ಪಾತಾಳಕ್ಕೆ ಇಳಿದ ಟೊಮೆಟೊ ಬೆಲೆ, ತರಕಾರಿ ಬೆಲೆಯಲ್ಲಿಯೂ ಇಳಿಕೆ : ಗ್ರಾಹಕರು ಫುಲ್ ಖುಷ್

ಹೈಲೈಟ್ಸ್‌:

  • ಈ ಹಿಂದೆ ಚಿಲ್ಲರೆ ದರ ಕೆಜಿಗೆ 80-100 ರೂ.ವರೆಗೆ ಏರಿಕೆಯಾಗಿದ್ದ ಟೊಮೆಟೊ ಈಗ ಕೆಲವೆಡೆ 10 ರೂ.ಗೆ ಇಳಿದಿದೆ.
  • ಟೊಮೆಟೊ ದರ ಏರಿಕೆಯಿಂದ ತತ್ತರಿಸಿ ಹುಣಸೆಹಣ್ಣಿಗೆ ಮೊರೆ ಹೋಗಿದ್ದ ಮಹಿಳೆಯರು ಈಗ ಟೊಮೆಟೊಗಳನ್ನು ಮತ್ತೆ ಬಳಸಬಹುದೆಂದು ಖುಷಿಪಡುತ್ತಿದ್ದಾರೆ.
  • ಹೀರೆಕಾಯಿ, ಬೆಂಡೆಕಾಯಿ, ನವಿಲುಕೋಸು, ಹಾಗಲಕಾಯಿ ಹೀಗೆ ಬಹುತೇಕ ತರಕಾರಿ ದರದಲ್ಲಿ 20-30 ಬೆಲೆ ಇಳಿಕೆಯಾಗಿದೆ.

ಗದಗ: ಮಾರುಕಟ್ಟೆಯಲ್ಲಿ ಕೆಂಪು ಚೆಲುವೆ ಟೊಮೆಟೊ ಬೆಲೆ ಪಾತಾಳಕ್ಕೆ ಇಳಿದಿದೆ. ಈ ಬಾರಿ ಉತ್ತಮ ಬೆಲೆ ಸಿಗುವ ಕನಸಿನಲ್ಲಿ ಹೆಚ್ಚಿನ ಟೊಮೆಟೊ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಟೊಮೆಟೊ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡು ಕಂಗಾಲಾಗಿದ್ದಾರೆ.

ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಟೊಮೆಟೊ ಖರೀದಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ. ಟೊಮೆಟೊ ಬೆಲೆ ಜಾಸ್ತಿಯಾದಾಗಿನಿಂದ ಮಹಿಳೆಯರು ಟೊಮೆಟೊ ಖರೀದಿಸಲು ಯೋಚಿಸುವಂತಾಗಿತ್ತು. ಸದ್ಯ ಈಗ ಬೆಲೆ ಇಳಿಕೆಯಾಗಿದ್ದು ಗ್ರಾಹಕರು ಫುಲ್‌ ಖುಷ್‌ ಆಗಿದ್ದಾರೆ. ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದರು. ಈಗ ಬೆಲೆ ಇಳಿಕೆಯಿಂದ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

ಹುಣಸೆ ಹಣ್ಣಿಗೆ ಮೊರೆ :

ಸುಮಾರು ತಿಂಗಳಿಂದ ಏರುಮುಖ ಮಾಡಿದ್ದ ಟೊಮೆಟೊ ದರ ಸ್ವಲ್ಪ ಇಳಿಕೆಯಾಗಿದ್ದರಿಂದ ಮಹಿಳೆಯರಲ್ಲಿ ಸಂತಸ ಮೂಡಿದೆ. ಈ ಹಿಂದೆ ಚಿಲ್ಲರೆ ದರ ಕೆಜಿಗೆ 80-100 ರೂ.ವರೆಗೆ ಏರಿಕೆಯಾಗಿದ್ದ ಟೊಮೆಟೊ ಈಗ ಕೆಲವೆಡೆ 10 ರೂ.ಗೆ ಇಳಿದಿದೆ. ಇನ್ನೂ ಕೆಲವೆಡೆ 5 ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಗ್ರಾಹಕರಲ್ಲಿಸ್ವಲ್ಪ ಸಮಾಧಾನ ತಂದಿದೆ. ಟೊಮೆಟೊ ದರ ಏರಿಕೆಯಿಂದ ತತ್ತರಿಸಿ ಹುಣಸೆಹಣ್ಣಿಗೆ ಮೊರೆ ಹೋಗಿದ್ದ ಮಹಿಳೆಯರು ಈಗ ಟೊಮೆಟೊಗಳನ್ನು ಮತ್ತೆ ಬಳಸಬಹುದೆಂದು ಖುಷಿಪಡುತ್ತಿದ್ದಾರೆ.

ಗ್ರಾಹಕರಲ್ಲಿ ಸಂತಸ :

ಟೊಮೆಟೊ ದರ ಮಾರುಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿಯಲು ಆರಂಭಿಸಿರುವ ಬೆನ್ನಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1 ಕೆಜಿ ಟೊಮೊಟೊ ದರ 5 ರಿಂದ 10, ಗುಣಮಟ್ಟದ ಟೊಮೊಟೊ 10 ರೂ.ಗೆ ಮಾರಾಟವಾಗುತ್ತಿದೆ. ಇದೀಗ ಟೊಮೊಟೊ ದರ ಕುಸಿತ ಒಂದು ರೀತಿ ಗ್ರಾಹಕರ ಮೊಗದಲ್ಲಿ ಸಂತಸ ತರಿಸಿದೆ.

ನಾನಾ ತರದ ಖಾದ್ಯ :

ಮಳೆ ಕಡಿಮೆಯಾಗಿದ್ದು ಹಾಗೂ ಟೊಮೆಟೊ ಪೂರೈಕೆ ಹೆಚ್ಚಾದ ಹಿನ್ನೆಲೆ ಬೆಲೆ ಕುಸಿಯುತ್ತಿದೆ. ಹೆಚ್ಚಿಗೆ ಬೆಲೆ ಇದ್ದಾಗ ಕಡಿಮೆ ಟೊಮೆಟೊ ಖರೀದಿಸುತ್ತಿದ್ದರು. ಈಗ ಕಡಿಮೆ ದರ ಆಗಿದ್ದರಿಂದ ಹೆಚ್ಚಿಗೆ ಟೊಮೊಟೊ ಖರೀದಿಸಿ ತಮಗೆ ಬೇಕಾದ ತರೇಹವಾರಿ ಟೊಮೊಟೊ ಹಣ್ಣಿನಲ್ಲಿ ಖಾದ್ಯ ತಯಾರಿಸುತ್ತಿದ್ದೇವೆ ಎನ್ನುತ್ತಿದ್ದಾರೆ ಮಹಿಳೆಯರು.

ತರಕಾರಿ ಬೆಲೆ ಅಲ್ಪ ಇಳಿಕೆ :

ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕೊಂಚ ಇಳಿಕೆಯಾಗಿದೆ. ಕಳೆದ ವಾರ ಶತಕದ ಗಡಿ ದಾಟಿದ್ದ ವಿವಿಧ ತರಕಾರಿಗಳು ಸ್ವಲ್ಪ ಇಳಿಕೆಯಾಗಿವೆ. ಹೀರೆಕಾಯಿ, ಬೆಂಡೆಕಾಯಿ, ನವಿಲುಕೋಸು, ಹಾಗಲಕಾಯಿ ಹೀಗೆ ಬಹುತೇಕ ತರಕಾರಿ ದರದಲ್ಲಿ 20-30 ಬೆಲೆ ಇಳಿಕೆಯಾಗಿದೆ. ಹಸಿ ಮೆಣಸಿನಕಾಯಿ ಹಾಗೂ ಬದನೆಕಾಯಿ ಮಾತ್ರ ಬೆಲೆ ಏರಿಕೆಯಾಗಿದೆ.

ಕಳೆದ ಸುಮಾರು ದಿನಗಳಿಂದ ಟೊಮೆಟೊ ಇಳಿಕೆಯಾಗುತ್ತಿದ್ದಂತೆ ವ್ಯಾಪಾರ ವಹಿವಾಟು ಜೋರಾಗಿದೆ. ಇಷ್ಟು ದಿನ ಅರ್ಧ ಕೆಜಿ, ಕಾಲ್‌ ಕೆಜಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಈಗ 2 ಕೆಜಿ ಖರೀದಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿ ಹೇಳಿದ್ದಾರೆ.

ಇಂದು ಟೊಮೆಟೊ ಬೆಳೆಯಲು ರೈತರು ನಾನಾ ಬಗೆಯ ಸರ್ಕಸ್‌ ಮಾಡಬೇಕು. ಹೀಗಾಗಿ ಖರ್ಚು ಹೆಚ್ಚು. ಟೊಮೆಟೊ ಕೀಳುವ ಕಾರ್ಮಿಕರಿಗೆ ದಿನದ ಕೂಲಿಯೂ ಹೆಚ್ಚು. ಇದೀಗ ಟೊಮೆಟೊ ಧಾರಣೆ ಹಾಕಿದ್ದ ಬಂಡವಾಳಕ್ಕೂ ಸಾಕಾಗುತ್ತಿಲ್ಲ. ಈ ರೀತಿಯಾದರೆ ನಾವು ಬದುಕುವುದು ಕಷ್ಟವಾಗುತ್ತದೆ ಎಂದು ಸುರೇಶ, ರೈತ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *