ಟೆಂಡರ್‌ ಸ್ವೀಕಾರಕ್ಕೆ ನಿರಾಸಕ್ತಿ, ಅರೆ ಹೊಟ್ಟೆಯಲ್ಲಿ ದಸರಾ ಆನೆಗಳು!

ಜಂಬೂಸವಾರಿಯ ದಸರಾ ಗಜಪಡೆ ರಾಜಾತಿಥ್ಯ ಸ್ವೀಕರಿಸುವ ಬದಲಿಗೆ ಕಳೆದ ಮೂರು ದಿನಗಳಿಂದ ಅರೆಹೊಟ್ಟೆಯಲ್ಲಿಯೇ ಕಾಲದೂಡುತ್ತಿದೆ ಎನ್ನಲಾಗಿದೆ. ಒಂದು ಆನೆಗೆ ದಿನಕ್ಕೆ 400 ಕೆಜಿಗೂ ಹೆಚ್ಚು ಹಸಿರು ಮೇವು ಬೇಕು.

 
ಮೈಸೂರು: ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ದಸರಾ ಗಜಪಡೆ ರಾಜಾತಿಥ್ಯ ಸ್ವೀಕರಿಸುವ ಬದಲಿಗೆ ಕಳೆದ ಮೂರು ದಿನಗಳಿಂದ ಅರೆಹೊಟ್ಟೆಯಲ್ಲಿಯೇ ಕಾಲದೂಡುತ್ತಿದೆ!

ಆನೆಗಳಿಂದಲೇ ಜಂಬೂಸವಾರಿಗೆ ನಿಜವಾದ ಸೌಂದರ್ಯ ಬರುತ್ತದೆ. ಅದಕ್ಕಾಗಿಯೇ ಆನೆಗಳನ್ನು ಕಾಡಿನಿಂದ ನಾಡಿಗೆ ತಂದು ಪಾಲನೆ-ಪೋಷಣೆ ಮಾಡಲಾಗುತ್ತದೆ. ಒಂದು ಆನೆಗೆ ದಿನಕ್ಕೆ 400 ಕೆಜಿಗೂ ಹೆಚ್ಚು ಹಸಿರು ಮೇವು (ಹಸಿಹುಲ್ಲು, ಮರದ ರೆಂಬೆ-ಕೊಂಬೆ) ಬೇಕು. ಆನೆಗಳಿಗೆ ಶಿಬಿರದಲ್ಲಿ ನೀಡಲಾಗುವ ಕುಸುಬಲ ಅಕ್ಕಿ, ಭತ್ತ, ಉದ್ದಿನಕಾಳು, ಕಡಲೆಕಾಯಿ, ತೆಂಗಿನಕಾಯಿ, ಬೆಲ್ಲ ಕೇವಲ ಊಟದೊಂದಿಗಿನ ಉಪ್ಪಿನಕಾಯಿ ಇದ್ದ ಹಾಗೆ. ಅವುಗಳಿಗೆ ಮುಖ್ಯವಾದ ಆಹಾರವೆಂದರೆ ಸೊಪ್ಪು, ಹಸಿಹುಲ್ಲು, ಭತ್ತದ ಹುಲ್ಲು, ಮರದ ರೆಂಬೆ-ಕೊಂಬೆ ಮಾತ್ರ. ಆದರೆ, ದಸರಾ ಗಜಪಡೆ ನಗರಕ್ಕೆ ಆಗಮಿಸಿ ಮೂರು ದಿನವಾದರೂ ಹೊಟ್ಟೆ ತುಂಬ ಹಸಿರು ಆಹಾರ ನೀಡಿಲ್ಲ. ಕೇವಲ ಕಾಳು, ಕಡ್ಡಿಗಳನ್ನಷ್ಟೇ ನೀಡಲಾಗುತ್ತಿದೆ. ಹೀಗಾಗಿ ಆನೆಗಳು ಅರೆಹೊಟ್ಟೆಯಲ್ಲೇ ದಿನ ಕಳೆಯುವಂತಾಗಿದೆ.

ಏನು ಕಾರಣ?: ದಸರೆಗೆ ಬರುವ ಆನೆಗಳಿಗೆ ಆಹಾರ ನೀಡಲು ಟೆಂಡರ್‌ ಕರೆಯಲಾಗುತ್ತದೆ. ಆದರೆ, ಈ ಬಾರಿ ಆನೆಗಳಿಗೆ ನೀಡುವ ಹಸಿರು ಮೇವನ್ನು ಸರಬರಾಜು ಮಾಡಲು ಅರಣ್ಯ ಇಲಾಖೆ ನಿಗದಿಪಡಿಸಿರುವ ದರ ತೀರಾ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಯಾರೂ ಟೆಂಡರ್‌ ಪಡೆಯಲು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆಗಳಿಗೆ ನೀಡುವ ಹಸಿರು ಮೇವಿಗೆ ನಿಗದಿಪಡಿಸಿರುವ ಶೇಕಡಾ ಅರ್ಧದಷ್ಟು ದರವನ್ನೂ ದಸರಾ ಆನೆ ಮೇವಿಗೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಟೆಂಡರ್‌ನಲ್ಲಿ ಗುತ್ತಿಗೆದಾರರು ಸಕ್ರಿಯವಾಗಿ ಭಾಗವಹಿಸಿಲ್ಲ. 1 ಟನ್‌ ಹಸಿರು ಆಹಾರವನ್ನು ಲಾರಿಯಲ್ಲಿ ಸಾಗಿಸಲು ತಗಲುವ ವೆಚ್ಚವೇ ದುಬಾರಿ. ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಮರದ ರೆಂಬೆಕೊಂಬೆಗಳನ್ನು ಕತ್ತರಿಸಲು ಅವಕಾಶವಿಲ್ಲ. ನಗರ ಹೊರವಲಯದಿಂದ ಹಸಿರು ಆಹಾರವನ್ನು ತರಬೇಕಾದರೆ ಸಾಗಣೆ ವೆಚ್ಚ ಜಾಸ್ತಿಯಾಗುತ್ತದೆ. ಈ ಕಾರಣಕ್ಕೆ ಟೆಂಡರ್‌ದಾರರು ಆಸಕ್ತಿ ತೋರಿಸಿಲ್ಲ. ಟೆಂಡರ್‌ ಪ್ರಕ್ರಿಯೆ ಕಬ್ಬಿಣದ ಕಡಲೆಯಾಗಿದೆ.

ಪೂರ್ವ ಸಿದ್ಧತೆ ಕೊರತೆ: ಈ ಬಾರಿ ಕೇವಲ ಐದು ಆನೆಗಳು ಬರುತ್ತವೆ ಎಂದು ತಿಳಿದ ಮೇಲೂ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳ ಪಾಲನೆ-ಪೋಷಣೆಗೆ ಬೇಕಾದ ಪೂರ್ವಸಿದ್ಧತೆ ಮಾಡಿಕೊಂಡಿಲ್ಲಎಂಬ ದೂರುಗಳು ಕೇಳಿ ಬರುತ್ತಿವೆ. ದಸರಾ ಆನೆಗಳು ಅರಮನೆ ಪ್ರವೇಶಿಸುತ್ತಿದ್ದಂತೆ ಮುಖ್ಯವಾಗಿ ಅವುಗಳಿಗೆ ಆಹಾರ ಬೇಕಾಗುತ್ತದೆ. ಪ್ರತಿವರ್ಷ ಕನಿಷ್ಠ 12 ಆನೆಗಳಿಗೆ ಆಹಾರ ಪೂರೈಸಲು ಟೆಂಡರ್‌ ಕರೆಯಲಾಗುತ್ತಿತ್ತು.

ಈಗ ಮತ್ತೆ ಹೆಚ್ಚಿನ ದರ ನಿಗಧಿಪಡಿಸಿ ಮರು ಟೆಂಡರ್‌ ಕರೆಯಲು ಸಮಯವಿಲ್ಲದ್ದರಿಂದ ಮೃಗಾಲಯದಿಂದ ಅಥವಾ ಹೊರಗಿನಿಂದ ಸೊಪ್ಪು ಖರೀದಿಸಲು ಇಲಾಖೆ ನಿರ್ಧರಿಸಿದೆ.

ಯಾವುದಕ್ಕೆ ಟೆಂಡರ್‌ ಆಗಿದೆ?
ಸೊಪ್ಪು, ಹಸಿಹುಲ್ಲು, ಭತ್ತದ ಹುಲ್ಲು ಹಾಗೂ ಕಬ್ಬಿಗೆ ಟೆಂಡರ್‌ ಕರೆಯಲಾಗಿದೆ. ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಮಾವುತರು ಕಾಡಿನಿಂದ ತಂದ ಅಲ್ಪಸ್ಪಲ್ಪ ಸೊಪ್ಪನ್ನೇ ಆನೆಗಳಿಗೆ ಹಾಕುತ್ತಿದ್ದಾರೆ. ಹಸಿರುಕಾಳು, ಉದ್ದಿನಕಾಳು, ಕುಸುಬಲ ಅಕ್ಕಿ, ಗೋಧಿ, ಭತ್ತ, ತೆಂಗಿನಕಾಯಿ, ಬೆಲ್ಲ, ಕಡಲೆಕಾಯಿ ಹಿಂಡಿಗಳಿಗೆ ಬೇರೊಬ್ಬರಿಗೆ ಟೆಂಡರ್‌ ಆಗಿದ್ದು, ಇವೆಲ್ಲಸಿಗುತ್ತಿವೆ. ಆದರೆ, ಕಾಡಿನಲ್ಲಿರುವ ಆನೆಗಳಿಗೆ ಪ್ರೋಟಿನ್‌ ನೀಡುವುದೇ ಸೊಪ್ಪು, ಹಸಿಹುಲ್ಲು. ಇದು ಸಿಗದ ಕಾರಣ ಆನೆಗಳು ಅರೆಹೊಟ್ಟೆಯಲ್ಲಿವೆ.

ಹಸಿ-ಒಣಹುಲ್ಲು, ಭತ್ತದ ಹುಲ್ಲು ಹಾಗೂ ಕಬ್ಬಿಗೆ ಟೆಂಡರ್‌ ಕರೆದಿದ್ದರೂ ಯಾರೂ ಮುಂದೆ ಬಂದಿಲ್ಲ. ಹೊಸ ಟೆಂಡರ್‌ ಕರೆಯಲು ಹೆಚ್ಚು ಸಮಯವಿಲ್ಲ. ಹಾಗಾಗಿ ಹೊರಗಿನಿಂದ ಸೊಪ್ಪು ಖರೀದಿಸಲಾಗುವುದು. ಅಥವಾ ಮೃಗಾಲಯದಿಂದ ಒಂದಷ್ಟು ಸೊಪ್ಪು, ಮೇವನ್ನು ಪಡೆಯಲು ತೀರ್ಮಾನಿಸಲಾಗಿದೆ.
– ಅಲೆಕ್ಸಾಂಡರ್‌, ಡಿಸಿಎಫ್‌

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *