ಹಿಂದೂ ಯುವಕನ ಜೊತೆ ಪ್ರೀತಿ : ನಡುರಸ್ತೆಯಲ್ಲೇ ಕತ್ತು ಹಿಸುಕಿ ತಂಗಿಯ ಕೊಂದ ಮುಸ್ಲಿಂ ಯುವಕ

ಮೀರತ್‌: ಹಿಂದೂ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ತಂಗಿಯನ್ನು ಮುಸ್ಲಿಂ ಯುವಕನೋರ್ವ ನಡುರಸ್ತೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನ ನಗ್ಲಾ ಶೇಕು ಗ್ರಾಮದಲ್ಲಿ ನಡೆದಿದೆ.  ನಡುರಸ್ತೆಯಲ್ಲೇ ಆತ ತಂಗಿಯ ಕತ್ತು ಹಿಸುಕಿದರು ಯಾರೊಬ್ಬರೂ ಬಾಲಕಿಯ ಸಹಾಯಕ್ಕೆ ಬಾರದೇ ಘಟನೆಯನ್ನು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಂತಿದ್ದಾರೆ.  20 ವರ್ಷದ ಹಸೀನ್ ಎಂಬಾತನೇ ಹೀಗೆ ತನ್ನ 16 ವರ್ಷದ ಸೋದರಿಯನ್ನು ಕತ್ತು ಹಿಸುಕಿ ಕೊಂದ ಯುವಕ.

16 ವರ್ಷದ ಬಾಲಕಿ ಹಿಂದೂ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ಆಕೆಯ ಕುಟುಂಬದವರು ಆಕೆಗೆ ಸ್ವ ಸಮುದಾಯದ ಬೇರೊಬ್ಬ ವ್ಯಕ್ತಿಯ ಜೊತೆ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಈ ಮದುವೆ ಇಷ್ಟವಿಲ್ಲದ ಈ 16 ವರ್ಷದ ಬಾಲೆ ತಾನು ಪ್ರೀತಿಸುತ್ತಿರುವ ಯುವಕನೊಂದಿಗೆ ಓಡಿ ಹೋಗಲು ಮುಂದಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ನಡುರಸ್ತೆಯಲ್ಲೇ ಸೋದರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ವರದಿ ಆಗಿದೆ. ಕೊಲೆ ಮಾಡಿದ ಆರೋಪಿ ಹಸೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ವರದಿ ಆಗಿದೆ.

 

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೇಳುವ ಪ್ರಕಾರ, ಮುಸ್ಲಿಂ ಸಮುದಾಯದ ಯುವತಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಆಕೆ ತನ್ನ ಗೆಳೆಯನ ಜೊತೆ ಓಡಿ ಹೋಗಿದ್ದಳು. ಅಪ್ರಾಪ್ತೆಯಾಗಿದ್ದರಿಂದ ಈ ಜೋಡಿಯನ್ನು ಮರಳಿ ಕರೆತಂದ ಪೊಲೀಸರು ಬಾಲಕಿಯನ್ನು ಆಕೆಯ ಕುಟುಂಬದವರ ಸುಪರ್ದಿಗೆ ನೀಡಿದ್ದರು. ಆದರೆ ಮರ್ಯಾದೆಗೆ ಅಂಜಿದ ಬಾಲಕಿಯ  ಕುಟುಂಬ ಯುವಕನ ವಿರುದ್ಧವೂ ಯಾವುದೇ ಪ್ರಕರಣವನ್ನು ದಾಖಲಿಸಿರಲಿಲ್ಲ, ಇದಾದ ನಂತರ ಬಾಲಕಿಯನ್ನು ಆಕೆಯ ಕುಟುಂಬದವರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಮಾತ್ರ ತಾನು ಮದುವೆಯಾದರೆ ಆತನನ್ನೇ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಆಕೆಯ ಈ ಹಠಮಾರಿ ವರ್ತನೆಯಿಂದ ಆಕ್ರೋಶಗೊಂಡ ಕುಟುಂಬದವರು ಆಕೆಗೆ ಮತ್ತೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದಾರೆ. ಆದರೂ ಬಾಲಕಿ ಮಾತ್ರ ತಾನು ತನ್ನ ಪ್ರೇಮಿಯನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆಕೆಯ ಸೋದರ ಆಕೆಯನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದಾನೆ.

 

ವೈರಲ್ ಆಗಿರುವ ವೀಡಿಯೋದಲ್ಲಿ ಈ ಹತ್ಯೆ ನಡೆಯುವ ವೇಳೆ ರಸ್ತೆಯಲ್ಲಿ ಸಾಕಷ್ಟು ಜನರು ನಿಂತಿದ್ದು, ಯಾರೊಬ್ಬರೂ ಅಪ್ರಾಪ್ತೆಯ ಜೀವ ಉಳಿಸಲು ಪ್ರಯತ್ನಿಸಿಲ್ಲ,  ಪುಟ್ಟ ಮಕ್ಕಳು ಕೂಡ ಯುವಕ ಸೋದರಿಯನ್ನು ರಸ್ತೆಯಲ್ಲಿ ಸಾಯಿಸುವ ವೇಳೆ ಅಲ್ಲೇ ಘಟನೆಯನ್ನು ನೋಡುತ್ತಾ ನಿಂತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಕೊಲೆ ಮಾಡುವ ವೇಳೆ ಆರೋಪಿ, ನಮ್ಮ ತಂದೆಯವರ ಮರ್ಯಾದೆ ಉಳಿಸಲು ಒಬ್ಬರು ಏನೂ ಮಾಡದೇ ಇರುವುದು ಹೇಗೆ? ಆಕೆ ಮೂರು ಬಾರಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ನಮ್ಮ ತಂದೆ ಸಾಯುತ್ತಾರೆ ಎಂದು ಆತ ಕೊಲೆ ಮಾಡುತ್ತಿರುವ ವೇಳೆ ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.

ಘಟನೆ ನಡೆದ ದಿನವೂ ಆಕೆ ಮತ್ತೆ ಓಡಿ ಹೋಗಲು ಯತ್ನಿಸಿದ್ದಾಳೆ. ಆದರೆ ಆಕೆಯ ಯೋಜನೆಯನ್ನು ಮೊದಲೇ ಅರಿತ ಸೋದರ ಆಕೆಯನ್ನು ಮೊದಲಿಗೆ ಮನೆಯಲ್ಲೇ ಮನವೊಲಿಸುವ ಯತ್ನ ಮಾಡಿದ್ದಾನೆ. ಆದರೆ ಆಕೆ ಮನೆಯಿಂದ ಹೊರಗೋಡಿದ್ದಾಳೆ. ಈ ವೇಳೆ ಸೋದರ ಆಕೆಯನ್ನು ಹಿಂಬಾಲಿಸಿದ್ದು, ಆಕೆಯನ್ನು ರಸ್ತೆಯಲ್ಲೇ ಕೆಳಗೆ ಬೀಳಿಸಿ ಹೊಡೆದಿದ್ದಾನೆ. ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *