ಸಿದ್ದರಾಮಯ್ಯ ವಿರುದ್ಧ ಸುಳ್ಳುಸುದ್ದಿ: ತನಿಖೆಗೆ ಹೈಕೋರ್ಟ್‌ ತಡೆ

ಬೆಂಗಳೂರು (ಆ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ಪರವಾಗಿ ಮಾತನಾಡಿದ್ದಾರೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪ ಸಂಬಂಧ ವಿ.ಪ್ರಭಾಕರ್ ರೆಡ್ಡಿ ಸೇರಿ ಮೂವರು ಆರೋಪಿಗಳ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಬೆಂಗಳೂರು ಪಶ್ಚಿಮ ಸೆನ್ (ಸೈಬರ್‌, ಆರ್ಥಿಕ ಅಪರಾಧ ಮತ್ತು ನಾರ್ಕೋಟಿಕ್ಸ್‌) ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಿ.ಪ್ರಭಾಕರ್ ರೆಡ್ಡಿ, ಎಚ್.ಎನ್. ವಿಜಯಕುಮಾರ್, ವಿರೂಪಾಕ್ಷ ಬಣಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿತು.

ಅರ್ಜಿದಾರ ಆರೋಪಿಗಳ ಮೇಲಿನ ತನಿಖೆಗೆ ಮಾತ್ರ ತಡೆಯಾಜ್ಞೆ ನೀಡಲಾಗಿದೆ. ಉಳಿದ ಆರೋಪಿಗಳ ವಿರುದ್ಧದ ತನಿಖೆ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಸರ್ಕಾರ ಮತ್ತು ಪ್ರಕರಣದ ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿತು. ‘ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ. ಮುಸ್ಲಿಮರ ಓಲೈಕೆ ಬಗ್ಗೆ ಬಿಜೆಪಿಗರ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಅವರ ಭಾವಚಿತ್ರ ಸಮೇತ ಪತ್ರಿಕೆಯಲ್ಲಿ 2024ರ ಏ.9ರಂದು ಸುದ್ದಿ ಪ್ರಕಟಿಸಲಾಗಿತ್ತು.

ಇದನ್ನು ವಿ.ಪ್ರಭಾಕರ್ ರೆಡ್ಡಿ ಹಾಗೂ ಇತರೆ ಇಬ್ಬರು ಅರ್ಜಿದಾರರು ವಾಟ್ಸ್‌ ಆ್ಯಪ್‌ ಹಾಗೂ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಇದರ ವಿರುದ್ಧ ಹರೀಶ್ ನಾಗರಾಜು ಎಂಬುವರು ಬೆಂಗಳೂರು ಪಶ್ಚಿಮ ಸೆನ್ ಪೊಲೀಸ್ ಠಾಣೆಗೆ ಏ.10ರಂದು ದೂರು ನೀಡಿದ್ದರು. ಪೊಲೀಸರು ಒಟ್ಟು ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಎಫ್‌ಐಆರ್ ರದ್ದುಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರ ಆರೋಪಿಗಳು, ತಾವು ಮೂಲ ಸುದ್ದಿಯ ಜನಕರಲ್ಲ. ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪವಷ್ಟೇ ನಮ್ಮ ಮೇಲಿದೆ. ತಪ್ಪಾಗಿ ಸುಳ್ಳು ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಪೊಲೀಸರು ದಾಖಲಿಸಿರುವ ಅಪರಾಧಗಳು ಅರ್ಜಿದಾರರಿಗೆ ಅನ್ವಯವಾಗಲ್ಲ. ಆದ್ದರಿಂದ ಅರ್ಜಿದಾರ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.

ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್, ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳಿದ್ದಾರೆ. ಮೂವರು ಆರೋಪಿಗಳು ಕೋರ್ಟ್ ಮೆಟ್ಟಿಲೇರಿದ್ಧಾರೆ. ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪ ಅವರ ಮೇಲಿರಬಹುದು. ಆದರೆ, ಉಳಿದ ಆರೋಪಗಳ ಪಾತ್ರದ ಬಗ್ಗೆ ತನಿಖೆ ನಡೆಯಬೇಕಿದೆ. ಇಡೀ ಪ್ರಕರಣಕ್ಕೆ ತಡೆ ನೀಡುವುದು ಬೇಡ. ಈಗ ಕೋರ್ಟ್ ಮುಂದೆ ಬಂದಿರುವ ಆರೋಪಿಗಳು ತನಿಖೆಗೆ ಸಹಕರಿಸಲಿ, ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರಗಿಸುವುದಿಲ್ಲ ಎಂದು ಹೇಳಿದರು. ನಂತರ ನ್ಯಾಯಮೂರ್ತಿಗಳು ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ ನೀಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *