ಭಾಗ್ಯವಂತಿ ದೇವಾಲಯ ಹುಂಡಿ ಎಣಿಕೆ: 550 ಗ್ರಾಂ ಚಿನ್ನಾಭರಣ,5 ಕೆ.ಜಿ ಬೆಳ್ಳಿ ಮತ್ತು 70 ಲಕ್ಷ ರೂ. ನಗದು ಸಂಗ್ರಹ
ಕಲಬುರಗಿ : ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಅಫಜಲಪೂರ ತಾಲೂಕಿನ ಸುಕ್ಷೇತ್ರ ಘತ್ತರಗಾದ ಶ್ರೀ ಭಾಗ್ಯವಂತಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, 550 ಗ್ರಾಂ ಚಿನ್ನಾಭರಣ, 5 ಕೆ.ಜಿ. ಬೆಳ್ಳಿ ಹಾಗೂ 70 ಲಕ್ಷ ರೂ. ಕ್ಕಿಂತ ಅಧಿಕ ನಗದು ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಕುದರಿ ತಿಳಿಸಿದ್ದಾರೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮುಂದಾಳತ್ವದಲ್ಲಿ ಪೊಲೀಸ್ ಮತ್ತು ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಒಟ್ಟು 11 ಹುಂಡಿಗಳ ಪೈಕಿ 9 ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ದೇವಾಲಯದ ಸಿಬ್ಬಂದಿ ಒಳಗೊಂಡಂತೆ ತಾಲೂಕಿನ 70 ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಮತ್ತು ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ 11ರ ನಂತರ ಆರಂಭಗೊಂಡ ಎಣಿಕೆ ಕಾರ್ಯ ಸಂಜೆ 7.30 ಗಂಟೆ ವರೆಗೆ ನಡೆಯಿತು.
ಉಪ ತಹಸೀಲ್ದಾರರು ಚೆನ್ನಬಸಪ್ಪ, ಕಂದಾಯ ನಿರೀಕ್ಷಕ ಅಶೋಕ, ಅಫಜಲಪುರ ಪೊಲೀಸ್ ಠಾಣೆಯ ಎ.ಎಸ್.ಐ ಅಂಬಾರಾಯ, ಮುಖ್ಯ ಪೇದೆ ಶಿವಪ್ಪ, ದೇವಾಲಯದ ಮಂಜುನಾಥ ನಾವಿ ಸೇರಿದಂತೆ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.