ಗೃಹಲಕ್ಷ್ಮೀಯರಿಗೆ ಸದ್ದಿಲ್ಲದೆ ಐಟಿ ಶಾಕ್! ರಾಜ್ಯದಲ್ಲಿ ಬರೋಬ್ಬರಿ 2 ಲಕ್ಷ ಮಹಿಳೆಯರಿಗೆ ಯೋಜನೆ ಕ್ಯಾನ್ಸಲ್

ಹೈಲೈಟ್ಸ್‌:

  • ಜಿಎಸ್‌ಟಿ, ಐಟಿ ಪಾವತಿಸುವ 2 ಲಕ್ಷಕ್ಕೂ ಅಧಿಕ ಮಹಿಳೆಯರಿಗಿಲ್ಲ ಯೋಜನೆ ಫಲ
  • ರಾಜ್ಯದಲ್ಲಿ ಮಾಹಿತಿ ಕ್ರೋಢೀಕರಣ
  • ತುಮಕೂರು ಜಿಲ್ಲೆಯೊಂದರಲ್ಲೇ ಐಟಿ, ಜಿಎಸ್‌ಟಿ ಕಟ್ಟುವ 7,343 ಮಹಿಳೆಯರಿಗೆ ಯೋಜನೆ ಕ್ಯಾನ್ಸಲ್

ತುಮಕೂರು: ರಾಜ್ಯ ಸರಕಾರದ ಪಂಚ ‘ಗ್ಯಾರಂಟಿ’ ಗಳಲ್ಲಿಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ ಸದ್ದಿಲ್ಲದೆ ಐಟಿ (ಆದಾಯ ತೆರಿಗೆ) ಶಾಕ್‌ ನೀಡಿದೆ. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮೀ ಹಣ ಸಿಗಲ್ಲ.

ಇದುವರೆಗೆ ಸಿಕ್ಕದ್ದಷ್ಟೇ ಅವರ ಪಾಲಿನ ‘ಪಂಚಾಮೃತ’. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಐಟಿ – ಜಿಎಸ್‌ಟಿ ಪಾವತಿದಾರರ ಪಟ್ಟಿ ಸಿದ್ಧವಾಗಿದ್ದು, ಅವರಿಗೆ ಯೋಜನೆ ಸ್ಥಗಿತಗೊಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪರಿಶೀಲಿಸಿ

ಕಳೆದ 2-3 ತಿಂಗಳಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ. ಇವತ್ತು – ನಾಳೆ ಅಷ್ಟೂ ತಿಂಗಳ ಹಣ ಒಟ್ಟಿಗೇ ಬರುತ್ತದೆ ಎಂದು ನಿರೀಕ್ಷಿ ಇಟ್ಟುಕೊಳ್ಳುವುದು ಹಾಗೂ ಬ್ಯಾಂಕ್‌ಗಳಿಗೆ ಪದೇಪದೆ ಈ ಉದ್ದೇಶದಿಂದ ಅಲೆಯುವುದು ಬೇಡ. ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯದಲ್ಲಿ ವಿಚಾರಿಸಿದರೆ ಕಾರಣ ಸ್ಪಷ್ಟವಾಗಲಿದೆ. ಎನ್‌ಪಿಸಿಐ ಇನ್‌ ಆಕ್ಟಿವ್‌ ಆದ ಫಲಾನುಭವಿಗಳಿಗೂ ಹಣ ಖಾತೆಗೆ ಜಮೆಯಾಗಿಲ್ಲ. ಆಧಾರ್‌ ಲಿಂಕ್‌, ಬ್ಯಾಂಕ್‌ ಖಾತೆ ಜೋಡಣೆ ಮೊದಲಾದ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಕಾರಣದಿಂದ ಯೋಜನೆ ಹಣ ಬರದಿದ್ದರೆ ಅಪ್‌ಡೇಟ್‌ ಮಾಡಿಸಿಕೊಂಡ ಹಾಗೂ ಸಮಸ್ಯೆ ಬಗೆಹರಿದ ಕೂಡಲೇ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ ಆಗಲಿದೆ.

2 ಲಕ್ಷ ಮಹಿಳೆಯರಿಗಿಲ್ಲ ಗೃಹಲಕ್ಷ್ಮಿ

ರಾಜ್ಯದ 1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಲ್ಲಿ ಸದ್ಯದ ಲಭ್ಯ ಮಾಹಿತಿ ಪ್ರಕಾರ ಸುಮಾರು 2 ಲಕ್ಷ ಮಹಿಳೆಯರನ್ನು ಐಟಿ, ಜಿಎಸ್‌ಟಿ ಪಾವತಿ ಕಾರಣದಿಂದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ತುಮಕೂರು ಜಿಲ್ಲೆಯೊಂದರಲ್ಲೇ ಐಟಿ, ಜಿಎಸ್‌ಟಿ ಕಟ್ಟುವ 7,343 ಮಹಿಳೆಯರು ಗೃಹಲಕ್ಷ್ಮೀ’ಯಿಂದ ವಂಚಿತರಾಗಿದ್ದಾರೆ.

ಅಧಿಕೃತ ಹಿಂಬರಹ

ಐಟಿ, ಜಿಎಸ್‌ಟಿ ಪಾವತಿದಾರ ಮಹಿಳೆಯರು ‘ಗೃಹಲಕ್ಷ್ಮೀ’ ಹಣ ಬಂದಿಲ್ಲವೆಂದು ಕಚೇರಿಗೆ ಅಲೆಯುತ್ತಿದ್ದರೆ, ಅವರನ್ನು ಆ ಉದ್ದೇಶಕ್ಕಾಗಿ ಅಲೆಸಬಾರದು. ಜಿಎಸ್‌ಟಿ, ಐಟಿ ಪಾವತಿದಾರರಾಗಿರುವುದರಿಂದ ನಿಮಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಸಿಗುವುದಿಲ್ಲಎಂದು ಅಧಿಕೃತವಾಗಿಯೇ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆದೇಶಿಸಿದ್ದಾರೆ.

ಐಟಿ, ಜಿಎಸ್‌ಟಿ ಕ್ಯಾತೆ ಏಕೆ?

ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಐದು ಗ್ಯಾರಂಟಿಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ವೇಳೆ, ‘ತನ್ನ ಪತ್ನಿಗೂ ಸೇರಿದಂತೆ ಪ್ರತಿಯೊಬ್ಬ ಮಹಿಳೆಯರಿಗೂ ಗ್ಯಾರಂಟಿ ಲಾಭ ಸಿಗಲಿದೆ. ಗೃಹಲಕ್ಷ್ಮೀ ಯೋಜನೆ ಹಣ 2000 ರೂ. ಮಾಸಿಕವಾಗಿ ಬ್ಯಾಂಕ್‌ ಖಾತೆಗೆ ಸಂದಾಯವಾಗಲಿದೆ’ ಎಂದಿದ್ದರು. ಆದರೆ ಈಗ ‘ಷರತ್ತುಬದ್ಧ ಗ್ಯಾರಂಟಿ’ ನೀಡಿಕೆ ಟೀಕೆಗೆ ಅಸ್ತ್ರವಾಗುತ್ತಿದೆ.

ಐಟಿ, ಜಿಎಸ್‌ಟಿ ಪಾವತಿದಾರರನ್ನು ಗೃಹಲಕ್ಷ್ಮೀ ಯೋಜನೆಯಿಂದ ಕೈಬಿಡಲಾಗಿದೆ. ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟವರಿಗೆ ಅಧಿಕೃತವಾಗಿಯೇ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹೇಳಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *