ಬಾಬಾ ಸಿದ್ದಿಕಿ ಪುತ್ರ ಶಾಸಕ ಜೀಶನ್ ಕೂಡ ಬಿಷ್ಣೋಯಿ ಹಿಟ್ ಲಿಸ್ಟ್‌ನಲ್ಲಿ..
ಮುಂಬೈ: ಬಾಲಿವುಡ್‌ನ ಪ್ರಸಿದ್ಧ ನಟರಿಗೆ ಅತ್ಯಾಪ್ತರಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಹಿಟ್‌ಲಿಸ್ಟ್‌ನಲ್ಲಿ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶನ್ ಸಿದ್ದಿಕಿ ಕೂಡ ಇದ್ದರು ಎಂಬ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಬಾಬಾ ಸಿದ್ದಿಕಿ ಹಾಗೂ ಅವರ ಪುತ್ರ ಜೀಶನ್ ಇಬ್ಬರನ್ನೂ ಕೊಲ್ಲಲು ತಮಗೆ ಸುಪಾರಿ ನೀಡಲಾಗಿತ್ತು. ಶನಿವಾರ ಸಂಜೆ ಇಬ್ಬರೂ ಒಂದೇ ಸ್ಥಳದಲ್ಲಿ ಸಿಗುತ್ತಾರೆ ಎಂದೂ ತಿಳಿಸಲಾಗಿತ್ತು. ಒಂದು ವೇಳೆ, ಇಬ್ಬರನ್ನೂ ಒಟ್ಟಿಗೇ ಕೊಲ್ಲಲು ಸಾಧ್ಯವಾಗದಿದ್ದರೆ ಮೊದಲು ಸಿಕ್ಕವರನ್ನು ಕೊಂದು ಬಿಡಿ ಎಂಬ ನಿರ್ದೇಶನ ಇತ್ತು ಎಂದು ಹತ್ಯೆ ಪ್ರಕರಣದ ಆರೋಪಿಗಳು ಪೊಲೀಸರ ಮುಂದೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೀಶನ್ ಸಿದ್ದಿಕಿ ಮುಂಬೈನ ವಾದ್ರೆ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಗಿದ್ದು, ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಹಲವು ತಿಂಗಳ ಹಿಂದೆ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.
ಸಿದ್ಧಿಕಿ ಮೇಲೆ ಗುಂಡಿನ ದಾಳಿ ಬಳಿಕ ಪೊಲೀಸರತ್ತ ಮೆಣಸಿನ ಪುಡಿ
ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಬಳಿಕ ಸಿದ್ಧಿಕಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಮೇಲೆ ಮೆಣಸಿನ ಪುಡಿ ಎರಚಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಲಾರೆನ್ಸ್ ಗುಂಪಿನ ಯೋಜನೆ ಪ್ರಕಾರ ದಸರಾ ಮೆರವಣಿಗೆ ಜನಸಂದಣಿ ನಡುವೆ ಸೇರಿಕೊಂಡು ಗುರ್ಮೆಲ್ ಬಲ್ಜಿತ್ ಮತ್ತು ಧರ್ಮರಾಜ್ ಸಿದ್ಧಿಕಿ ಮೇಲೆ ಗುಂಡಿನ ದಾಳಿ ನಡೆಸಬೇಕಿತ್ತು. ಆದರೆ ದಸರಾ ಮೆರವಣಿಗೆಯಲ್ಲಿ ಭಾರೀ ಜನಸಂದಣಿ ಕಂಡ ಆರೋಪಿ ಶಿವಕುಮಾರ್ ಏಕಾಏಕಿ ನಿರ್ಧಾರ ಬದಲಾಯಿಸಿದ. ಅದರಂತೆ ದಸರಾ ಮೆರವಣಿಗೆ ಭಾಗವಾಗಿ ದೊಡ್ಡಮಟ್ಟದಲ್ಲಿ ಪಟಾಕಿ ಸಿಡಿಸುತ್ತಲೇ, ಸಿದ್ಧಿಕಿ ಮೇಲೆ 6 ಗುಂಡು ಹಾರಿಸಿದ. ಜೊತೆಗೆ ಸ್ಥಳದಲ್ಲಿದ್ದ ಮೂವರೂ ಪಾತಕಿಗಳು ಪೊಲೀಸರ ಮೇಲೆ ಕಾರದ ಪುಡಿ ಎರಚಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದಿಕಿ ಕೊಲೆ ಕೇಸ್‌ನಲ್ಲಿ ಮತ್ತೊಬ್ಬ ಆರೋಪಿ ಸೆರೆ
ಮುಂಬೈ: ಮಹಾರಾಷ್ಟ್ರದ ಮಾಜಿ ಶಾಸಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಪುಣೆಯ 28 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಪ್ರವೀಣ್ ಲೋಂಕರ್ ಬಂಧಿತ. ಈತ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುತ್ತಿರುವ ಮೂರನೇ ವ್ಯಕ್ತಿ. ತನ್ನ ಸೋದರ ಶುಭಂ ಲೋಂಕರ್ ಜತೆಗೂಡಿ ಈತ ಪ್ರಕರಣದಲ್ಲಿ ಸಂಚುಗಾರನಾಗಿ ಕೆಲಸ ಮಾಡಿದ್ದ. ಸಿದ್ದಿಕಿ ಅವರನ್ನು ಕೊಂದ ಉತ್ತರಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ ಹಾಗೂ ಶಿವಕುಮಾರ್ ಗೌತಮ್ ಅವರನ್ನು ಹತ್ಯೆ ಕೆಲಸಕ್ಕೆ ಈ ಸೋದರರು ನಿಯೋಜನೆ ಮಾಡಿದ್ದರು ಎನ್ನಲಾಗಿದೆ. ಶುಭಂ ಲೋಂಕರ್ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.