ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಗೆ ವಂಚನೆ: ದೂರು ದಾಖಲು

ಬೆಂಗಳೂರು: ತಮಿಳಿನ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ, ಸಿನಿಮಾದ ಕ್ಯಾಸ್ಟಿಂಗ್ ನಿರ್ದೇಶಕನ ಸೋಗಿನಲ್ಲಿ ಸ್ಯಾಂಡಲ್‌ವುಡ್ ನಟಿಯೊಬ್ಬರಿಗೆ ಸೈಬರ್ ವಂಚಕರು 1.7 ಲಕ್ಷ ರೂ. ವಂಚಿಸಿದ್ದಾರೆ.

ಸ್ಯಾಂಡಲ್‌ವುಡ್ ನಟಿ ನಂದಿತ ಕೆ.ಶೆಟ್ಟಿ (21) ವಂಚನೆಗೊಳಗಾದವರು. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ವಂಚಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಚಲನಚಿತ್ರಗಳಲ್ಲಿ ನಟಿಸುತ್ತಿರುವ ನಂದಿತ, ಜು.27ರಂದು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟ್ರಾಗ್ರಾಂ ನೋಡುತ್ತಿದ್ದರು. ಆಗ ತಮಿಳಿನ ಹಂಟರ್ ಸಿನಿಮಾದ ಜಾಹೀರಾತು ಬಂದಿದ್ದು, ಅದನ್ನು ಕ್ಲಿಕ್ ಮಾಡಿ, ಅದರಲ್ಲಿ ವಾಟ್ಸ್‌ಆ್ಯಪ್ ನಂಬರ್ ಮತ್ತು ಹೆಸರು ನೋಂದಾಯಿಸಿದ್ದಾರೆ.

ಕೆಲ ಹೊತ್ತಿನ ಬಳಿಕ ಸೈಬರ್ ವಂಚಕ ತನ್ನ ನಂಬರ್‌ನಿಂದ ನಟಿಯ ವಾಟ್ಸ್‌ಆ್ಯಪ್ ನಂಬರ್‌ಗೆ ಸಂದೇಶ ಕಳುಹಿಸಿದ್ದಾನೆ. ಈ ವೇಳೆ ತಾನು ಹಂಟರ್ ಸಿನಿಮಾದ ಕ್ಯಾಸ್ಟಿಂಗ್ ನಿರ್ದೇಶಕ ಸುರೇಶ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ತಮ್ಮ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಜು.28 ರಂದು ಆನ್‌ಲೈನ್ ಮೂಲಕ ನಟಿಗೆ ಆಡಿಷನ್ ಕೂಡ ಮಾಡಿದ್ದಾನೆ.

ಬಳಿಕ ಅರ್ಟಿಸ್ಟ್ ಕಾರ್ಡ್ ಮಾಡಿಸಬೇಕೆಂದು ನಟಿಯಿಂದ 12.650 ರೂ. ಅನ್ನು ಕ್ಯೂಆರ್ ಕೋಡ್ ಕಳುಹಿಸಿ ಪಡೆದುಕೊಂಡಿದ್ದಾನೆ. ನಂತರ ಅಗ್ರಿಮೆಂಟ್‌ಗಾಗಿ ಸ್ಟಾಂಪ್ ಡ್ಯೂಟಿ ಶುಲ್ಕ ಎಂದು ಎರಡು ಬಾರಿ 19.230 ರೂ ನ್ನು ಮತ್ತೊಂದು ಕ್ಯೂಆರ್ ಕೋಡ್ ಕಳುಹಿಸಿ ಕಬಳಿಸಿದ್ದಾನೆ. ಅಲ್ಲದೆ, ಸಿನಿಮಾದ ಶೂಟಿಂಗ್‌ಗಾಗಿ ಮಲೇಶಿಯಾಕ್ಕೆ ಬರಬೇಕಾಗುತ್ತದೆ. ನಿಮಗೆ ಮತ್ತು ನಿಮ್ಮ ಜತೆ ಬರುವ ತಂದೆ ಪಾಸ್ ಪೋರ್ಟ್ ಮತ್ತು ವಿಮಾನ ಟಿಕೆಟ್‌ಗಾಗಿ ಹಣ ಕಟ್ಟಬೇಕು ಎಂದು ಜುಲೈ 29ರಂದು ಮತ್ತೊಂದು ಕ್ಯೂಆರ್ ಕೋಡ್ ಕಳುಹಿಸಿ 90 ಸಾವಿರ ರೂ. ಪಡೆದುಕೊಂಡಿದ್ದಾನೆ.

ನಂತರ ರಿರ್ಟನ್ ಟಿಕೆಟ್ ನೆಪದಲ್ಲಿ ಜು.30 ಮತ್ತು 31ರಂದು ಹಂತವಾಗಿ 30 ಸಾಪವಿರ ರೂ. ಇನ್ನೊಂದು ಕ್ಯೂಆರ್ ಕೋಡ್ ಕಳುಹಿಸಿ ಪಡೆದುಕೊಂಡಿದ್ದಾನೆ. ಹೀಗೆ ಹಂತವಾಗಿ 1.7 ಲಕ್ಷ ರೂ. ಪಡೆದುಕೊಂಡಿದ್ದಾನೆ. ಆ ನಂತರವೂ ಆರೋಪಿ ಕೆಲ ಕಾರಣಗಳನ್ನು ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅದರಿಂದ ಅನುಮಾನಗೊಂಡ ನಂದಿತ, ಸಿನಿಮಾ ತಂಡದ ಬಗ್ಗೆ ವಿಚಾರಿಸಿದಾಗ ತಾನೂ ಮೋಸ ಹೋಗಿರುವುದು ಗೊತ್ತಾಗಿದೆ.

ಬಳಿಕ ಎಚ್ಚೆತ್ತ ನಂದಿತ ಸೈಬರ್ ವಂಚಕರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *