ತುಂಗಭದ್ರಾ ಡ್ಯಾಂ ನೀರು ನದಿ ಪಾಲು: ವ್ಯರ್ಥ ಮಾಡುವ ಬದಲು ಕಾಲುವೆಗಳಿಗೆ ಹರಿಸಲು ರೈತರ ಆಗ್ರಹ

  • ತುಂಗಭದ್ರಾ ಜಲಾಶಯವು ಈ ವರ್ಷ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಿದೆ, ಇದರಿಂದ 105.788 ಟಿಎಂಸಿ ಸಾಮರ್ಥ್ಯದಲ್ಲಿ ಹೆಚ್ಚಿನ ನೀರು ವ್ಯರ್ಥವಾಗುತ್ತಿದೆ.
  • ಈ ವರ್ಷ ಡ್ಯಾಂನ ಕ್ರಸ್ಟ್‌ಗೇಟ್‌ಗಳನ್ನು ಶಿಥಿಲಗೊಂಡ ಕಾರಣ, ತಜ್ಞರು ಹೆಚ್ಚುವರಿ ನೀರನ್ನು ನದಿಗೆ ಹರಿಸಲು ನಿರ್ಧರಿಸಿದ್ದಾರೆ
  • ಕಳೆದ ವರ್ಷ 492.66 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂತು, ಆದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರು ಹಿಂದಿನ ವರ್ಷಗಳಂತೆ ವ್ಯರ್ಥವಾಗಿ ಹರಿಯುವ ಸಾಧ್ಯತೆ ಇದೆ.

ಪ್ರಸಕ್ತ ಸಾಲಿನಲ್ಲಿ ಮುಂಚಿತವಾಗಿ ದೊಡ್ಡ ಪ್ರಮಾಣದಲ್ಲಿ ನೀರು ಡ್ಯಾಂ ಒಡಲು ಸೇರಿರುವುದರಿಂದ ಈ ಹಿಂದಿನ ವರ್ಷಗಳಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಿರುವ ಪೈಕಿ ಇದೇ ವರ್ಷ ಅತಿ ಹೆಚ್ಚು ನೀರು ವ್ಯರ್ಥವಾಗಿ ಹರಿಯಲಿದೆ. ಡ್ಯಾಂನಿಂದ ಇದೇ ರೀತಿ ಪ್ರತಿ ವರ್ಷ ನೂರಾರು ಟಿಎಂಸಿ ನೀರು ನದಿಗೆ ವ್ಯರ್ಥವಾಗಿ ಹರಿದುಹೋಗುವುದು ಸಾಮಾನ್ಯ. ಈ ಹಿಂದಿನ ವರ್ಷಗಳಲ್ಲಿ ಜಲಾಶಯ ತುಂಬಿದ ಬಳಿಕ ನದಿಗೆ ಹರಿಸಲಾಗುತ್ತಿತ್ತು. ಆದರೆ, ಈ ವರ್ಷ 80 ಟಿಎಂಸಿ ಮಾತ್ರ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹಿಸಿಕೊಂಡು, ಹೆಚ್ಚಿನ ನೀರನ್ನು ನದಿಗೆ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಡ್ಯಾಂ ಭರ್ತಿ ಮಾಡದಿರಲು ನಿರ್ಧಾರ

ಡ್ಯಾಂನ ಕ್ರಸ್ಟ್‌ಗೇಟ್‌ಗಳು ಶಿಥಿಲಗೊಂಡಿರುವ ಹಿನ್ನೆಲೆ ಈ ಬಾರಿ ಗರಿಷ್ಠ ಸಂಗ್ರಹ ಮಟ್ಟದಲ್ಲಿ ಡ್ಯಾಂ ಭರ್ತಿ ಮಾಡದಿರಲು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಹೆಚ್ಚುವರಿ ನೀರನ್ನು ಕಳೆದ ವಾರದಿಂದಲೇ ನದಿಗೆ ಹರಿಸಲು ಆರಂಭಿಸಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಟಿಎಂಸಿ ನೀರು ಸಮುದ್ರದ ಪಾಲಾಗಲಿದೆ. ಕಳೆದ ದಶಕದ ಅಂಕಿ ಅಂಶಗಳಿಗೆ ಹೋಲಿಸಿದಾಗ ಈ ಬಾರಿ ದೊಡ್ಡ ಪ್ರಮಾಣದ ನೀರು ನದಿ ಪಾಲಾಗಲಿದೆ.

ಹೆಚ್ಚುವರಿ ನೀರು ನದಿಗೆ:

105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಟಿಬಿ ಡ್ಯಾಂನಲ್ಲಿ ಈ ಸಲ 80 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹಿಸಲು ಎಂಜಿನಿಯರುಗಳು ನಿರ್ಧರಿಸಿದ್ದಾರೆ. ಒಂದು ಬೆಳೆಗೆ ಮತ್ತು ಕುಡಿಯುವ ನೀರು ಸೇರಿ ಒಟ್ಟು 120 ಟಿಎಂಸಿ ಬಳಕೆಗೆ ಅಂದಾಜು ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್‌ 10ರಂದು ಡ್ಯಾಂ ಗರಿಷ್ಠ ಸಂಗ್ರಹ ಮಟ್ಟ 1633 ಅಡಿ ದಾಖಲಾಗಿದ್ದ ದಿನವೇ ಗೇಟ್‌ ಕೊಚ್ಚಿಕೊಂಡು ಹೋಗಿತ್ತು. ಗೇಟ್‌ಗಳು ಅಶಕ್ತಗೊಂಡಿರುವ ಕುರಿತು ತಜ್ಞರು ವರದಿ ನೀಡಿದ ಆಧಾರದಲ್ಲಿಈ ಬಾರಿ ಡ್ಯಾಂ ಗರಿಷ್ಠ ಮಟ್ಟದಲ್ಲಿನೀರು ಸಂಗ್ರಹಿಸದಿರಲು ನಿರ್ಧರಿಸಿರುವ ಮಂಡಳಿ, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿದೆ.

 

 

ಜೂನ್‌ ತಿಂಗಳಾಂತ್ಯಕ್ಕೆ 70 ಟಿಎಂಸಿ ಸಂಗ್ರಹ:

ಈ ಹಿಂದಿನ ವರ್ಷಗಳಲ್ಲಿ ಬಹುತೇಕವಾಗಿ ಜುಲೈ ಎರಡನೇ ವಾರದ ಬಳಿಕ ಡ್ಯಾಂ ಭರ್ತಿಯಾಗುವುದು ಅಥವಾ ಹೆಚ್ಚುವರಿ ನೀರನ್ನು ನದಿಗೆ ಹರಿಸುವುದು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮುಂಚಿತವಾಗಿಯೇ ನಿರೀಕ್ಷೆಗಿಂತಲೂ ಅಧಿಕ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಜೂನ್‌ ತಿಂಗಳಾಂತ್ಯಕ್ಕೆ 70 ಟಿಎಂಸಿಗಿಂತಲೂ ಅಧಿಕ ನೀರಿನ ಸಂಗ್ರಹ ದಾಖಲಾಗಿತ್ತು. ಇದರೊಂದಿಗೆ ಒಳಹರಿವು ಉತ್ತಮವಾಗಿತ್ತು. ಹಾಗಾಗಿ ಈಗಾಗಲೇ ಬಂದಿರುವ ಒಟ್ಟಾರೆ ನೀರಿನಲ್ಲಿಜು.2ರಿಂದ ಈವರೆಗೆ ಈಗಾಗಲೇ 15 ಟಿಎಂಸಿಗಿಂತಲೂ ಅಧಿಕ ನೀರನ್ನು ನದಿಗೆ ಹರಿಸಲಾಗಿದೆ. ಆದರೆ, ಕಳೆದ ವರ್ಷ ಇಷ್ಟು ಪ್ರಮಾಣದ ನೀರು ಜಲಾಶಯಕ್ಕೆ ಬಂದಿರಲಿಲ್ಲ. ಒಟ್ಟು ಸಂಗ್ರಹವೇ 19 ಟಿಎಂಸಿ ನೀರಿತ್ತು.

 

ಕಾಲುವೆಗೆ ನೀರು ಹರಿಸಿ:

ಈ ಬಾರಿ ಗೇಟ್‌ ದುರಸ್ತಿ ಹಿನ್ನೆಲೆ ಕಾಲುವೆಗೆ ನೀರು ಹರಿಸುವ ಮುನ್ನವೇ ನದಿಗೆ ಹರಿಸಲಾಗಿದೆ. ವ್ಯರ್ಥವಾಗಿ ಹರಿಸುವ ಬದಲು ಕಾಲುವೆಗೆ ಬಿಟ್ಟರೆ ರೈತರಿಗೆ ಅನುಕೂಲವಾಗಲಿದೆ. ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಭಾಗದ ಅನೇಕ ಗ್ರಾಮಗಳ ರೈತರು ಕೃಷಿಗಾಗಿ ನೆಚ್ಚಿಕೊಂಡಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದ ಸಾಲಿನಲ್ಲಿ ಒಟ್ಟಾರೆ 492.66 ಟಿಎಂಸಿ ನೀರು ಹರಿದು ಬಂದಿತ್ತು. ಇದರಲ್ಲಿ 250 ಟಿಎಂಸಿಗಿಂತಲೂ ಅಧಿಕ ನೀರು ನದಿಗೆ ಹರಿದಿದೆ. ಅದರ ಹಿಂದಿನ ವರ್ಷ ಡ್ಯಾಂ ಭರ್ತಿಯಾಗಿರಲಿಲ್ಲ. ಅದಕ್ಕೂ ಮುಂಚಿನ ವರ್ಷವೂ ಮುನ್ನೂರು ಟಿಎಂಸಿ ನೀರು ವ್ಯರ್ಥವಾಗಿ ಹರಿದಿದೆ.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬೇಗ ಬದಲಿಸಿದ್ದಲ್ಲಿ ಈ ಬಾರಿ ಅತಿ ಹೆಚ್ಚಿನ ನೀರು ಸಿಗುತ್ತಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ವ್ಯರ್ಥವಾಗಿ ನೂರಾರು ಟಿಎಂಸಿ ನೀರು ಹರಿದು ಹೋಗುತ್ತಿದೆ. ಇದರ ಬದಲು ಕಾಲುವೆಗಾದರೂ ಮುಂಚಿತವಾಗಿ ಬಿಟ್ಟರೆ ರೈತರಿಗೆ ಅನುಕೂಲವಾಗಲಿದೆ ಎಂದಿದ್ದಾರೆ ಸಿ.ಎ.ಗಾಳೆಪ್ಪ ಜಿಲ್ಲಾಧ್ಯಕ್ಷ, ರೈತ ಸಂಘ, ವಿಜಯನಗರ

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *