ಪ್ರವಾಸಿಗರ ನರಮೇಧ: AK 47 ಗನ್ ಹಿಡಿದ ಉಗ್ರನ ಮೊದಲ ಫೋಟೋ ಬಹಿರಂಗ
ಶ್ರೀನಗರ: ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಂನ ಬಳಿಯ ಬೈಸರಣ್ ಎಂಬಲ್ಲಿ ಐವರು ಉಗ್ರರು ದಾಳಿ ನಡೆಸಿದ್ದರು. ದಾಳಿ ನಡೆಸಿದ ಐವರ ಪೈಕಿ ಓರ್ವ ಉಗ್ರನ ಫೋಟೋ ಹೊರಬಂದಿದೆ. ಪ್ರವಾಸಿಗರೊಬ್ಬರು AK 47 ಗನ್ ಹಿಡಿದ ಉಗ್ರನ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸದ್ಯ ಬೆಳಕಿಗೆ ಬಂದಿದೆ. ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಮೃತರಾಗಿದ್ದಾರೆ.ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಳೀಯ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಕೋರರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಮುಂದಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿರುವ ಪ್ರವಾಸಿಗರ ಸ್ಥಳಾಂತರಕ್ಕೆ ಹೆಚ್ಚುವರಿ ವಿಮಾನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಏನಾಯ್ತು?
ಕಾಶ್ಮೀರಕ್ಕೆ ತೆರಳಿದ್ದ ಕನ್ನಡಿಗರು ಸೇರಿ ಪ್ರವಾಸಿಗರ ಮೇಲೆ 5 ಉಗ್ರರಿಂದ ಏಕಾಏಕಿ ಭೀಕರ ಗುಂಡಿನ ದಾಳಿ. 26 ಜನರ ಸಾವು
ಎಲ್ಲಿ?
ಪಹಲ್ಗಾಮ್ ಜಿಲ್ಲೆಯ ಬೈಸರಣ್ ಎಂಬ ಪ್ರವಾಸಿ ತಾಣದಲ್ಲಿ ಘಟನೆ. ಲಷ್ಕರ್ ಎ ತೊಯ್ಬಾ ನಂಟಿನ ಉಗ್ರ ಸಂಘಟನೆಯಿಂದ ಕೃತ್ಯ
ಯಾವಾಗ?
ಮಂಗಳವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ದಾಳಿ. ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ
ಪಹಲ್ಗಾಂ ಎಂಬ ‘ಮಿನಿ ಸ್ವಿಜರ್ಲೆಂಡ್’
ದಕ್ಷಿಣ ಕಾಶ್ಮೀರದ ದಕ್ಷಿಣದಲ್ಲಿರುವ ಅನಂತನಾಗ್ ಜಿಲ್ಲೆಯ ಪಹಲ್ಗಾಂ, ‘ಮಿನಿ ಸ್ವಿಜರ್‌ಲೆಂಡ್’ ಎಂದೇ ಹೆಸರುವಾಸಿ. ಇದಕ್ಕೆ ಕಾರಣ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು ಹಾಸು, ಹಿಮಾಚ್ಛಾದಿತ ಪರ್ವತಗಳು, ಅವುಗಳ ನಡುವೆ ಬಳುಕುತ್ತಾ ಹರಿಯುವ ಲಿಡ್ಡರ್ ನದಿ ಹಾಗೂ ಹಂಗುಲ್, ಕಸ್ತೂರಿ ಜಿಂಕೆ ಇತ್ಯಾದಿಗಳನ್ನೊಳಗೊಂಡ ವೈವಿಧ್ಯಮಯ ಪ್ರಾಣಿಸಂಕುಲ. ಅತಿಹೆಚ್ಚು ಪ್ರವಾಸಿಗರನ್ನು, ಅದರಲ್ಲೂ ನವವಿವಾಹಿತ ಜೋಡಿಗಳನ್ನು ಸೆಳೆಯುವ ರಾಜ್ಯದ ಪ್ರವಾಸಿ ತಾಣಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಪಹಲ್ಗಾಂ, ತನ್ನ ಪ್ರಶಾಂತತೆಗೂ ಹೆಸರುವಾಸಿಯಾಗಿದೆ.