BBK 11: ಮಾಜಿ ಗೆಳತಿ ಜೊತೆಗಿನ ರಜತ್ ಫೋಟೋ ವೈರಲ್; ದೂರು ನೀಡಿದ ಪತ್ನಿ ಅಕ್ಷಿತಾ!
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಶುರುವಾಗಿ ಐವತ್ತು ದಿನಗಳು ಕಳೆದ ನಂತರದಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ರಜತ್ ತಮಗೆ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ತಿದ್ದಾರೆ. ಇನ್ನೊಂದು ಕಡೆ ದೊಡ್ಮನೆಯ ಹೊರಗಡೆಗೆ ರಜತ್ ಕುಟುಂಬಕ್ಕೆ ಒಂದು ತಲೆನೋವು ಶುರುವಾಗಿದೆ.
ನಿಜಕ್ಕೂ ಏನಾಯ್ತು?
ರಜತ್ ಅವರ ಮಾಜಿ ಗೆಳತಿ ಜೊತೆಗಿನ ಫೋಟೋಗಳನ್ನು ಹತ್ತಕ್ಕೂ ಹೆಚ್ಚು ಟ್ರೋಲ್‌ಪೇಜ್‌ಗಳು ವೈರಲ್ ಮಾಡುತ್ತಿದ್ದರು. ಇದು ರಜತ್ ಪತ್ನಿ ಅಕ್ಷಿತಾ ಕಣ್ಣಿಗೆ ಬಿದ್ದಿತ್ತು. ಹೀಗಾಗಿ ಅಕ್ಷಿತಾ ಅವರು ಟ್ರೋಲ್ ಪೇಜ್‌ಗಳಿಗೆ “ಈ ರೀತಿ ಮಾಡಬೇಡಿ” ಎಂದು ಮನವಿ ಮಾಡಿದ್ದರು. ಆದರೂ ಕೂಡ ಕೆಲ ಟ್ರೋಲ್ ಪೇಜ್‌ಗಳು ಕೇಳಿರಲಿಲ್ಲ. ಆಮೇಲೆ ಆ ಪೇಜ್‌ಗಳು ಹಣಕ್ಕೆ ಬೇಡಿಕೆ ಇಡುತ್ತಾರೆ. ಅಕ್ಷಿತಾ ಅವರು ಹಣ ಪೇ ಮಾಡಿದ ನಂತರದಲ್ಲಿ ಮತ್ತೆ ಇನ್ನೊಂದಿಷ್ಟು ಪೇಜ್‌ಗಳಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತದೆ. ಹೀಗಾಗಿ ಅಕ್ಷಿತಾ ಅವರು ಸೈಬರ್ ಕ್ರೈಂ ಮೆಟ್ಟಿಲೇರಿದ್ದಾರೆ.
ಸೈಬರ್ ಕ್ರೈಮ್‌ನಲ್ಲಿ ಎಫ್‌ಐಆರ್ ಆದಬಳಿಕ ಆ ಟ್ರೋಲ್‌ಪೇಜ್‌ಗಳು ಆ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ, ಆಮೇಲೆ ಆ ಟ್ರೋಲ್ ಪೇಜ್ ಅಕೌಂಟ್‌ಗಳು ಡಿಆಕ್ಟಿವೇಟ್ ಆಗಿವೆ. ಇನ್ನೊಂದು ಕಡೆ ಪೊಲೀಸರು ಆ ಪೇಜ್‌ಗಳ ಅಡ್ಮಿನ್ ಯಾರು ಎಂದು ಹುಡುಕಾಟ ನಡೆಸುತ್ತಿದ್ದಾರೆ.
ಪ್ರೀತಿಸಿ ಮದುವೆಯಾಗಿರುವ ಅಕ್ಷಿತಾ-ರಜತ್!
ಅಂದಹಾಗೆ ರಜತ್ ಹಾಗೂ ಅಕ್ಷಿತಾ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ. ಅಕ್ಷಿತಾ ಅವರು ʼಪ್ಯಾಟೇ ಹುಡ್ಗೀರ್ ಹಳ್ಳಿ ಲೈಫುʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ನಂತರ ಈ ಜೋಡಿ ʼರಾಜಾ ರಾಣಿʼ ಶೋನಲ್ಲಿಯೂ ಭಾಗವಹಿಸಿತ್ತು. ಇನ್ನು ರಜತ್ ಕೂಡ ʼಗೀತಾಂಜಲಿʼ ಧಾರಾವಾಹಿಯಲ್ಲಿ ನಟಿಸಿದ್ದರು. ಒಟ್ಟಿನಲ್ಲಿ ಈ ಜೋಡಿ ಕನ್ನಡ ಚಿತ್ರರಂಗದಲ್ಲಿ ಆಕ್ಟಿವ್ ಆಗಿದೆ. ಅಂದಹಾಗೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಫುಲ್ ಎಂಟರ್‌ಟೇನ್‌ಮೆಂಟ್ ಪ್ಯಾಕ್ ರಜತ್!
ʼಬಿಗ್ ಬಾಸ್ʼ ಮನೆಯಲ್ಲಿ ಫಿನಾಲೆ ಮೆಟ್ಟಿಲೇರಿರುವ ರಜತ್ ಅವರು ಟ್ರೋಫಿ ಗೆಲ್ತಾರಾ ಎಂದು ಕಾದು ನೋಡಬೇಕಿದೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟವರು ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬರೋದು ತುಂಬ ವಿರಳ ಎನ್ನಬಹುದು. ಆದರೆ ರಜತ್ ಮಾತ್ರ ಎಂಟ್ರಿ ಕೊಟ್ಟಾಗಿನಿಂದ ನೇರವಾಗಿ ಮಾತನಾಡುತ್ತ, ಪಂಚ್ ಡೈಲಾಗ್ ಹೇಳುತ್ತ, ಡ್ಯಾನ್ಸ್ ಮಾಡುತ್ತ, ಹಾಡು ಹಾಡಿ ಒಟ್ಟಾರೆಯಾಗಿ ಟಾಸ್ಕ್‌ನಲ್ಲೂ ಆಕ್ಟಿವ್ ಆಗಿದ್ದು ಫುಲ್ ರಂಜನಿಸಿದ್ದಾರೆ ಎನ್ನಬಹುದು.
ರಜತ್ ಎಂಟ್ರಿಯಿಂದ ಎಚ್ಚರ ಆದ ಮನೆಮಂದಿ!
ʼಬಿಗ್ ಬಾಸ್ʼ ಮನೆಗೆ ರಜತ್ ಎಂಟ್ರಿ ಕೊಟ್ಟ ಬಳಿಕ ಆಟದ ವರಸೆ ಬದಲಾಗಿದೆ ಎನ್ನಬಹುದು. ಜಗದೀಶ್ ಅವರು ದೊಡ್ಮನೆಯಿಂದ ಹೊರಗಡೆ ಹೋದ್ಮೇಲೆ ಆ ಮನೆಯಲ್ಲಿ ಒಂದು ಶಾಂತಿ ನೆಲೆಸಿತ್ತು. ಎಲ್ಲರೂ ಒಂದು ರೀತಿ ನಿದ್ರಾವಸ್ಥೆಗೆ ಜಾರಿದ್ದರು. ಆಮೇಲೆ ರಜತ್ ಎಂಟ್ರಿ ಆಯ್ತು. ಆಗ ಎಲ್ಲರಿಗೂ ನಿದ್ದೆಯಿಂದ ಎಚ್ಚರ ಆಯ್ತು ಎನ್ನಬಹುದು. ಒಟ್ಟಿನಲ್ಲಿ ರಜತ್ ಎಂಟ್ರಿ ಈ ಮನೆಯ ಪ್ರಭಾವ ಬೀರಿದೆ.
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಹನುಮಂತ, ರಜತ್, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು ನಡುವೆ ಯಾರು ಟ್ರೋಫಿ ಗೆಲ್ತಾರೆ? ಯಾರು ರನ್ನರ್ ಅಪ್ ಆಗ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಜನವರಿ 25, 26 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ. ನಿಮ್ಮ ಪ್ರಕಾರ ಯಾರು ಗೆಲ್ಲಬಹುದು?