ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು; ದಾವಣಗೆರೆ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಖಚಿತ ಎಂದ ಸಾಧಿಕ್ ಪೈಲ್ವಾನ್!

ಹೈಲೈಟ್ಸ್‌:

  • ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು; ಉಪ ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆ ಮಾಡುವೆ ಎಂದ ಸಾಧಿಕ್ ಪೈಲ್ವಾನ್.
  • ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್‌ಗೆ ಬಂಡಾಯ ಬಿಸಿ.
  • ಕಾಂಗ್ರೆಸ್ ಪಕ್ಷ ಮತ್ತು ಶಾಮನೂರು ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಮುಸ್ಲಿಂ ಮುಖಂಡರು.

ದಾವಣಗೆರೆ: ” ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು. ನಾನು ಈ ಬಾರಿ ಉಪ ಚುನಾವಣೆಗೆ ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ” ಎಂದು ಮುಸ್ಲಿಂ ಸಮುದಾಯದ ಮುಖಂಡ ಸಾಧಿಕ್ ಪೈಲ್ವಾನ್ ಹೇಳಿದ್ದಾರೆ. ಇನ್ನೊಂದೆಡೆ ನಗರದಲ್ಲಿ ಮುಸ್ಲಿಂ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಬಂಡಾಯ ಬಿಸಿ ಮುಟ್ಟಲಿದೆ.

ಕಾಂಗ್ರೆಸ್‌ ಟಿಕೆಟ್‌ ಸಮರ್ಥ್‌ ಶಾಮನೂರಿಗೆ ಘೋಷಣೆಯಾದ ಬೆನ್ನಲ್ಲೆ ಸ್ಥಳೀಯ ಮುಸ್ಲಿಂ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಾಧಿಕ್ ಪೈಲ್ವಾನ್‌ ಕಾಂಗ್ರೆಸ್ ಪಕ್ಷ ಮತ್ತು ಶಾಮನೂರು ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ್ದಾರೆ.

ಭಾನುವಾರ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿದ ಸಾಧಿಕ್‌ ಪೈಲ್ವಾನ್‌, ” ಸ್ವಾತಂತ್ರ್ಯ ಬಂದಾಗಿನಿಂದಲೂ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಿಗೆ (ಮುಸ್ಲಿಮರಿಗೆ) ಟಿಕೆಟ್ ನೀಡದೆ ಅನ್ಯಾಯ ಮಾಡಲಾಗುತ್ತಿದೆ. “ಮುಸ್ಲಿಮರು ಗೆಲ್ಲುವುದಿಲ್ಲ” ಎಂಬ ಕುಂಟು ನೆಪವನ್ನು ಕಾಂಗ್ರೆಸ್ ನಾಯಕರು ಪ್ರತಿ ಬಾರಿಯೂ ನೀಡುತ್ತಿದ್ದಾರೆ. ಇದು ಸಮುದಾಯಕ್ಕೆ ಮಾಡುವ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಸುಮಾರು 90 ಸಾವಿರ ಮುಸ್ಲಿಂ ಮತಗಳಿವೆ. ನಮ್ಮ ಮತಗಳನ್ನು ಪಡೆದುಕೊಂಡೇ ಇಷ್ಟು ವರ್ಷ ಅವರು ಗೆಲ್ಲುತ್ತಾ ಬಂದಿದ್ದಾರೆ. ಆದರೆ ಕೇವಲ ಶಾಮನೂರು ಕುಟುಂಬ ಅಷ್ಟೊಂದು ಹಠಕ್ಕೆ ಬಿದ್ದ ಮೇಲೆ ನಾವು ಯಾಕೆ ಸುಮ್ಮನಿರಬೇಕು?” ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯನ್ನು ತೋರಿಸಿ ಹೆದರಿಸುವ ತಂತ್ರ

ಬಿಜೆಪಿ ಬರುತ್ತದೆ ಎಂದು ಮುಸ್ಲಿಮರನ್ನು ಹೆದರಿಸಿ, ಅವರ ಮತಗಳನ್ನು ಪಡೆದು ಶಾಮನೂರು ಕುಟುಂಬ ಇಷ್ಟು ವರ್ಷ ರಾಜಕೀಯ ಮಾಡಿದೆ. ಇನ್ನು ಮುಂದೆ ಆ ಆಟ ನಡೆಯುವುದಿಲ್ಲ ಎಂದು ಅವರು ನೇರವಾಗಿ ಸವಾಲು ಹಾಕಿದ್ದಾರೆ.

“ನಾವು ಅಲ್ಲಾಹನಿಗೆ ಮಾತ್ರ ಹೆದರುತ್ತೇವೆ, ಭೂಮಿ ಮೇಲೆ ಯಾರಿಗೂ ಹೆದರುವುದಿಲ್ಲ” ಎಂದು ಹೇಳುತ್ತಾ, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಅಡಿಯಲ್ಲಿ ತಮಗೆ ಸ್ಪರ್ಧಿಸುವ ಪೂರ್ಣ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮಾಧ್ಯಮದವರಿಗೂ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕಿದೆ, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಬಂಡಾಯ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ. “ನಾನು ವಿಧಾನಸಭಾ ಸದಸ್ಯನಾಗಿ ವಿಧಾನಸೌಧದಲ್ಲಿ ಟೇಬಲ್ ಕುಟ್ಟಲು ಹೋಗುತ್ತಿದ್ದೇನೆ” ಎಂದು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸೋಮವಾರ ಬೆಳಿಗ್ಗೆ 11.30 ಕ್ಕೆಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಮುಸ್ಲಿಮರಿಗೆ ಕೈ ತಪ್ಪಿದ ಟಿಕೆಟ್: ಪ್ರತಿಭಟನೆ

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ನಗರದಲ್ಲಿ ಭಾನುವಾರ ಸಂಜೆ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ದಾವಣಗೆರೆ ನಗರದ ಅಖ್ತರ್ ರಜ್ಹಾ ವೃತ್ತದಲ್ಲಿ ಜಮಾಯಿಸಿದ ಮುಸ್ಲಿಂ ಯುವಕರು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ತಡೆದು, ಕಪ್ಪು ಬಾವುಟ ಹಿಡಿದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ಯುವಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 65 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪನವರ ನಿರಂತರ ಗೆಲುವಿಗೆ ನಮ್ಮ ಸಮುದಾಯದವರ ಪಾತ್ರ ದೊಡ್ಡದಿದೆ. ಕಳೆದ ಬಾರಿ ಸ್ವತಃ ಶಾಮನೂರು ಶಿವಶಂಕರಪ್ಪನವರೇ ಇದೇ ನನ್ನ ಕೊನೆ ಚುನಾವಣೆ ಮುಂದಿನ ಬಾರಿ ಮುಸ್ಲಿಮರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಆದರೆ, ಅವರ ನಿಧನದ ನಂತರ ಎದುರಾಗಿರುವ ಉಪಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಟಿಕೆಟ್ ನೀಡದೇ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ನಾಯಕರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *