ಮೂರು ಕ್ಷೇತ್ರಗಳ ಉಪಚುನಾವಣೆ: ಕುಟುಂಬದ ಸದಸ್ಯರಿಗೆ ಮಣೆ; ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸಲು ಜಮೀರ್ ಗೆ ಹೊಣೆ!
ಬೆಂಗಳೂರು: ಭಾರತೀಯ ಚುನಾವಣಾ ಆಯೋಗವು ಕರ್ನಾಟಕದ ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ, ಹೀಗಾಗಿ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಯಾರಿ ಪ್ರಾರಂಭಿಸಿವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ಮೂವರು ರಾಜಕಾರಣಿಗಳ ಮಕ್ಕಳು ಅಭ್ಯರ್ಥಿಗಳಾಗುವ ಸಾಧ್ಯತೆಯಿದೆ, ಚನ್ನಪಟ್ಟಣಕ್ಕೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ (ಜೆಡಿಎಸ್), ಶಿಗ್ಗಾಂವಿಗೆ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ (ಬಿಜೆಪಿ), ಸಂಡೂರಿಗೆ ಬಳ್ಳಾರಿ ಸಂಸದ ಇ ತುಕಾರಾಂ ಪುತ್ರಿ ಸೌಪರ್ಣಿಕಾ (ಕಾಂಗ್ರೆಸ್) ಹೆಸರು ಕೇಳಿ ಬರುತ್ತಿವೆ. ಕುಮಾರಸ್ವಾಮಿ, ಬೊಮ್ಮಾಯಿ ಮತ್ತು ತುಕಾರಾಂ ಲೋಕಸಭೆಗೆ ಆಯ್ಕೆಯಾದ ನಂತರ ಈ ಮೂರು ಕ್ಷೇತ್ರಗಳು ತೆರವಾಗಿದ್ದವು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿಝಡ್ ಜಮೀರ್ ಅಹಮದ್ ಖಾನ್ ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಡೂರು ಕ್ಷೇತ್ರವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ಜಮೀರ್ ಅಹ್ಮದ್ ಅವರಿಗೆ ವಹಿಸಿದೆ.
ಕುಟುಂಬ ಸದಸ್ಯರನ್ನು ಕಣಕ್ಕಿಳಿಸುವುದು ಎಲ್ಲಾ ಪಕ್ಷಗಳಿಗೂ ಸುರಕ್ಷಿತ ತಂತ್ರವೆಂದು ಪರಿಗಣಿಸಲಾಗಿದೆ. ಸಂಬಂಧಿಕರನ್ನು ತಮ್ಮ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವುದರಿಂದ ಹಿಂದಿನ ಕ್ಷೇತ್ರಗಳಲ್ಲಿ ಹಿಡಿತವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ಕೆಪಿಸಿಸಿ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಿರಿಯ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ, ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಸರೇಶ್ ಸ್ಪರ್ಧೆಗೆ ಬೆಂಬಲ ಸೂಚಿಸಬೇಕಾಗುತ್ತದೆ.
ಮಾಜಿ ಸಚಿವ, ಬಿಜೆಪಿ ಎಂಎಲ್ ಸಿ ಸಿಪಿ ಯೋಗೇಶ್ವರ್ ಕೂಡ ಎನ್ ಡಿಎ ಅಭ್ಯರ್ಥಿಯಾಗಲು ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಶಿಗ್ಗಾಂವಿಯಲ್ಲಿ ಸವಣೂರಿನ ದೊಡ್ಡಹುಣಸೆ ಕಲ್ಮಠದ ಶ್ರೀ ಚನ್ನಬಸವೇಶ್ವರ ಸ್ವಾಮೀಜಿ ಹಾಗೂ ಮಾಜಿ ಸಚಿವ ಹಾಗೂ ಕುರುಬ ಮುಖಂಡ ಆರ್.ಶಂಕರ್ ಅವರ ಹೆಸರು ಕಾಂಗ್ರೆಸ್ ಟಿಕೆಟ್ ಗಾಗಿ ಚಾಲ್ತಿಯಲ್ಲಿದೆ. ಭರತ್ ಬೊಮ್ಮಾಯಿ ಅವರಲ್ಲದೆ ಬೊಮ್ಮಾಯಿ ಅವರ ನಿಕಟವರ್ತಿ ಶಶಿಧರ್ ಎಲಿಗಾರ, ಶ್ರೀಕಾಂತ ದುಂಡಿಗೌಡ್ರ ಕೂಡ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ.