
ಪೋಸ್ಟ್ ಮಾರ್ಟಂ ರಿಪೋರ್ಟ್ ತಿರುಚಲು ವೈದ್ಯರಿಗೆ ದರ್ಶನ್ ಗ್ಯಾಂಗ್‌ನಿಂದ ಬರೋಬ್ಬರಿ 1 ಕೋಟಿ ರೂಪಾಯಿ ಆಫರ್ ಹೋಗಿದೆ ಎಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು. ‘ಹೃದಯಾಘಾತದಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ’ ಎಂದು ಪೋರ್ಸ್ಟ್ ಮಾರ್ಟಂ ವರದಿ ನೀಡುವಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಪ್ರಭಾವಿ ರಾಜಕಾರಣಿಯೊಬ್ಬರು 1 ಕೋಟಿ ಆಫರ್ ಮುಂದಿಟ್ಟಿದ್ದರಂತೆ ಎಂಬ ವದಂತಿಗಳು ಹಬ್ಬಿದ್ದವು. ‘ಹೃದಯಾಘಾತದಿಂದ ಸಾವು’ ಎಂದು ಅಟಾಪ್ಸಿ ರಿಪೋರ್ಟ್‌ನಲ್ಲಿ ಬಂದರೆ, ಮೃತದೇಹ ವಿಲೇವಾರಿ ಮಾಡಿದವರು ಸಿಕ್ಕಿಬೀಳ್ತಾರೆ, ದರ್ಶನ್ ಮತ್ತು ಪವಿತ್ರಾ ಗೌಡ ಪಾರಾಗಬಹುದು ಅಂತ ಪ್ಲಾನ್ ಆಗಿತ್ತು ಎಂದು ತಿಂಗಳ ಹಿಂದೆ ವರದಿಯಾಗಿತ್ತು. ಈಗ ನೋಡಿದ್ರೆ ಪೋಸ್ಟ್ ಮಾರ್ಟಂ ರಿಪೋರ್ಟ್‌ಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪೊಲೀಸರಿಗೆ ಅನುಮಾನ
ಪೋಸ್ಟ್ ಮಾರ್ಟಂ ವರದಿ ಪೊಲೀಸರ ಕೈ ಸೇರುವ ಮುನ್ನವೇ ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡರನ್ನ ಸಮತಾ ಭೇಟಿ ಮಾಡಿದ್ದರು. ಹೀಗಾಗಿ, ಪೋಸ್ಟ್ ಮಾರ್ಟಂ ವರದಿ ತಿದ್ದುವ ಪ್ರಯತ್ನ ನಡೆದಿದ್ಯಾ ಎಂಬ ಅನುಮಾನ ಪೊಲೀಸರಿಗೆ ಕಾಡಿದೆ. ಹೀಗಾಗಿ, ಸಮತಾ ಮತ್ತವರ ಪತಿ ಡಾ.ಸುರೇಶ್ ಅವರ ಕಾಲ್ ಡೀಟೇಲ್ಸ್, ಚಾಟಿಂಗ್ಸ್ ಮುಂತಾದವುಗಳನ್ನ ಪೊಲೀಸರು ಪರಿಶೀಲಿಸಿದ್ದಾರೆ.
ರಜೆ ಇದ್ದರೂ ಪೋಸ್ಟ್ ಮಾರ್ಟಂ ಮಾಡಿದ್ದ ಡಾ ಸುರೇಶ್
ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವ ದಿನ ಡಾ ಸುರೇಶ್ ರಜೆಯಲ್ಲಿದ್ದರಂತೆ. ರಜೆ ಇದ್ದರೂ ಅಂದು ಕರ್ತವ್ಯಕ್ಕೆ ಡಾ ಸುರೇಶ್ ಹಾಜರಾಗಿದ್ದರು. ತಾವೇ ಖುದ್ದಾಗಿ ನಂತು ರೇಣುಕಾಸ್ವಾಮಿ ಶವದ ಪೋಸ್ಟ್ ಮಾರ್ಟಂ ಮಾಡಿಸಿದ್ದರಂತೆ. ಹೀಗಾಗಿ, ಮರಣೋತ್ತರ ಪರೀಕ್ಷಾ ವರದಿ ಬಗ್ಗೆ ಪೊಲೀಸರಿಗೆ ಅನುಮಾನಗಳಿದ್ದು, ಪುನಃ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೋಸ್ಟ್ ಮಾರ್ಟಂ ನಡೆಸಿದ ತಂಡದಲ್ಲಿದ್ದ ಬೇರೆ ವೈದ್ಯರಿಗೆ ಪೊಲೀಸರು ಸೂಚಿಸಿದ್ದರು. ಮರು ಪರಿಶೀಲನೆ ನಡಸಿದ ಬಳಿಕ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ಪೊಲೀಸರಿಗೆ ಡಾ ಪ್ರದೀಪ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.