114ಯಲ್ಲೂ ಉತ್ಸಾಹಿಯಾಗಿದ್ದ ಫೌಜಾ ಸಿಂಗ್ ನಿಧನ; ಪತ್ನಿಯನ್ನು ಕಳೆದುಕೊಂಡಾಗ ಖಿನ್ನತೆ ಓಡಿಸಲು ಮ್ಯಾರಥಾನ್ ಓಡಿದಾತನೀತ!

  • ವಿಶ್ವವಿಖ್ಯಾತ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರು 114ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ನಿಧನ
  • ಪಂಜಾಬ್ ರಾಜ್ಯದ ಜಲಂಧರ್ ನ ಅವರ ಹುಟ್ಟೂರು ಬೀಸ್ ಪಿಂಡ್ ನಲ್ಲಿ ಭಾನುವಾರ ಮಧ್ಯಾಹ್ನ ದುರ್ಘಟನೆ
  • 89ನೇ ವಯಸ್ಸಿನಲ್ಲಿ ಮ್ಯಾರಥಾನ್ ನಲ್ಲಿ ಭಾಗವಹಿಸಲು ಆರಂಭಿಸಿದ ಫೌಜಾ ಸಿಂಗ್ 101ನೇ ವಯಸ್ಸಿನವರೆಗೂ ಸಕ್ರಿಯ

ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಎಲ್ಲರ ಮನ ಗೆದ್ದಿದ್ದ ಶತಾಯುಷಿ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರು ತಮ್ಮ 114ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟ ನೆ ವರದಿಯಾಗಿದೆ. ಭಾನುವಾರ ಮಧ್ಯಾಹ್ನ 3:30 ರ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ಗುರುತಿಸಲಾಗದ ವಾಹನವೊಂದು ಡಿಕ್ಕಿ ಹೊಡೆದಿದ್ದು ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಎಲ್ಲರೂ ನಿವೃತ್ತರಾಗಿ ಆರಾಮಮಾಗಿ ದಿನಕಳೆಯಲು ಬಯಸುವ 89 ನೇ ವಯಸ್ಸಿನಲ್ಲಿ ಅವರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಪ್ರಾರಂಭಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರು. 2011 ರಲ್ಲಿ ಟೊರೊಂಟೊ ವಾಟರ್‌ಫ್ರಂಟ್ ಮ್ಯಾರಥಾನ್ ಅನ್ನು 100 ನೇ ವಯಸ್ಸಿನಲ್ಲಿ ಪೂರ್ಣಗೊಳಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ ಅಡೀಡಸ್‌ನ ‘ಇಂಪಾಸಿಬಲ್ ಈಸ್ ನಥಿಂಗ್’ ಅಭಿಯಾನದ ಭಾಗವಾಗಿದ್ದರು.

ಯಾರು ಈ ಫೌಜಾ ಸಿಂಗ್?

ಫೌಜಾ ಸಿಂಗ್ ಏಪ್ರಿಲ್ 1, 1911 ರಂದು ಪಂಜಾಬ್ ನ ಜಲಂಧರ್ ನಲ್ಲಿ ಜನಿಸಿದರು. 1993 ರಲ್ಲಿ ಇಂಗ್ಲೆಂಡ್‌ಗೆ ವಲಸೆ ಹೋದ ನಂತರ 89 ನೇ ವಯಸ್ಸಿನಲ್ಲಿ ಮ್ಯಾರಥಾನ್ ಓಟಗಳನ್ನು ಪ್ರಾರಂಭಿಸಿದರು. ಅವರನ್ನು ‘ಟರ್ಬನ್ಡ್ ಟೊರ್ನಾಡೊ’ ಎಂದು ಕರೆಯಲಾಗುತ್ತಿತ್ತು. ಐದು ವರ್ಷ ವಯಸ್ಸಿನವರೆಗೆ ನಡೆಯಲು ಸಾಧ್ಯವಾಗದ ವ್ಯಕ್ತಿಯೊಬ್ಬರು 14 ವರ್ಷಗಳಲ್ಲಿ (2000 ರಿಂದ 2013 ರವರೆಗೆ) ಒಂಬತ್ತು ಪೂರ್ಣ ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದು ದೊಡ್ಡ ಸಾಧನೆಯಾಗಿತ್ತು. ಬಾಕ್ಸಿಂಗ್ ದಂತಕಥೆ ಮುಹಮ್ಮದ್ ಅಲಿ ಮತ್ತು ಫುಟ್‌ಬಾಲ್ ದಂತಕಥೆ ಡೇವಿಡ್ ಬೆಕ್‌ಹ್ಯಾಮ್ ಅವರನ್ನೂ ಒಳಗೊಂಡ ಅಡೀಡಸ್‌ನ ಪ್ರಚಾರದ ಮುಖವಾಣಿಯಾಗಿದ್ದರು.

ಫೌಜಾ ಸಿಂಗ್ ಅವರ ಪತ್ನಿ ಗಿಯಾನ್ ಕೌರ್ ಸೇರಿದಂತೆ ಹಲವಾರು ಕುಟುಂಬ ಸದಸ್ಯರು ನಿಧನರಾದ ನಂತರ, ಅವರು ಖಿನ್ನತೆಯನ್ನು ಎದುರಿಸಲು ಓಟವನ್ನು ಆರಿಸಿಕೊಂಡರು. ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾಗ, ಫೌಜಾ ಸಿಂಗ್ ತಮ್ಮ ಇಲ್ಫೋರ್ಡ್ ಮನೆಯ ಬಳಿಯ ಸಾರ್ವಜನಿಕ ಉದ್ಯಾನವನಗಳಲ್ಲಿ ದೀರ್ಘ ನಡಿಗೆ ಮತ್ತು ಓಟವನ್ನು ಪ್ರಾರಂಭಿಸಿದರು. ಅವರು ಮೊದಲ ಬಾರಿಗೆ ಏಪ್ರಿಲ್ 2000 ರಲ್ಲಿ 89 ನೇ ವಯಸ್ಸಿನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿದರು. 6 ಗಂಟೆ 54 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು. ಹಿರಿಯ ವಯೋಮಾನದ ವಿಭಾಗದಲ್ಲಿ ಹಿಂದಿನ ವಿಶ್ವ ದಾಖಲೆಯನ್ನು 58 ನಿಮಿಷಗಳ ಅಂತರದಿಂದ ಉತ್ತಮಪಡಿಸಿದರು. ಅವರು ಸ್ಪರ್ಧಿಸಿದಲ್ಲೆಲ್ಲಾ ಎಲ್ಲರ ಗಮನ ಸೆಳೆದು ಹಲವಾರು ವಯೋಮಾನದ ದಾಖಲೆಗಳನ್ನು ಮುರಿದರು. ಅವರು 101 ವರ್ಷ ವಯಸ್ಸಿನವರೆಗೆ ಸ್ಪರ್ಧಾತ್ಮಕ ಓಟಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರು.

ಮ್ಯಾರಥಾನ್ ಮತ್ತು ದತ್ತಿ ಕಾರ್ಯಗಳಲ್ಲಿನ ಸಾಧನೆಗಾಗಿ, ಫೌಜಾ ಸಿಂಗ್ ಅವರಿಗೆ 2015 ರಲ್ಲಿ ಬ್ರಿಟಿಷ್ ಎಂಪೈರ್ ಮೆಡಲ್ ನೀಡಲಾಯಿತು. ಲಂಡನ್ ಒಲಿಂಪಿಕ್ಸ್‌ನ ಜ್ಯೋತಿಧಾರಕರಲ್ಲಿ ಫೌಜಾ ಸಿಂಗ್ ಸಹ ಒಬ್ಬರಾಗಿದ್ದರು. 100 ನೇ ವಯಸ್ಸಿನಲ್ಲಿ, ಅವರು ಟೊರೊಂಟೊ ಮ್ಯಾರಥಾನ್ ಅನ್ನು 8 ಗಂಟೆ 11 ನಿಮಿಷಗಳಲ್ಲಿ ಓಡಿ ಮುಗಿಸಿದರು. ಮರು ವರ್ಷ ಲಂಡನ್‌ನಲ್ಲಿ ತಮ್ಮ ಕೊನೆಯ ಮ್ಯಾರಥಾನ್ ಅನ್ನು 7 ಗಂಟೆ 49 ನಿಮಿಷ ಮತ್ತು 21 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ನಂತರ, ಫೌಜಾ ಸಿಂಗ್ ಮ್ಯಾರಥಾನ್‌ ನ 10 ಕಿಮೀ ವಿಭಾಗದಲ್ಲಿ ಸ್ಪರ್ಧಿಸಿದರು. 2012 ರಲ್ಲಿ ಹಾಂಗ್ ಕಾಂಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಕೊನೆಯದಾಗಿ ಭಾಗವಹಿಸಿ ನಿವೃತ್ತಿ ಸಾರಿದರು.

ಗಣ್ಯರ ಕಂಬನಿ

ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರು ಫೌಜಾ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ದಂತಕಥೆ ಮ್ಯಾರಥಾನ್ ಓಟಗಾರ ಮತ್ತು ಸ್ಥೈರ್ಯದ ಸಂಕೇತವಾಗಿದ್ದ ಸರ್ದಾರ್ ಫೌಜಾ ಸಿಂಗ್ ಜಿ ಅವರ ನಿಧನದಿಂದ ರಾಜ್ಯವೂ ಸೇರಿದಂತೆ ವಿಶ್ವವೇ ತೀವ್ರ ದುಃಖಿತವಾಗಿದೆ. 114 ನೇ ವಯಸ್ಸಿನಲ್ಲಿ, ಅವರು ನನ್ನೊಂದಿಗೆ ‘ನಶಾ ಮುಕ್ತ್ – ರಂಗ್ಲಾ ಪಂಜಾಬ್’ ಮೆರವಣಿಗೆಯಲ್ಲಿ ಸಾಟಿಯಿಲ್ಲದ ಉತ್ಸಾಹದಿಂದ ಭಾಗವಹಿಸಿದರು. ಅವರ ಪರಂಪರೆಯು ಮಾದಕ ದ್ರವ್ಯ ಮುಕ್ತ ಪಂಜಾಬ್‌ಗೆ ಸ್ಫೂರ್ತಿ ನೀಡುತ್ತದೆ. ಅವರು ಸ್ಥೈರ್ಯದ ಸಂಕೇತವಾಗಿದ್ದರು.” ಎಂದು ಪಂಜಾಬ್ ಗವರ್ನರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫೌಜಾ ಸಿಂಗ್ ಅವರ ಜೀವನಚರಿತ್ರೆ ‘ಟರ್ಬನ್ಡ್ ಟೊರ್ನಾಡೊ’ ವನ್ನು ಖ್ಯಾತ ಪತ್ರಕರ್ತ ಮತ್ತು ಲೇಖಕ ಖುಷ್ವಂತ್ ಸಿಂಗ್ ಅವರು ಬರೆದಿದ್ದಾರೆ. ಅವರ ಜೀವನವೇ ಒಂದು ಸ್ಫೂರ್ತಿಯ ಚಿಲುಮೆಯಾಗಿತ್ತು. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಲ ಅವರದಾಗಿತ್ತು. ವಯಸ್ಸನ್ನು ಮೀರಿ ಸಾಧನೆ ಮಾಡುವ ಹುಮ್ಮಸ್ಸು ಅವರದಾಗಿತ್ತು ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಫೌಜಾ ಸಿಂಗ್ ಅವರು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಜೊತೆ ಓಡಬೇಕು ಎಂದು ಬಯಸಿದ್ದನ್ನು ಪಂಜಾಬ್ ನ ಜನ ನೆನಪಿಸಿಕೊಳ್ಳುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *