ಯಾರು ಏನೇ ಬಯ್ಯಲಿ ನೀರಿನ ದರ ಏರಿಕೆ ಖಚಿತ: ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ಸಾರ್ವಜನಿಕರು, ಮಾಧ್ಯಮಗಳು ಏನೇ ಬಯ್ಯಲಿ, ವಿರೋಧ ಪಕ್ಷಗಳು ವಿರೋಧಿಸಿದರು ನೀರಿನ ದರ ಏರಿಕೆ ಮಾಡುವುದು ಖಚಿತ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಡಿಕೆ.ಶಿವಕುಮಾರ್ ಅವರು ಇಂದು ವಿಧಾನನಸೌಧದ ಮುಂಭಾಗದಲ್ಲಿ 110 ಹಳ್ಳಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದರು. ಜೊತೆಗೆ ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ ಹಾಗೂ ವರುಣಮಿತ್ರ ತರಬೇತಿ ಹಾಗೂ ಯುನೈಟೆಡ್ ನೇಷನ್ ಇನೋವೇಷನ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯುರಿಟಿ ಇನ್ ಬೆಂಗಳೂರು ಸಿಟಿ ಯೋಜನೆ ಯೋಜನೆಗಳಿಗೂ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಾಟರ್-ಪವರ್ ಈ ಎರಡು ಪ್ರಮುಖವಾಗಿದ್ದು, ಎರಡು ಇಲಾಖೆ ನಾನು ನೋಡ್ತಾ ಇದ್ದೇನೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗಲಿದೆ ಎಂದು ಮಾಹಿತಿ ನೀಡಿದ್ದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನಂತರ ಯೋಜನೆ ಕೈ ಬಿಟ್ಟಿದ್ದೆವು. ಈಗ ನಾನು ಸಚಿವನಾದ ಮೇಲೆ ಮತ್ತೆ ಕೆಲವರು ಖಾಸಗೀಕರಣದ ಬಗ್ಗೆ ಬಂದು ಮಾತಾಡಿದ್ದರು. ನಾನು ಇದು ಆಗಲ್ಲ ಎಂದು ಹೇಳಿದ್ದೇನೆಂದು ಹೇಳಿದರು.

ನೀರಿನ ದರ ಸಾಕಷ್ಟು ವರ್ಷದಿಂದ ಏರಿಸಿಲ್ಲ. 1.40 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ‌. ಮೇಕೆದಾಟುವಿನ ಮೇಲೆ ಭರವಸೆ ಇದೆ‌. ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯು ಇದೆ. ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ‌. ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀ ಯಾರು ಬೋರ್ ವೆಲ್ ಹಾಕುವಂತಿಲ್ಲ. ಯಾರು ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ಹೊಸ ಕಾನೂನು ಬಂದಿದೆ. ರಾಜ್ಯಪಾಲರು ಇದಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿಸಿದರು. ಈ ಮೂಲಕ ಸದ್ಯದಲ್ಲೇ ನೀರಿನ ಬೆಲೆ ಹೆಚ್ಚಳದ ಬಗ್ಗೆ ಡಿಸಿಎಂ ಸೂಚನೆ ಕೊಟ್ಟರು.

ಇದೇ ವೇಳೆ ನೀರಿನ ದರದ ಬಗ್ಗೆ ಮಾಹಿತಿಯನ್ನು ನೀಡುವಂತೆ ಬಿಡಬ್ಲ್ಯೂಎಸ್‍ಎಸ್‍ಬಿ ಡಿಸಿಎಂ ಸೂಚನೆ ನೀಡಿದರು. ನೀರಿಗೆ ಎಷ್ಟು ಖರ್ಚಾಗುತ್ತಿದೆ. ಎಷ್ಟು ಜನ ನೀರಿನ ಬಿಲ್ ಕಟ್ಟಿಲ್ಲ, ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ ಎಲ್ಲಾ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಲಮಂಡಳಿ ಉಳಿಸಬೇಕು ಅಂದ್ರೆ ನೀರಿನ ಬಿಲ್ ಏರಿಕೆ ಅನಿವಾರ್ಯ. ಇದರ ಬಗ್ಗೆ ಬಿಡಬ್ಲ್ಯೂಎಸ್‍ಎಸ್‍ಬಿ ಜನರಿಗೆ ಜಾಗೃತಿ‌ ಮೂಡಿಸಬೇಕು. ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗ್ಬೇಕು. ಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯು ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್ ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡ್ಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ‌ ಸಭೆ ಮತ್ತು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ಕಳೆದ ಜೂನ್ ತಿಂಗಳಿನಲ್ಲಿಯೂ ಡಿಕೆ.ಶಿವಕುಮಾರ್ ಅವರು ನೀರಿನ ದರ ಏರಿಕೆ ಕುರಿತು ಮಾತನಾಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *