Max Review: ಮ್ಯಾಕ್ಸ್‌ನಲ್ಲಿ ಸಿಂಗಲ್ ಶೇರ್‌ನಂತೆ ಗರ್ಜಿಸಿದ ಸುದೀಪ್; ಕಿಚ್ಚನ ಆ್ಯಕ್ಷನ್ ಅಬ್ಬರಕ್ಕೆ ಎಲ್ಲಾ ಗಪ್‌ಚುಪ್!

‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸೈಲೆಂಟ್ ಆಗಿ ‘ಕಿಚ್ಚ’ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಘೋಷಣೆ ಮಾಡಿದ್ದರು. ಹೊಸ ನಿರ್ದೇಶಕರು, ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಂಪೂರ್ಣ ಶೂಟಿಂಗ್, ತಮಿಳಿನ ದೊಡ್ಡ ನಿರ್ಮಾಪಕರಿಂದ ಬಂಡವಾಳ ಎಂದಾಗ, ಸಹಜವಾಗಿಯೇ ‘ಮ್ಯಾಕ್ಸ್’ ಬಗ್ಗೆ ಇನ್ನಿಲ್ಲದಷ್ಟು ನಿರೀಕ್ಷೆ ಸೃಷ್ಟಿಯಾಗಿತ್ತು. ಹಾಗಾದರೆ, ಆ ನಿರೀಕ್ಷೆಗೆ ತಕ್ಕಂತೆ ‘ಮ್ಯಾಕ್ಸ್’ ಮೂಡಿಬಂದಿದೆಯಾ? ಮ್ಯಾಕ್ಸ್.. ಮ್ಯಾಕ್ಸಿಮಮ್ ಎಂಟರ್‌ಟೇನ್‌ಮೆಂಟ್ ನೀಡಿದೆಯಾ? ಮುಂದೆ ಓದಿ.

ಒಂದು ರಾತ್ರಿಯಲ್ಲಿ ನಡೆಯುವ ರೋಚಕ ಕಥೆ

ಒಳ್ಳೆಯ ಕೆಲಸ ಮಾಡಿದಕ್ಕೂ ಪದೇಪದೇ ಸಸ್ಪೆಂಡ್‌ ಎಂಬ ಶಿಕ್ಷೆ ಅನುಭವಿಸಿರುವ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ (ಸುದೀಪ್) ಹಳೆಯ ಪೊಲೀಸ್ ಸ್ಟೇಷನ್‌ವೊಂದಕ್ಕೆ ಹೊಸದಾಗಿ ಇನ್ಸ್‌ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದೆ. ಆದರೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ರಾತ್ರಿಯೇ ಆಗಬಾರದ್ದೆಲ್ಲಾ ಆಗಿಹೋಗುತ್ತದೆ. ಒಂದಿಡೀ ರಾತ್ರಿಯಲ್ಲಿ ಏನೆಲ್ಲಾ ಅವಘಡಗಳು ನಡೆಯುತ್ತವೆ ಮತ್ತು ಅದನ್ನು ಅರ್ಜುನ್ ಮಹಾಕ್ಷಯ್ ಹೇಗೆಲ್ಲಾ ಎದುರಿಸುತ್ತಾನೆ ಎಂಬುದನ್ನು ಮ್ಯಾಕ್ಸಿಮಮ್ ಎಂಟರ್‌ಟೇನ್‌ಮೆಂಟ್‌ ಜೊತೆಗೆ ರೋಚಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ.

ಸುದೀಪ್ ಅಭಿಮಾನಿಗಳಿಗೆ ಊರಹಬ್ಬ

ಬಹುಶಃ ಸುದೀಪ್ ಇಂಥದ್ದೊಂದು ಪಾತ್ರ ಮಾಡಿ ದಶಕವೇ ಆಗಿತ್ತೇನೋ? ಈಚೆಗೆ ಅವರು ಕಾಣಿಸಿಕೊಂಡ ಬಹುತೇಕ ಪಾತ್ರಗಳು ಸಖತ್ ಕ್ಲಾಸ್ ಆಗಿ, ಸ್ಟೈಲಿಶ್ ಆಗಿ ಇದ್ದವು. ಆದರೆ ‘ಮ್ಯಾಕ್ಸ್’ ಹಂಗಲ್ಲ. ಹೆಸರು ಸ್ಟೈಲಿಶ್‌ ಆಗಿದ್ದರೂ, ಪಾತ್ರ ಮಾತ್ರ ಸಖತ್ ರಗಡ್‌! ಮೈಮೇಲೆ ಖಾಕಿ, ಪೊಲೀಸ್ ಅಧಿಕಾರಿಯ ಶಿಸ್ತು ಇಲ್ಲದಿದ್ದರೂ, ಸುದೀಪ್ ಮಸ್ತ್ ಆಗಿ ಆರಕ್ಷಕನ ಗತ್ತನ್ನು ಮೇಂಟೇನ್ ಮಾಡಿದ್ದಾರೆ. ಆ್ಯಕ್ಷನ್ ಅವತಾರದ ಮೂಲಕ ಫ್ಯಾನ್ಸ್‌ಗೆ ಮೃಷ್ಠಾನ್ನ ಕೊಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಇಷ್ಟೊಂದು ದೊಡ್ಡಮಟ್ಟದ ಆ್ಯಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದು ಮ್ಯಾಕ್ಸ್‌ನಲ್ಲಿ ಸಾಧ್ಯವಾಗಿದೆ. ಜೊತೆಗೆ ಅವರ ಒಂದಿಷ್ಟು ಮ್ಯಾನರಿಸಂ ನೋಡುಗರಿಗೆ ಖುಷಿ ನೀಡುತ್ತದೆ.

ಕಲಾವಿದರ ದಂಡಿಗೆ ಸುದೀಪ್ ದಂಡನಾಯಕ

ಮ್ಯಾಕ್ಸ್‌ ಸಿನಿಮಾದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ಸುನಿಲ್, ವರಲಕ್ಷ್ಮೀ ಶರತ್ ಕುಮಾರ್, ಇಳವರಸು, ವೀಣಾ ಸುಂದರ್, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಅನಿರುದ್ಧ್ ಭಟ್, ಸಂಯುಕ್ತಾ ಹೊರನಾಡು ಹೀಗೆ ಹಲವು ಮಂದಿ ಇದ್ದರೂ, ಒನ್‌ ಮ್ಯಾನ್ ಶೋ ರೀತಿ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವುದು ಸುದೀಪ್. ಇದ್ದಿದ್ದರಲ್ಲಿ ಇಳವರಸು, ಉಗ್ರಂ ಮಂಜು ಚೂರು ಹೆಚ್ಚು ಹೈಲೈಟ್ ಆಗಿದ್ದಾರೆ.

ಮೇಕಿಂಗ್ ಹೇಗಿದೆ?

‘ಮ್ಯಾಕ್ಸ್’ ಸಿನಿಮಾ ನೋಡುವಾಗ ಎಷ್ಟೇ ಪ್ರಯತ್ನಪಟ್ಟರೂ ತಮಿಳಿನ ‘ಕೈದಿ’ ಸಿನಿಮಾವನ್ನು ನೆನಪು ಮಾಡಿಕೊಳ್ಳದಿರಲು ಸಾಧ್ಯವಿಲ್ಲ. ಯಾಕೆಂದರೆ, ಎರಡೂ ಸಿನಿಮಾಗಳಲ್ಲಿಯೂ ಬರುವ ಒಂದು ರಾತ್ರಿಯಲ್ಲಿ ನಡೆಯುವ ಕಥೆ, ಪೊಲೀಸ್ ಸ್ಟೇಷನ್ ಮೇಲಿನ ಅಟ್ಯಾಕ್‌ ಕಾಮನ್ ಪಾಯಿಂಟ್‌ಗಳು. ಹಾಗಂತ, ‘ಮ್ಯಾಕ್ಸ್’ ಸಿನಿಮಾವು ‘ಕೈದಿ’ಯ ರಿಮೇಕ್ ಏನಲ್ಲ. ಕಥೆ ವಿಚಾರಕ್ಕೆ ಬಂದರೆ, ಇಲ್ಲಿ ಬೇರೆಯದೇ ತಿರುಳು ಇದೆ, ವಾವ್ ಎನ್ನಿಸುವ ಟ್ವಿಸ್ಟ್‌ಗಳಿವೆ. ನಿರ್ದೇಶಕ ವಿಜಯ್‌ಗೆ ಮೊದಲು ಗೆಲುವು ಸಿಗುವುದೇ ‘ಮ್ಯಾಕ್ಸ್’ ಸಿನಿಮಾವನ್ನು ಪ್ರೆಸೆಂಟ್ ಮಾಡಿರುವ ರೀತಿಯಲ್ಲಿ. ವಂದೇ ಭಾರತ್ ರೈಲಿನಂತೆ ಒಂದೇ ಸಮನೇ ಸಿನಿಮಾ ಓಡುತ್ತದೆ. ಅಲ್ಲಲ್ಲಿ ಲಾಜಿಕ್ ಮಿಸ್ ಆದರೂ, ಅದನ್ನು ಯೋಚಿಸುವುದಕ್ಕೂ ನಿರ್ದೇಶಕರು ಟೈಮ್ ಕೊಡುವುದಿಲ್ಲ. ಅಷ್ಟೊಂದು ವೇಗವಾಗಿದೆ ಸಿನಿಮಾ!

ಒಂದೇ ದಿನದಲ್ಲಿ, ಅದು ಒಂದೇ ರಾತ್ರಿಯಲ್ಲಿ ನಡೆಯುವ ಕಥೆಗಳನ್ನು ತೆರೆಗೆ ತರುವುದು ಸಾಮಾನ್ಯ ವಿಷಯವಲ್ಲ. ಆದರೆ ಮೊದಲ ಪ್ರಯತ್ನದಲ್ಲೇ ನಿರ್ದೇಶಕ ವಿಜಯ್ ಈ ಒಂದು ಚಾಲೆಂಜ್‌ನಲ್ಲಿ ಭಾಗಶಃ ಗೆಲುವು ಕಂಡಿದ್ದಾರೆ. ಮೊದಲರ್ಧ ಮುಗಿದಿದ್ದೇ ಗೊತ್ತಾಗುವುದಿಲ್ಲ. ಆದರೆ ಐಟಂ ಸಾಂಗ್ ರೀತಿಯ ಹಾಡೊಂದು ಬಂದು ಅನಗತ್ಯ ಕಿರಿಕಿರಿ ಉಂಟು ಮಾಡುತ್ತದೆ. ಇನ್ನು, ಸೆಕೆಂಡ್ ಹಾಫ್‌ನಲ್ಲಿ ಒಂಚೂರು ಸ್ಲೋ ಎಂಬ ಫೀಲ್ ಬರುತ್ತಿದ್ದಂತೆಯೇ, ಮತ್ತೆ ಮ್ಯಾಕ್ಸ್ ಓಟ ತನ್ನ ಲಯಕ್ಕೆ ಮರಳುತ್ತದೆ.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ ಹಿನ್ನೆಲೆ ಸಂಗೀತದ ಮೂಲಕ ತಮ್ಮ ಖದರ್ ಏನೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಚಿತ್ರದ ತೆರೆಹಿಂದಿನ ಹೀರೋ ಎಂದರೆ, ಅದು ಅಜನೀಶ್. ಹಾಗೆಯೇ, ಇಡೀ ಸಿನಿಮಾವು ರಾತ್ರಿಯಲ್ಲಿ ಸಾಗಿದರೂ, ಅದನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿಇದ್ದಾರೆ ಶೇಖರ್ ಚಂದ್ರು. ಸುನಿಲ್, ವರಲಕ್ಷ್ಮೀ ಶರತ್ ಕುಮಾರ್ ನಿಭಾಯಿಸಿರುವ ಪಾತ್ರಗಳನ್ನು ಇನ್ನಷ್ಟು ಮೊನಚಾಗಿ ಬರೆಯಬಹುದಾಗಿತ್ತು. ಕೆಲವು ಕಡೆ ಈ ಪಾತ್ರಗಳು ಕ್ಲೀಷೆ ಎನಿಸಿಬಿಡುತ್ತವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *