ಶರಣಬಸವ ವಿ.ವಿಯಲ್ಲಿ ಪತ್ರಿಕಾ ದಿನಾಚರಣೆ : ವೃತ್ತಿಪರ ಪತ್ರಕರ್ತರಿಗೆ ವಿಫುಲ ಅವಕಾಶ

ಕಲಬುರಗಿ,ಜು.17(ಕ.ವಾ.) ಮಾಧ್ಯಮ‌ ಕ್ಷೇತ್ರದಲ್ಲಿ ವೃತ್ತಿಪರ ಪತ್ರಕರ್ತರಿಗೆ ಇಂದಿನ ದಿನಮಾನದಲ್ಲಿ ವಿಫುಲ ಅವಕಾಶವಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮುಂದೇನೆಂಬ ಚಿಂತೆಯ ಭಯ ಬೇಡ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಕಲಬುರಗಿ ಅವೃತ್ತಿಯ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಹೇಳಿದರು.

ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅನುಭವ ಮಂಟಪದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆಲ್ಲ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ಪತ್ರಿಕೆ, ಸುದ್ದಿ ವಾಹಿನಿಗಳನ್ನೆ ಅವಲಂಬಿಸಬೇಕಿತ್ತು.‌ ಇದೀಗ ಸಾಮಾಜಿಕ ಮಾಧ್ಯಮ ವೇಗವಾಗಿ ಬೆಳೆಯುತ್ತಿರುವುದರಿಂದ ಇಲ್ಲಿಯೂ ಉದ್ಯೋಗದ ಅವಕಾಶ ಹೆಚ್ಚಿದೆ. ಅದರಲ್ಲಿಯೂ ವೃತ್ತಿಪರತೆ ಮೈಗೂಡಿಸಿಕೊಂಡವರಿಗೆ, ಭಾಷೆಯ ಮೇಲೆ ಪ್ರಭುದ್ಧತೆ ಇರುವವರಿಗೆ ಅವಕಾಶ ಹೆಚ್ಚು. ಕಾರ್ಪೋರೇಟ್ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿಯೂ ಕೆಲಸ ಮಾಡಬಹುದಾಗಿದೆ. ಇದಲ್ಲದೆ ಪೋಟೋ ಎಡಿಟಿಂಗ್, ಡಿಸೈನ್, ಜಾಹೀರಾತು ಅನೇಕ ವಿಭಾಗದಲ್ಲಿ ಉದ್ಯೋಗ ಇವೆ ಎಂದರು.

ಸುದ್ದಿ ವಾಹಿನಿ ಬಂದ ಮೇಲೆ ಮುದ್ರಣ ಮಾಧ್ಯಮದ ಕಥೆ ಮುಗಿಯಿತು ಎನ್ನುತ್ತಿದ್ದರು. ಅದರೆ ಇಂದಿಗೂ ವಿದ್ಯುನ್ಮಾನ ವಾಹಿನಿಕ್ಕಿಂತ ಮುದ್ರಣ ಮಾಧ್ಯಮ ತನ್ನ ಸಾಮಾಜಿಕ ಜವಾಬ್ದಾರಿ ಬಹಳ ಎಚ್ಚರಿಕೆಯಿಂದ ನಿಭಾಯಿಸುತ್ತಿದೆ ಎಂದು ಹಲವಾರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಪತ್ರಿಕಾ ವೃತ್ತಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ಪ್ರತಿ ದಿನ ದಿನಪತ್ರಿಕೆಗಳನ್ನು ಓದುವ ಮೂಲಕ ಮತ್ತು ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದ ಅವರು, ತನಿಖಾ ವರದಿ ಮಾಡುಚಾದ ದಾಖಲೆ ಇಟ್ಟುಕೊಳ್ಳುವುದು ಒಳಿತು ಎಂದರು.

ಇಂದು ನಿಜ ಸುದ್ದಿಗಾಗಿ ಪರಿಶ್ರಮ ಪಡಬೇಕಿದೆ. ಫ್ಯಾಕ್ಡ್ ನ್ಯೂಸ್ ನೀಡಬೆಕಾದ ನಾವು ಸುದ್ದಿ ಮಾಡಲು ಫ್ಯಾಕ್ಟ್ ಚೆಕ್‌ ಮಾಡುವ ಪರಿಸ್ಥಿತಿಯಲ್ಲಿದ್ದೇವೆ. ಪತ್ರಕರ್ತನಾದವನು ಜೀವಪರ, ಜನಪರವಾಗಿದ್ದು, ಪತ್ರಿಕಾ ಧರ್ಮದ‌ ಮೌಲ್ಯ ಎತ್ತಿ ಹಿಡಿಯಬೇಕು. 181 ದೇಶಗಳ ಪೈಕಿ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತ ಇಂದು 151ನೇ ಸ್ಥಾನದಲ್ಲಿದೆ. ಅದೇ ರೀತಿ ವಾಕ್ ಸ್ವಾತಂತ್ರ್ಯದಲ್ಲಿ 109ನೇ‌ ಸ್ಥಾನ. ವಿಶ್ವದ ಬಲಿಷ್ಟ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯ ಉಳಿಸುಚ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಿಕಾ ದಿನಾಚರಣೆಯ ಈ ಸಂದರ್ಭದಲ್ಲಿ ನಾವೆಲ್ಲರು ಇದನ್ನು ಅವಲೋಕನ ಮಾಡಿಕೊಳ್ಳಲು ಇದು ಸೂಕ್ತ ಕಾಲ ಎಂದು ಅಭಿಪ್ರಾಯಪಟ್ಟರು

ಕೌಶಲ್ಯಕ್ಕೆ ಮಹತ್ವ ಕೊಡಿ:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಮಾತನಾಡಿ, ಕೌಶಲ್ಯ ಇದ್ದಲ್ಲಿ ಮಾತ್ರ ಮನುಷ್ಯನಿಗೆ ಬೆಲೆ ಇದೆ. ಹೀಗಾಗಿ ನಿಮ್ಮ ಆಸಕ್ತಿಯ ವಿಷಯದಲ್ಲಿ ಕೌಶಲ್ಯತೆ ಹೆಚ್ಚಿಸಿಕೊಳ್ಳಬೇಕು. ಕಥೆ, ಕಾದಂಬರಿ, ಸಾಹಿತ್ಯ ಓದು ವೃತ್ತಪರತೆ ಹೆಚ್ಚಿಸಲು ಅನುಕೂಲವಾಗಲಿದೆ. ಇನ್ನು ಮೊಬೈಲ್ ಬಳಕೆ ಸಿಮಿತವಾಗಿ ಬಳಸಿ ಅನಗತ್ಯ ಅದರಲ್ಲಿಯೇ ಕಳೆದು ಹೋಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅನಿಲಕುಮಾರ ಜಿ. ಬಿಡವೆ ಮಾತನಾಡಿ, ಇಂದು ಯಾವುದೇ ಒಂದು ಗಣ್ಯರ ಭಾಷಣವನ್ನು ಎ.ಐ. ತಂತ್ರಜ್ಞಾನ ಸಹಾಯದಿಂದ ಕ್ಷಣಾರ್ಧದಲ್ಲಿ ತಮಗೆ ಬೇಕಾದ ಭಾಷೆಯಲ್ಲಿ ಭಾಷಾಂತರ ಮಾಡಬಹುದಾಗಿದೆ. ಇಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶರಣಬಸವ ವಿ.ವಿ. ಶೈಕ್ಷಣಿಕ ಪಠ್ಯಕ್ರಮದ ಜೊತೆ ಮಾನವೀಯ ಮೌಲ್ಯ ಬಿತ್ತುವ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಮಾತನಾಡಿ, ಶರಣಬಸವ ವಿ.ವಿ. ಪತ್ರಿಕೋದ್ಯಮ ವಿಷಯದಲ್ಲಿ ಚಲನಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸೇಡಂ ಪತ್ರಕರ್ತರ ಸಂಘದಿಂದ ಪತ್ರಿಕಾ ಕ್ಷೇತ್ರದಲ್ಲಿನ ಗಣನೀಯ ಸೇವೆಗೆ ಕೊಡಮಾಡುವ ಬಿ.ಮಹಾದೇವಪ್ಪ ಪ್ರಶಸ್ತಿಗೆ ಭಾಜನರಾಗಿರುವ ವಿಶ್ವವಿದ್ಯಾಲಯದ ಸಮಾಜ ನಿಕಾಯದ ಡೀನ್ ಟಿ.ವಿ.ಶಿವಾನಂದನ್ ಅವರನ್ನು ಉಪ ಕುಲಪತಿ ಡಾ.ಅನೀಲಕುಮಾರ್ ಜಿ. ಬಿಡವೇ ಸೇರಿದಂತೆ ಗಣ್ಯರು, ವಿಭಾಗದ ಪ್ರಾಧ್ಯಾಪಕ ವೃಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಸೇರಿದಂತೆ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ವಿಶ್ವವಿದ್ಯಾಲಯದ ಸಮಾಜ ನಿಕಾಯದ ಡೀನ್ ಟಿ.ವಿ.ಶಿವಾನಂದನ್ ಸರ್ವರನ್ನು ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಚೇರ ಪರ್ಸನ್ ಡಾ.ಸುನಿತಾ ಪಾಟೀಲ ನಿರೂಪಿಸಿದರು. ಚಂದ್ರಶೇಖರ‌ ಕಕ್ಕೇರಿ ವಂದಿಸಿದರು. ವಿದ್ಯಾರ್ಥಿನಿ ಸೌಮ್ಯ ಪ್ರಾರ್ಥನೆಗೈದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *