ಹಿಂಡಲಗಾ ಕಾರಾಗೃಹದಲ್ಲಿ ರಾತ್ರಿ ಊಟ ಮಾಡದೆ ನಿದ್ರಿಸಿದ ವಿನಯ್ ಕುಲಕರ್ಣಿ
ಬೆಳಗಾವಿ: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಗುರುವಾರ ರಾತ್ರಿ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಕಳೆದಿದ್ದಾರೆ
ಧಾರವಾಡದಲ್ಲಿಯೇ ಊಟಮಾಡಿಕೊಂಡು ತಡರಾತ್ರಿ ಕಾರಾಗೃಹಕ್ಕೆ ಆಗಮಿಸಿದ್ದ ವಿನಯ ಕುಲಕರ್ಣಿ ಕಾರಾಗೃಹದಲ್ಲಿ ರಾತ್ರಿ ಊಟ ಮಾಡದೆ ನಿದ್ರೆ ಮಾಡಿದರು ಎಂದು ಕಾರಾಗೃಹ ಅಧಿಕಾರಿಗಳ ಮೂಲದಿಂದ ತಿಳಿದು ಬಂದಿದೆ.
16635 ವಿಚಾರಾಧೀನ ಕೈದಿ ನಂಬರ್ ಹೊಂದಿರುವ ವಿನಯ ಕುಲಕರ್ಣಿ ಅವರು ಜೈಲಿನ ಕ್ವಾರಂಟೈನ್ ಸೆಲ್‌ನಲ್ಲಿ ಇದ್ದಾರೆ.
ಶುಕ್ರವಾರ ಮುಂಜಾನೆ 4 ಗಂಟೆಗೆ ನಿದ್ರೆಯಿಂದ ಎದ್ದಿರುವ ವಿನಯ ಕುಲಕರ್ಣಿ ದಿನಪತ್ರಿಕೆಗಳನ್ನು ಓದಿದ್ದಾರೆ. ನಂತರ ಕಾರಾಗೃಹ ಸಿಬ್ಬಂದಿ ಸಾಮಾನ್ಯವಾಗಿ ಎಲ್ಲ ಕೈದಿಗಳಿಗೂ ನೀಡುವಂತೆ ಉಪ್ಪಿಟ್ಟು ಮತ್ತು ಚಹಾ ನೀಡಿದ್ದಾರೆ.
ವಿಚಾರಣೆ: ಒಂದು ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿರುವ ಧಾರವಾಡ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಶುಕ್ರವಾರ ಬೆಳಗ್ಗೆ 11:30 ಗಂಟೆಗೆ ಕಾರಾಗೃಹದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ ಕುಲಕರ್ಣಿ ಅವರ ವಿಚಾರಣೆ ನಡೆಸಲಿದೆ.
ಬಿಪಿ ಮಾತ್ರೆ ಮರೆತಿದ್ದರು: ಧಾರವಾಡದಿಂದ ಬೆಳಗಾವಿಗೆ ಹಿಂಡಲಗಾ ಕಾರಾಗೃಹಕ್ಕೆ ಬರುವ ಸಂದರ್ಭದಲ್ಲಿ ಮಾಜಿ ಶಾಸಕ ವಿನಯ ಕುಲಕರ್ಣಿ ಬಿಪಿ ಮಾತ್ರೆ ಮರೆತು ಬಂದಿದ್ದರು. ನಂತರ ಅವರ ಆಪ್ತ ಪ್ರಶಾಂತ ಕಕ್ಕೇರಿ ಮಾತ್ರೆ ಕೊಡಲು ಜೈಲಿಗೆ ಬಂದರಾದರೂ ಅವರನ್ನು ಒಳಗೆ ಬಿಡದಿದ್ದಾಗ ಪೊಲೀಸರ ಮೂಲಕ ಮಾತ್ರೆಗಳನ್ನು ವಿನಯ ಕುಲಕರ್ಣಿ ಅವರಿಗೆ ತಲುಪಿಸಲಾಯಿತು.