ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ  ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ. ಈ ವಿವಾದವೇ ಅವರಿಗೆ ಈಗ ಕಂಟಕವಾಗುವ ರೀತಿ ಇದೆ. ಇತ್ತೀಚೆಗೆ ಮೋದಿಯನ್ನು ಟೀಕಿಸುವ ಭರದಲ್ಲಿ ಮಲಯಾಳಿಗಳು ಬುದ್ದಿವಂತರು, ಕನ್ನಡಿಗರು ಬುದ್ಧಿ ಉಪಯೋಗಿಸುವುದಿಲ್ಲ ಎಂದಿದ್ದರು.

ಇತ್ತೀಚೆಗೆ ತಮ್ಮ ಹೇಳಿಕೆಗಳಿಂದಲೇ ಒಂದು ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಹಂಸಲೇಖ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಶೋ ನಲ್ಲಿ ಬಂದರೆ ಶೋವನ್ನೇ ನೋಡುವುದಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ. ಒಂದು ವೇಳೆ ಅವರು ಕಾಣಿಸಿಕೊಂಡರೆ ಬಾಯ್‌ಕಾಟ್‌ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇತ್ತೀಚೆಗೆ ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಚಿಂತನ ಗಂಗಾ’ ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ಓದಿದ್ದೆ, ಅದು ಆರ್ ಎಸ್ ಎಸ್ ಅವರ ಸಂವಿಧಾನ. ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುತ್ತಾರೆ, ಚಿಂತನಗಂಗಾವನ್ನೂ ಓದುತ್ತಾರೆ. ಆ ಪುಸ್ತಕ ಹೇಗೆ ಕೆಲಸ ಮಾಡುತ್ತೆ ಎಂದರೆ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಪುಸ್ತಕ ಓದಿ ಕಲಿಯುತ್ತಾರೆ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

 

ಇದಕ್ಕೂ ಮುನ್ನ ಕಳೆದ ಜುಲೈನಲ್ಲಿ ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿವೆ ಅಂತಾರೆ ಅದೆಲ್ಲ ಬುಲ್ ಶಿಟ್ ಎಂಬ ಪದ ಬಳಸಿದ್ದರು. ಈ ಹೇಳಿಕೆ ಜೈನ ಸಮುದಾಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ಹಂಸಲೇಖ ಜೈನ ಸಮುದಾಯದ ಜನತೆ ಬಳಿ ಕ್ಷಮೆ ಕೇಳಿದ್ದರು. ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮೆರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ.  ತ್ಯಾಗ, ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸುಮುದಾಯಕ್ಕೆ ಶಿರವಾಗಿ ಕ್ಷಮೆ ಕೋರುತ್ತೇನೆ ಎಂದು ಹಂಸಲೇಖ ಹೇಳಿದ್ದರು. ನಾನು ಪಂಪನ ದಾಸಾನುದಾಸ. ಕನ್ನಡವನ್ನ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿರೋನು ನಾನು. ದಯಮಾಡಿ ಇದನ್ನ ಬೆಳೆಸಬೇಡಿ. ಪತ್ರದ ಮುಖಾಂತರವೂ ಕ್ಷಮೆ ಕೇಳಿದ್ದೇನೆ. ದಯವಿಟ್ಟು ಈ ವಿಷಯವನ್ನ ಇಲ್ಲಿಗೆ ನಿಲ್ಲಿಸಿ  ಎಂದು ವಿಡಿಯೋದಲ್ಲಿ ಕೂಡ ಕ್ಷಮೆ ಕೇಳಿದ್ದರು.

ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ: 2021ರ ನವೆಂಬರ್‌ ನಲ್ಲಿ ಪೇಜಾವರದ ಶ್ರೀ ಕೀರ್ತಿ ಶೇಷ ವಿಶ್ವೇಶ ತೀರ್ಥ ಶ್ರೀಪಾದ ಅವರ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ್ದ ಹೇಳಿಕೆಯ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.  ಪೇಜಾವರ ಶ್ರೀಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತುಕೊಳ್ಳಬಹುದಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗುತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು, ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ ಎಂದು ಹಂಸಲೇಖ ಹೇಳಿದ್ದರು.

ಸವಿತಾ ಸಮಾಜಕ್ಕೆ ಅವಮಾನ ಆರೋಪ: 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಜಾನಪದ ಕಲಾವಿದರನ್ನು ವಿನಾ ಕಾರಣ ಅವಮಾನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಹಂಸಲೇಖ ಅವರ ಮೇಲೆ ಕೇಳಿಬಂದಿತ್ತು. ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾಡಿದ್ದ ಆರೋಪವನ್ನು ಹಂಸಲೇಖ ಖಂಡಿಸಿದ್ದರು. ಇಷ್ಟಾಗಿಯೂ ಸವಿತಾ ಸಮುದಾಯದ ನನ್ನ ಬಂಧುಗಳಿಗೆ ನನ್ನ ಕಡೆಯಿಂದ ನೋವು ಉಂಟಾಗಿದ್ದರೆ ಅದಕ್ಕೆ ನಾನು ಇಡೀ ನನ್ನ ಸವಿತಾ ಸಮುದಾಯದ ಗುರು ಹಿರಿಯರ ಕ್ಷಮೆ ಕೇಳುತ್ತೇನೆ ಎಂದಿದ್ದರು.

ಯಶ್‌ಗೆ ಟಾಂಗ್ ಕೊಟ್ಟಿದ್ದ ಹಂಸಲೇಖ:
ಇನ್ನು ಇಷ್ಟೇ ಅಲ್ಲ, 2024ರ ಜನವರಿಯಲ್ಲಿ  ರಾಕಿಂಗ್‌ ಸ್ಟಾರ್‌ ಯಶ್‌ ಅವರ ಗಡ್ಡದ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಕೆಜಿಎಫ್‌ ಎಫೆಕ್ಟ್‌. ಕನ್ನಡ ಸಿನಿಮಾದಲ್ಲಿ ಎಲ್ಲಿ ಬೇಕಾದ್ರೂ ನೋಡಿ, ಕ್ಯಾಮೆರಾಮೆನ್‌ ಕೂಡ ದಾಡಿ ಬಿಟ್ಟಿರ್ತಾನೆ. ಡೈರೆಕ್ಟರ್‌, ಕೋರಿಯೋಗ್ರಾಫರ್‌, ಡೈರೆಕ್ಟರ್‌ ಕೊನೆಗೆ ಪ್ರೊಡ್ಯೂಸರ್‌ ಕೂಡ ದಾಡಿ ಬಿಟ್ಟಿರ್ತಾನೆ. ಎಡಿಟರ್‌ ಕೂಡ ತಾನೇನು ಕಮ್ಮಿ ಅಂತಾ ಅವನೂ ದಾಡಿ ಬಿಟ್ಟಿರ್ತಾನೆ. ಮೊದಲೆಲ್ಲಾ ಏನಾದ್ರೂ ತಪ್ಪು ಮಾಡಿದ್ರೆ, ‘ಏನಾಗಿದ್ಯೋ ನಿಂಗೆ ದಾಡಿ’ ಅಂತಾ ಬೈಯ್ತಾ ಇದ್ರು. ಆದರೆ, ಈಗ ದಾಡಿಯೇ ಫ್ಯಾಶನ್‌ ಆಗಿದೆ ಎಂದಿದ್ದಾರೆ. ನನಗೆ ಈ ಸಿನಿಮಾದ ಹೀರೋ ಹೆಸರು ಅಜಿತ್‌ ಅಂತಾ ಗೊತ್ತಿತ್ತು. ಯಾವಾಗ ಯಶ್‌ಜೀತ್‌ ಆಯ್ತು ಅಂತಾ ಗೊತ್ತಿಲ್ಲ. ಯಶ್‌ ಸ್ಟಾರ್‌ ಆದ ಮೇಲೆ ಹೆಸರು ಬದಲಿಸಿಕೊಂಡಿರ್ಬೇಕು ಅಂತಾ ಹಂಸಲೇಖ ಹೇಳಿದ್ದರು.

ಜುಲೈ 2024ರಲ್ಲಿ ಪ್ಯಾನ್ ಇಂಡಿಯಾ ಅನ್ನುವ ಹುಚ್ಚು ಬಂದಿದ್ದರಿಂದ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಕನ್ನಡದ ಬೇರುಗಳು ಕಟ್ ಆಗಿಬಿಟ್ಟಿದೆ. ಇವರಿಗೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಅನ್ನೋ ಭ್ರಮೆಯಿದೆ ಎಂದು ಯಶ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

ರಿಷಬ್ ಶೆಟ್ಟಿಗೂ ಟಾಂಗ್: ಇನ್ನು ಯಶ್ ಮಾತ್ರವಲ್ಲ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೂ ಟಾಂಗ್ ಕೊಟ್ಟಿದ್ದರು. ಫ್ಯಾನ್ ಇಂಡಿಯಾ ಅಂದ್ರೆ ಶೋಕಿ ಅಂದಿದ್ದರು. ದಾಡಿ ಬಾಡಿ ಮಾತ್ರ ಬೆಳೆಯೋದು ಅಂದಿದ್ದರು. ಕೆಜಿಎಫ್ ಮತ್ತು ಕಾಂತಾರ ಜಾಗತಿಕ ಹಿಟ್‌ ಬಗ್ಗೆ ಖುಷಿ ಪಡಲಿಲ್ಲ ಎಂದು ಹಲವರ ಅಭಿಪ್ರಾಯವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *