ಸೆ.17ಕ್ಕೆ ಮುಖ್ಯಮಂತ್ರಿಗಳಿಂದ ಕೆ.ಕೆ.ಆರ್.ಡಿ.ಬಿ. ಹಾರ್ಟ್ ಲೈನ್ ಯೋಜನೆಗೆ ಚಾಲನೆ ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆ ಸಿಕ್ಕರೆ ಶೇ.80ರಷ್ಟು ಹೃದಯಾಘಾತ ಸಾವು ತಪ್ಪಿಸಬಹುದು -ಡಾ.ಅಜಯ್ ಸಿಂಗ್

 

ಕಲಬುರಗಿ,ಸೆ.(ಕರ್ನಾಟಕ ವಾರ್ತೆ) ಪ್ರದೇಶದ ಹೃದ್ರೋಗಿಗಳಿಗೆ ಗೋಲ್ಡನ್ ಹವರ್ ನಲ್ಲಿ‌ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಯ ಆರ್ಥಿಕ ನೆರವಿನ “ಕೆ.ಕೆ.ಅರ್.ಡಿ.ಬಿ ಹಾರ್ಟ್ ಲೈನ್” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.17 ರಂದು‌ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ಸೋಮವಾರ ಕಲಬುರಗಿ ನಗರದಲ್ಲಿರುವ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಜೀವನಶೈಲಿ ಕಾರಣ ಹದಿಹರೆಯದ ಯುವಕರು, 40ಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೂ ಹಾರ್ಟ್ ಅಟ್ಯಾಕ್ ಕಾಣುತ್ತಿದ್ದೇವೆ. ಕಳೆದ‌ 3 ವರ್ಷದಲ್ಲಿ ಜಯದೇವ ಆಸ್ಪತ್ರೆಯ ಅಂಕಿ ಸಂಖ್ಯೆ ನೋಡಿದಾಗ ಹೃದಯಾಘಾತದಿಂದ ನಿಧನ ಹೊಂದಿದ 1,004 ರಲ್ಲಿ 45 ವಯಸ್ಸಿಗ್ಗಿಂತ ಕಡಿಮೆ ಇರುವ 477 ಜನ ಸಾವನಪ್ಪಿದ್ದಾರೆ. ಹೀಗಾಗಿ ಹೃದಯಾಘಾತದಿಂದ ಸಾವು ತಪ್ಪಿಸುವ ನಿಟ್ಟಿನಲ್ಲಿ ಈ ಹಾರ್ಟ್ ಲೈನ್ ಯೋಜನೆ ಆರಂಭಿಸಲಾಗುತ್ತಿದೆ ಎಂದರು.

ಈ ಯೋಜನೆಯಡಿ ಕಲಬುರಗಿ ಜಿಲ್ಲೆಗೆ 9, ಬೀದರ-4, ಯಾದಗಿರಿ-2, ರಾಯಚೂರು-5, ಬಳ್ಳಾರಿ-4, ಕೊಪ್ಪಳ-5, ವಿಜಯನಗರ-3 ಸೇರಿದಂತೆ ಒಟ್ಟು ಅತ್ಯಾಧುನಿಕ 32 ಅಂಬುಲೆನ್ಸ್ ವಾಹನಗಳನ್ನು ಒದಗಿಸಲಾಗಿದೆ. ಕಾರ್ಡಿಯಕ್ ಮಾನಿಟರ್, ಡೆಫಿಬ್ರಿಲೇಟರ್, ಪೋರ್ಟೇಬಲ್ ವೆಂಟಿಲೇಟರ್, ಅಂಬು ಬ್ಯಾಗ್, ಎಮರ್ಜೆನ್ಸಿ ಡ್ರಗ್ಸ್ ಸೇವೆಗಳನ್ನು ಈ ಅಂಬುಲೆನ್ಸ್ ಹೊಂದಿವೆ ಎಂದರು.

32 ಅಂಬುಲೆನ್ಸ್ ವಾಹನಗಳು ಪ್ರದೇಶದ ತಾಲೂಕಾ, ಸಮುದಾಯ ಆರೋಗ್ಯ ಆಸ್ಪತ್ರೆಗಳಿಗೆ ಹಂಚಿಕೆ ಮಾಡಿದ್ದು, ಒಟ್ಟು 9.64 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ ಅಂಬುಲೆನ್ಸ್ (ಬಿ.ಎಲ್.ಎಸ್) ಅರೋಗ್ಯ ಇಲಾಖೆಗೆ ಹಸ್ತಾಂತರಿಸಿದೆ. ಪ್ರಸ್ತುತ ಇರುವ 49 ಅಂಬುಲೆನ್ಸ್ ಸೇರಿದಂತೆ ಒಟ್ಟಾರೆ 81 ಅಂಬುಲೆನ್ಸ್ ವಾಹನಗಳು ಪ್ರದೇಶದ‌ ಆರೋಗ್ಯ ಸೇವೆಗಳಿಗೆ ಲಭ್ಯವಾಗಲಿವೆ ಎಂದರು.

ಮಂಡಳಿಯಿಂದ ಕಳೆದ‌ 2 ವರ್ಷಗಳಲ್ಲಿ “ಆರೋಗ್ಯ ಆವಿಷ್ಕಾರ” ಯೋಜನೆಯಡಿ ಸುಮಾರು 2,000 ಕೋಟಿ ರೂ. ಒದಗಿಸಿದ್ದೇವೆ‌. ಪ್ರಸಕ್ತ ವರ್ಷ ಸಹ ಕಲಬುರಗಿಯಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 40 ಕೋಟಿ ರೂ., ಬೀದರ ವೈದ್ಯಕೀಯ ಸಂಸ್ಥೆಯ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿಭಾಗ ಅರಂಭಿಸಲು 18 ಕೋಟಿ ರೂ., ಕಲಬುರಗಿಯ ಜಿಮ್ಸ್ ಅಧೀನದಲ್ಲಿ ಎಂಡೋಕ್ರೋನೊಲೋಜಿ ಘಟಕ ಸ್ಥಾಪನೆಗೆ 18 ಕೋಟಿ ರೂ., ಕಲಬುರಗಿಯಲ್ಲಿ ನಿಮ್ಹಾನ್ಸ್ ಶಾಖೆ ಸ್ಥಾಪನೆಗೆ 34 ಕೋಟಿ ರೂ., ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ 34 ಕೋಟಿ ರೂ., ರಾಯಚೂರಿನ ರಾಜೀವ ಗಾಂಧಿ‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ 17 ಕೋಟಿ ರೂ. ಹಾಗೂ ಯಲಬುರ್ಗಾ, ಜೇವರ್ಗಿ ಹಾಗೂ ಕೊಪ್ಪಳನಲ್ಲಿ ತಲಾ 6 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ ಮತ್ತು ಕಲಬುರಗಿಯಲ್ಲಿ ಆರೋಗ್ಯ ಭವನ ನಿರ್ಮಾಣಕ್ಕೆ ಮಂಡಳಿ ಅನುದಾನ ನೀಡುತ್ತಿದೆ ಎಂದರು.

ಹಬ್ & ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ:

ಕೆ.ಕೆ.ಆರ್.ಡಿ.ಬಿ ಹಾರ್ಟ್ ಲೈನ್ ಯೋಜನೆ ಹಬ್ & ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ನೀಡುವ ಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ವ್ಯಕ್ತಿ ಹೃದಯಾಘಾತಕ್ಕೆ ಒಳಗಾದಲ್ಲಿ ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ರೋಗಿಯನ್ನು ಹತ್ತಿರದ ತಾಲೂಕಾ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಸೂಕ್ತ ತರಬೇತಿ ಪಡೆದ ಹಬ್ & ಸ್ಪೋಕ್ ಸೆಂಟರ್ ವೈದ್ಯರು ಜಯದೇವ ಆಸ್ಪತ್ರೆಯ ತಜ್ಞ ವೈದ್ಯರ ಸಲಹೆ ಪಡೆದು ಪ್ರಾಥಮಿಕ ಚಿಕಿತ್ಸೆ‌ ನೀಡುತ್ತಾರೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಜಯದೇವ ಆಸ್ಪತ್ರೆಗೆ ರೋಗಿಯನ್ನು ಕಳುಹಿಸುವ‌ ವ್ಯವಸ್ಥೆ ಇಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ 12 ಚಾನೆಲ್ ಇ.ಸಿ.ಜಿ, ಎನ್.ಐ.ಬಿ.ಪಿ., ಎಸ್.ಪಿ.ಓ-2, ಮೊಬೈಲ್ ಫೋನ್, ಲ್ಯಾಪಟಾಪ, ಪ್ರಿಂಟರ್ ಸೌಲಭ್ಯ ಒದಗಿಸಲಾಗಿದೆ ಎಂದರು.

ಕಲಬುರಗಿ,‌ ಬೀದರ, ಯಾದಗಿರಿ, ರಾಯಚೂರು ಜಿಲ್ಲೆಯ ಕೆಲವು ಆಸ್ಪತ್ರೆಗಳು
ಕಲಬುರಗಿಯ ಜಯದೇವ ಆಸ್ಪತ್ರೆ ಹಬ್ ಗೆ, ಕೊಪ್ಪಳ ಜಿಲ್ಲೆಯ ಅಸ್ಪತ್ರೆಗಳು ಬಾಗಲಕೋಟೆಯ ಹಬ್ ಗೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಸ್ಪತ್ರೆಗಳು ಬಳ್ಳಾರಿ ಹಬ್ ಗೆ ಒಳಪಡಲಿವೆ. ಮುಂದಿನ ದಿನದಲ್ಲಿ ಸಮುದಾಯ ಅರೋಗ್ಯ ಕೇಂದ್ರದ ವರೆಗೂ ಈ ಸೇವೆ ವಿಸ್ತರಣೆ ಮಾಡುವ‌ ಚಿಂತನೆ ಇದೆ ಎಂದು ಡಾ.ಅಜಯ್ ಸಿಂಗ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್, ಉಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ, ಉಪನಿರ್ದೇಶಕ ಡಾ.ಅಂಬರಾಯ ರುದ್ರವಾಡಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *