ಜಗತ್ತಲ್ಲಿ ಯಾವ್ದು ಶಾಶ್ವತವಲ್ಲ, ಯಾರಿಗೂ ತೊಂದರೆಯಾಗದಂತೆ ಪ್ರೀತಿಯಿಂದ ಬದುಕಿ – ಕೊನೆಕ್ಷಣದಲ್ಲಿ ರಾಜ್ಯದ ಜನತೆಗೆ ತಿಮ್ಮಕ್ಕನ ಭಾವನಾತ್ಮಕ ಸಂದೇಶ
ಬೆಂಗಳೂರು/ತುಮಕೂರು: ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ಯಾರಿಗೂ ತೊಂದರೆ, ಹಿಂಸೆಯಾಗದಂತೆ ಪ್ರೀತಿಯಿಂದ ಬದುಕಿ ಎಂದು ಅಜ್ಜಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (Salumarada Timakka) ಅವರು ಅಂತಿಮ ಕ್ಷಣದಲ್ಲಿ ಭಾವುಕರಾಗಿ ರಾಜ್ಯದ ಜನತೆಗೆ ಸಂದೇಶವನ್ನು ನೀಡಿದ್ದಾರೆ.

ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ಇರುವಷ್ಟು ದಿನ ಯಾರಿಗೂ ತೊಂದರೆ, ಹಿಂಸೆಯಾಗದಂತೆ ಪ್ರೀತಿಯಿಂದ ಬದುಕಿ. ಬಡವ, ಶ್ರೀಮಂತ, ಭಿಕ್ಷುಕ, ಅಸಹಾಯಕ ಎನ್ನದೇ ಎಲ್ಲರೂ ಒಂದೇ ತರಹ ಬದುಕಿ. ಎಲ್ಲರನ್ನು ಗೌರವಿಸಿ, ಪ್ರೀತಿಸಿ. ದೇಶವನ್ನು ಪ್ರೀತಿಸಿ, ದೇಶ ಚೆನ್ನಾಗಿದ್ದರೆ ಎಲ್ಲರೂ ಚಂದ. ಚಿಕ್ಕವರಾಗಲಿ, ದೊಡ್ಡವರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ, ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿರಿ. ಗೋ ಕಟ್ಟೆಗಳನ್ನು ಕಟ್ಟಿಸಿ, ಕೆರೆ ಕಟ್ಟಿಸಿ, ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ, ಹಣ್ಣು ಬಿಡುವ ಮರಗಳನ್ನು ಬೆಳೆಸಿ, ಹಕ್ಕಿಪಕ್ಷಿಗಳ ಆಧಾರವಾಗಲಿ, ದೇಶದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ, ದೇಶ ಚೆನ್ನಾಗಿರಲಿ ಬಡವನನ್ನು ಕಂಡು ಭಿನ್ನ ಭೇಧ ಮಾಡಬೇಡಿ. ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ. ನಾನು ಮಾಡಿದ ಗಿಡ ನೆಡುವ, ಉಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನನ್ನ ಮಗನಾದ ಉಮೇಶ ದೇಶದಲ್ಲೆಲ್ಲ ಗಿಡ ನೆಡುವ ಮತ್ತು ನಡೆಸುವ ಕಾರ್ಯ ಮಾಡುತ್ತಾ ಸಾಗು. ಮತ್ತೊಮ್ಮೆ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ನನ್ನ ಪತಿ ದೇವರ ಆಶೀರ್ವಾದ ಮತ್ತು ನನ್ನ ಆಶೀರ್ವಾದ ನನ್ನ ಮಗನ ಮೇಲಿರಲಿ ಎಂದಿದ್ದಾರೆ
