ಮೇಕೆದಾಟು ಯೋಜನೆಗೆ ಕಾಂಗ್ರೆಸ್‌ ಸ್ಟಾಲಿನ್‌ರನ್ನ ಒಪ್ಪಿಸಲಿ ಎಂದಿದ್ದ ಕುಮಾರಸ್ವಾಮಿ; ಎಲ್ಲ ನಾವೇ ಮಾಡಿದ್ರೆ ಕೇಂದ್ರ ಸಚಿವರಿಗೇನು ಕೆಲಸ ?: ಇಕ್ಬಾಲ್‌ ಹುಸೇನ್

  • ಮೇಕೆ ದಾಟು ಯೋಜನೆಗೆ ತಮಿಳುನಾಡಿನ ಸರ್ಕಾರವನ್ನು ಕಾಂಗ್ರೆಸ್‌ ಒಪ್ಪಿಸಲಿ
  • ಎಲ್ಲ ಕೆಲಸ ಸರ್ಕಾರವೇ ಮಾಡಿದರೆ ಕುಮಾರಸ್ವಾಮಿಯವರಿಗೆ ಏನು ಕೆಲಸ ಉಳಿಯಲಿದೆ
  • ಮೇಕೆದಾಟು ಯೋಜನೆಯ ಪ್ರಗತಿಗೆ 1 ಸಾವಿರ ಕೋಟಿ ರೂ. ಮೀಸಲು

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್‌ ನಾಯಕರು ತಮಿಳುನಾಡಿನ ಸ್ಟಾಲಿನ್‌ ಸರಕಾರವನ್ನು ಒಪ್ಪಿಸಿದ ಮೇಲೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇನ್ನೇನು ಕೆಲಸ ಉಳಿಯುತ್ತದೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ತಿರುಗೇಟು ನೀಡಿದರು.

ನಗರದ ನಾನಾ ಬಡಾವಣೆಯಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಕಾಂಗ್ರೆಸ್‌ ನಾಯಕರು ತಮಿಳುನಾಡಿನವರನ್ನು ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಪ್ರಧಾನಿ ಮಂತ್ರಿಗಳಿಂದ ಒಪ್ಪಿಗೆ ಕೊಡಿಸುತ್ತೇನೆ. ನನ್ನ ಹಳೆಯ ಮಾತಿಗೆ ನಾನು ಈಗಲೂ ಬದ್ದ. ಕಾಂಗ್ರೆಸ್ ನವರಿಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಸ್ಟಾಲಿನ್‌ ಸರ್ಕಾರ ಧಿಕ್ಕರಿಸುವ ಶಕ್ತಿಯನ್ನು ಸಹ ಇವರು ಹೊಂದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿರುವುದನ್ನು ಗಮನಿಸಿದ್ದೇನೆ.

ಈ ರೀತಿಯ ಮಾತನ್ನು ಹೊಲ ಉಳುವ ರೈತನೂ ಹೇಳುವುದಿಲ್ಲ. ಭಗವಂತ ನಿಮಗೆ ಶಕ್ತಿ ಕೊಟ್ಟಿದ್ದಾನೆ. 2 ಬಾರಿ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರದಲ್ಲಿಪ್ರಭಾವಿ ಸಚಿವರಾಗಿದ್ದೀರಿ. ಈ ಜಿಲ್ಲೆಯ ಋುಣವೂ ನಿಮ್ಮ ಮೇಲಿದೆ. ರಾಜಕಾರಣ ಬದಿಗೊತ್ತಿ ಕೆಲಸ ಮಾಡಿದರೆ, ಎಲ್ಲವೂ ಸಾಧ್ಯವಾಗಲಿದೆ ಎಂದು ಟಾಂಗ್‌ ನೀಡಿದರು.

ಮೇಕೆದಾಟು ಯೋಜನೆಯ ಅನುಕೂಲ ಮನವರಿಕೆ ಮುಖ್ಯ

ನಾವು ದೂರದೃಷ್ಟಿ ಇಟ್ಟುಕೊಂಡು ಮೇಕೆದಾಟು ಪಾದಯಾತ್ರೆ ನಡೆಸಿದೇವು. ಈಗ ಕಾಂಗ್ರೆಸ್‌ ಸರಕಾರ ಮೇಕೆದಾಟು ಯೋಜನೆಗಾಗಿ 1 ಸಾವಿರ ಕೋಟಿ ಮೀಸಲಿಟ್ಟಿದೆ. ನೀವು ಪ್ರಧಾನ ಮಂತ್ರಿ ಅವರಿಗೆ ಮೇಕೆದಾಟು ಯೋಜನೆಯಿಂದಾಗುವ ಅನುಕೂಲದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಚಾಲನೆ ಕೊಡಿಸಬೇಕು. ನಾವು ಮಾಡಿದ ಹೋರಾಟಕ್ಕೆ ಕುಮಾರಸ್ವಾಮಿ ಅವರು ಫಲ ಕೊಡಿಸಬಹುದು ಎಂದು ಹೇಳಿದರು.

ನನ್ನನ್ನು ಕಂಡರೆ ಕಾಂಗ್ರೆಸ್‌ ನಾಯಕರಿಗೆ ಭಯವೆಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರಲ್ಲಎಂಬ ಪ್ರಶ್ನೆಗೆ ಇಕ್ಬಾಲ್‌ ಅವರು ಹೌದು ಅವರನ್ನು ಕಂಡರೆ ನಮಗೆ ಭಯ. ನಾವು ಬರುವಾಗ ಅವರನ್ನು ಕೇಳುತ್ತೇವೆ, ಹೋಗುವಾಗಲು ಅವರನ್ನು ಕೇಳುತ್ತೇವೆ. ಚುನಾವಣೆಯಲ್ಲಿಸ್ಪರ್ಧೆ ಮಾಡಬೇಕಾದರು ಅವರನ್ನು ಕೇಳಿಯೇ ಸ್ಪರ್ಧಿಸುತ್ತೇವೆ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ಕೊಡಲು ಇನ್ನೂ ಮೂರು ದಿನ ಕಾಲಾವಕಾಶ ಇದೆ. ನಾನು ನಮ್ಮ ಹಕ್ಕನ್ನು ಕೇಳಿದ್ದೇನೆ. ಏನು ಉತ್ತರ ಕೊಡಬೇಕೆಂದು ಆಲೋಚನೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದರು.

ಸಮಯ ಬಂದಾಗ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ. ಪ್ರಯತ್ನ ಫಲ ಕೊಡದಿರಬಹುದು, ಪ್ರಾರ್ಥನೆ ಫಲ ಕೊಡುತ್ತದೆ ಎಂದು ಡಿಕೆಶಿ ಅವರೇ ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ದೈವ ಶಕ್ತಿ ಜತೆಗೆ ಹಣೆಯಲ್ಲೂ ಭಗವಂತ ಬರೆದಿರಬೇಕು. ಅವರ ಪ್ರಾರ್ಥನೆ ಖಂಡಿತವಾಗಿಯೂ ಫಲಿಸುತ್ತದೆ ಎಂದು ಇಕ್ಬಾಲ್‌ ಹುಸೇನ್‌ ಹೇಳಿದರು.

ಮೇಕೆದಾಟು ಬಗ್ಗೆ ತಮಿಳುನಾಡಿನ ವಿರೋಧವೇನು

ಮೇಕೆದಾಟು ಯೋಜನೆಗೆ ಆದ್ಯತೆ ಮೇರೆಗೆ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಲು ಕರ್ನಾಟಕದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವಾಲಯವನ್ನು ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್, “ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಕರ್ನಾಟಕದ ಯೋಜನೆಗೆ ಅವಕಾಶ ನೀಡದಂತೆ ತಡೆಯಲು ಎಲ್ಲ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಈ ಹಿಂದೆ ಹೇಳಿದ್ದರು.

ತಮಿಳುನಾಡು ಮೇಕೆದಾಟು ಯೋಜನೆಯನ್ನು ಏಕೆ ವಿರೋಧಿಸುತ್ತಿದೆ? ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ 67.16 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಜಲಾಶಯವನ್ನು ನಿರ್ಮಿಸಲು ಕರ್ನಾಟಕ ಮುಂದಾಗಿದೆ. ಆದರೆ, ತಮಿಳುನಾಡಿನ ಅನುಮತಿ ಇಲ್ಲದೆ ಕರ್ನಾಟಕವು ಈ ಯೋಜನೆಯನ್ನು ಜಾರಿಗೊಳಿಸುವಂತಿಲ್ಲ. ಏಕೆಂದರೆ, ಮೇಕೆದಾಟು ಯೋಜನೆಯಿಂದ ನೈಸರ್ಗಿಕವಾಗಿ ಹರಿಯುವ ನದಿಗೆ ಅಡ್ಡಿಯಾಗುತ್ತದೆ ಎಂದು ತಮಿಳುನಾಡು ವಾದಿಸಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *