ಕಾಂತಾರ ನಟ ರಿಷಬ್ ಶೆಟ್ಟಿಗೆ ವಾರಾಹಿ ಪಂಜುರ್ಲಿ ದೈವದ ಅಭಯ : ’ನಾನಿದ್ದೇನೆ, ಕಣ್ಣೀರು ಹಾಕಬೇಡ..’
ಹೈಲೈಟ್ಸ್:
- ವಾರಾಹಿ ಪಂಜುರ್ಲಿ ದೈವಕ್ಕೆ ತುಳುನಾಡು ಸಂಪ್ರದಾಯ ಪ್ರಕಾರ ಎಣ್ಣೆ ಬೂಳ್ಯ
- ಕಾಂತಾರ ಚಾಪ್ಟರ್ ಒನ್ ಸಿನಿಮಾಗೆ ಸಿಕ್ಕ ಅಭೂತಪೂರ್ವ ಯಶಸ್ಸು, ಚಿತ್ರತಂಡದಿಂದ ಕೋಲ
- ಎಣ್ಣೆ ಬೂಳ್ಯದಲ್ಲಿ ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರುಗೆ ದೈವದ ಅಭಯ
ಕಾಂತಾರ ಚಾಪ್ಟರ್ ಒನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್ ಮತ್ತು ಕಾಂತಾರ ಚಿತ್ರತಂಡ, ತುಳುನಾಡಿನ ಸಾಂಪ್ರದಾಯಿಕ ಹರಕೆ ನೇಮೋತ್ಸವದಲ್ಲಿ ಭಾಗಿಯಾಗಿತ್ತು. ಆ ವೇಳೆ, ಪಂಜುರ್ಲಿ ದೈವದಿಂದ, ರಿಷಬ್ ಶೆಟ್ಟಿಗೆ ಅಭಯ ಸಿಕ್ಕಿದೆ.
ಮಂಗಳೂರಿನ ಬಾರೇಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಈ ಹರಕೆಯ ನೇಮೋತ್ಸವ ನಡೆದಿದೆ. ಇದರಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆಯ ಮಾಲೀಕ ವಿಜಯ್ ಕಿರಗಂದೂರು, ಚಿತ್ರನಟ ನಿರ್ದೇಶಕ ರಿಷಬ್ ಶೆಟ್ಟಿ, ಅವರ ಪತ್ನಿ ಪ್ರಗತಿ, ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ, ಚಿತ್ರತಂಡದ ಹಲವರು ಭಾಗಿಯಾಗಿದ್ದರು.
ಕಾಂತಾರ ಚಾಪ್ಟರ್ ಒನ್ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ, ಪಂಜುರ್ಲಿ ದೈವದ ವೇಷವನ್ನು ಧರಿಸುವುದು, ದೈವದಂತೆ ನಡೆದುಕೊಳ್ಳುವುದು ಮುಂತಾದ ಅನುಕರಣೆಯನ್ನು ಅಲ್ಲಲ್ಲಿ ಮಾಡಲಾಗುತ್ತಿತ್ತು. ಕೊನೆಗೆ, ಹೊಂಬಾಳೆ ಫಿಲಂಸ್, ಪ್ರೇಕ್ಷಕರಲ್ಲಿ, ದೈವವನ್ನು ನಂಬುವವರ ಭಾವನೆಗೆ ನೋವುಂಟು ಮಾಡಬೇಡಿ ಎಂದು ಮನವಿ ಮಾಡಿತ್ತು.
ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್ ಈ ನೇಮೋತ್ಸವವನ್ನು ಆಯೋಜಿಸಿದ್ದರು. ನೇಮೋತ್ಸವದ ವೇಲೆ, ಪಂಜುರ್ಲಿ ದೈವವು, ರಿಷಬ್ ಶೆಟ್ಟಿಯವರನ್ನು ಅಪ್ಪಿಕೊಂಡು, ಕೈಮೂಲಕ, ನಿನ್ನ ಹಿಂದೆ ನಾನಿದ್ದೇನೆ ಎನ್ನುವ ಅಭಯವನ್ನು ನೀಡಿತು. ಇನ್ನು, ವೀಳ್ಯ ಶಕುನದ ವೇಳೇ, ದೈವವು ನಾನು ಸಂತುಷ್ಟನಾಗಿದ್ದೇನೆ ಎಂದು ತಿಳಿಸಿತು.
ನೇಮೋತ್ಸವದ ಕೋಲಕ್ಕೂ ಮೊದಲು, ತುಳುನಾಡಿನ ಭೂತಾರಾಧನೆಯ ಪದ್ದತಿಯ ಪ್ರಕಾರ, ಪೂಜೆಗಳು ನಡೆದವು. ಅದರಲ್ಲಿ ಒಂದು, ಎಣ್ಣೆ ಬೂಳ್ಯವನ್ನು ನೀಡಲಾಯಿತು. ಎಣ್ಣೆ ಬೂಳ್ಯದ ವೇಳೆ, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿಗೆ ದೈವವು ಅಭಯವನ್ನು ನೀಡಿತು.
ಎಣ್ಣೆ ಬೂಳ್ಯದಲ್ಲಿ ತೆಂಗಿನ ಎಣ್ಣೆ, ಐದು ಅಡಿಕೆ ಮತ್ತು ಒಂದು ವೀಳ್ಯದೆಲೆ ಇರುತ್ತದೆ. ಇದು ಪೂಜೆಗೆ ಮತ್ತು ಭೂತ ಕೋಲಕ್ಕೆ ಅನುಮತಿ ನೀಡುವ ಸಂಕೇತವಾಗಿದೆ. ತಡರಾತ್ರಿಯವರೆಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಭೂತಾರಾಧನೆಯ ಇನ್ನೊಂದು ಭಾಗವಾದ ಗಗ್ಗರ ಸೇವೆಯ ಜೊತೆಗೆ, ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.
ಕಾಂತಾರ ಚಾಪ್ಟರ್ ಒನ್ ಸಿನಿಮಾ ಬಿಡುಗಡೆಗೂ ಮುನ್ನ ಅಂದರೆ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಕುಟುಂಬ ಭಾಗವಹಿಸಿತ್ತು. ರಿಷಬ್ ದಂಪತಿಗಳು, ತಮ್ಮ ಮಗನ ಹುಟ್ಟುಹಬ್ಬದ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ, ಸಿನಿಮಾಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಿರಲಿ ಎಂದು ಪ್ರಾರ್ಥನೆ ಸಲ್ಲಿಸಿತ್ತು.
