ರೇಣುಕಾಸ್ವಾಮಿಗೆ ಚಪ್ಪಲಿ ಏಟು,‌ ಪವಿತ್ರಾಗೆ ಕ್ಷಮೆ ಕೇಳಿಸಿ ಚಿಕನ್‌ ತಿನ್ನಿಸಿದ್ದ ನಟ ದರ್ಶನ್!

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಹಾಗೂ ಆತನ ಗೆಳತಿ ಪವಿತ್ರಾಗೌಡ ಸೇರಿ ಒಟ್ಟು 17 ಮಂದಿ ಆರೋಪಿಗಳ ಹತ್ಯೆ ಕೃತ್ಯದ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್​​​ಶೀಟ್​ನಲ್ಲಿ ವಿವರಿಸಲಾಗಿದೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿದ್ದ ಆರೋಪಿಗಳು ಆತನನ್ನು ಬೆಂಗಳೂರಿಗೆ ಕರೆತರುವ ವೇಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ವಾಚ್‌, ಉಂಗುರ ಹಾಗೂ ಕರಡಿಗೆಯನ್ನು ಸುಲಿಗೆ ಮಾಡಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ. ತುಮಕೂರಿನ ರಂಗಾಪುರ ಸಮೀಪದ ಬಾರ್‌ನಲ್ಲಿ ಆರೋಪಿಗಳಾದ ರಾಘವೇಂದ್ರ, ಜಗದೀಶ್ ಮತ್ತು ಅನುಕುಮಾರ್ ಪಾರ್ಟಿ ಮಾಡಿದ್ದರು. ಈ ವೇಳೆ ಹಣವನ್ನು ರೇಣುಕಾಸ್ವಾಮಿಯಿಂದಲೇ ಕೊಡಿಸಿದ್ದರಂತೆ.

ಬಾರ್‌ನಲ್ಲಿ ಮದ್ಯ ಖರೀದಿಸಿರುವುದು ಹಾಗೂ ಟೋಲ್‌ನಲ್ಲಿ ಹಣ ಪಾವತಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 8ರ ಮಧ್ಯಾಹ್ನ 1.30ಕ್ಕೆ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ನಟ ದರ್ಶನ್ ಬರುವ ಮುನ್ನವೇ ಆರೋಪಿಗಳು ಮರದ ರೆಂಬೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದರು. ನಂತರ ಬಂದ ದರ್ಶನ್‌ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆತನಿಗೆ ಬಲವಂತವಾಗಿ ಚಿಕನ್‌ ಬಿರಿಯಾನಿ ತಿನ್ನಿಸಿದ್ದನಂತೆ. ʼನಾನು ಜಂಗಮ, ಮಾಂಸಾಹಾರ ಸೇವಿಸುವುದಿಲ್ಲʼವೆಂದು ಅಂತಾ ನಿರಾಕರಿಸಿದ್ದ ರೇಣುಕಾಸ್ವಾಮಿ, ಬಾಯಿಂದ ಅನ್ನದ ಅಗುಳನ್ನು ಉಗುಳಿದ್ದರು. ಇದಕ್ಕೆ ಕೋಪಗೊಂಡ ದರ್ಶನ್, ʼಅನ್ನಕ್ಕೆ ಬೆಲೆ ಇಲ್ವಾʼ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟು ಕಾಲಿನಿಂದ ಒದ್ದಿದ್ದರಂತೆ.

ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಗೆಳತಿ ಪವಿತ್ರಾಗೌಡ ಸಹ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳಂತೆ. ಈ ವೇಳೆ ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಿ, ಪವಿತ್ರಾಳ ಕಾಲಿಗೆ ಬೀಳಿಸಲಾಗಿತ್ತು ಎಂದು ತಿಳಿದುಬಂದಿದೆ. ದರ್ಶನ್ ಅಂಡ್‌ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೇಣುಕಾಸ್ವಾಮಿಯ ರಕ್ತ ಹಾಗೂ ಫೋಟೊಗಳಲ್ಲದೇ ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಸಹ ಮಹತ್ವದ ಪುರಾವೆಯಾಗಿದೆ.

ಪಟ್ಟಣಗೆರೆ ಶೆಡ್‌ನ ಮಣ್ಣು ದರ್ಶನ್ ಮತ್ತು ಇನ್ನುಳಿದ ಮೂವರು ಆರೋಪಿಗಳು ಧರಿಸಿದ್ದ ಶೂಗಳಲ್ಲಿ ಅಂಟಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಅಂತಾ FSL ವರದಿ ಖಚಿತಪಡಿಸಿರುವ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ತಾವು ಧರಿಸಿದ್ದ ಶೂಗಳನ್ನು ಹತ್ಯೆ ಬಳಿಕ ಬಿಚ್ಚಿದ್ದ ದರ್ಶನ್‌, ಹೊಸಕೆರೆಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನ ತಮ್ಮ ಪತ್ನಿ ವಿಜಯಲಕ್ಷ್ಮೀ ನೆಲಸಿರುವ ಫ್ಲ್ಯಾಟ್‌ಗೆ ಕಳುಹಿಸಿದ್ದರು. ಬಳಿಕ ಆ ಮನೆಯಿಂದಲೇ ಶೂಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಪೊಲೀಸರ ವಿಚಾರಣೆ ವೇಳೆ, ‘ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದ ನಟ ದರ್ಶನ್, ಕೆಲ ದಿನಗಳ ಬಳಿಕ ‘ಏನೋ ತಪ್ಪಾಗಿ ಹೋಗಿದೆ, ಹುಡುಗರು ಏನೋ ತಪ್ಪು ಮಾಡಿದ್ದಾರೆ’ ಅಂತಾ ಹೇಳಿದ್ದರು. 20 ಪುಟಗಳ ದರ್ಶನ್ ಹೇಳಿಕೆಯನ್ನು ಆರೋಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರಂತೆ. ಈ ಪ್ರಕರಣದಲ್ಲಿ ಪಟ್ಟಣಗೆರೆ ಶೆಡ್‌ನ ಭದ್ರತಾ ಸಿಬ್ಬಂದಿ ನೀಡಿರುವ ಹೇಳಿಕೆ ಪ್ರಮುಖವಾಗಿದೆ ಎನ್ನಲಾಗಿದೆ. ದರ್ಶನ್‌ ಶೆಡ್‌ಗೆ ಬಂದು ಹೋಗಿರುವ ಬಗ್ಗೆ ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *